ಕಣಿವೆ, ಜ. ೨೧: ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ರೈಲ್ವೆ ಸಂಪರ್ಕ ನೀಡುವ ವಿಚಾರದಲ್ಲಿ ಸಂಸದರು ನೀಡಿರುವ ಹೇಳಿಕೆ ಹಾಸ್ಯಾಸ್ಪದ ಎಂದು ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಡಗು ಜಿಲ್ಲೆಗೆ ರೈಲು ಸಂಪರ್ಕ ಅತ್ಯಗತ್ಯವಿದೆ. ಕೊಡಗಿನ ಕುಶಾಲನಗರದ ಕೂಡ್ಲೂರು ಕೈಗಾರಿಕಾ ಪ್ರದೇಶಕ್ಕೆ ರೈಲು ಸಂಪರ್ಕ ತ್ವರಿತವಾಗಿ ಆಗಬೇಕಿದೆ. ಕೈಗಾರಿಕಾ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಸಿದ್ಧ ಕಾಫಿಯನ್ನು ರಫ್ತು ಮಾಡುವ ಕಾರಣ, ರೈಲ್ವೆ ಸಂಪರ್ಕ ಅತ್ಯಂತ ಉಪಯುಕ್ತವಾಗಿದೆ. ಆದರೆ ಈ ಹಿಂದಿನ ಸಂಸದರು ಹಾಗೂ ಶಾಸಕರು ಕಳೆದ ಹಲವು ವರ್ಷಗಳಿಂದಲೂ ಕೊಡಗಿಗೆ ರೈಲು ತರುವುದಾಗಿ ಕೇವಲ ಹೇಳಿಕೆ ನೀಡಿದ್ದು, ವಾಸ್ತವವಾಗಿ ಕೊಡಗಿಗೆ ರೈಲು ಯಾವಾಗ ಬರುತ್ತದೆ ಎಂದು ಚಂದ್ರಕಲಾ ಪ್ರಶ್ನಿಸಿದರು. ಸಂಸದ ಯದುವೀರ್ ಅವರು ಕೇಂದ್ರ ಸರ್ಕಾರದ ಜೊತೆ ವ್ಯವಹರಿಸಿ ಮೊದಲು ರೈಲು ಯೋಜನೆಗೆ ಅನುಮೋದನೆ ತರಲಿ. ದಿ.ಗುಂಡೂರಾವ್ ಅವರ ರೈಲ್ವೆ ಯೋಜನೆಯ ಕನಸನ್ನು ನನಸು ಮಾಡಲಿ. ಆಮೇಲೆ ರಾಜ್ಯದತ್ತ ಬೊಟ್ಟು ಮಾಡಲಿ ಎಂದರು. ಈ ಹಿಂದೆ ಕೊಡಗನ್ನು ಪ್ರತಿನಿಧಿಸಿದ್ದ ಕುಶಾಲನಗರದ ಅಳಿಯನೂ ಆಗಿರುವ ಸದಾನಂದಗೌಡ ಕೇಂದ್ರ ರೈಲ್ವೆ ಮಂತ್ರಿಯಾಗಿದ್ದಾಗ ಕೊಡಗು ಜಿಲ್ಲೆಗೆ ರೈಲು ಯೋಜನೆ ತರಬಹುದಿತ್ತು. ಆದರೆ ಬಿಜೆಪಿಗರು ಪುಕ್ಕಟೆ ಪ್ರಚಾರ ಪಡೆಯುವುದನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರದಿಂದ ಕೊಡಗಿಗೆ ವಿಶೇಷ ಪ್ಯಾಕೇಜ್ ತರಲಿ ಎಂದು ಒತ್ತಾಯಿಸಿದರು.