ನವದೆಹಲಿ, ಜ. ೧೩: ಭಾರತದ ಕಾಫಿಯ ಎರಡನೇ ಅತಿದೊಡ್ಡ ಖರೀದಿದಾರ ರಾಷ್ಟçವಾಗಿ ರಷ್ಯಾ ಹೊರಹೊಮ್ಮಿದೆ. ಕಳೆದ ವರ್ಷ ಜರ್ಮನಿ ಎರಡನೇ ಸ್ಥಾನದಲ್ಲಿದ್ದು ರಷ್ಯಾ ಮೂರನೇ ಸ್ಥಾನದಲ್ಲಿತ್ತು. ಅಮೇರಿಕಾ ಅದ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯದ್ವಾ ತದ್ವಾ ತೆರಿಗೆ ಹೇರುವ ಮೂಲಕ ಭಾರತದ ರಫ್ತಿಗೆ ಹೊಡೆತ ನೀಡಿದ ಬೆನ್ನಲ್ಲೇ ಭಾರತ ಹಾಗೂ ರಷ್ಯಾ ನಡುವೆ ದ್ವಿಪಕ್ಷೀಯ ಬಾಂಧವ್ಯ ಹಾಗೂ ವಾಣಿಜ್ಯ ವಹಿವಾಟು ಏರಿಕೆ ದಾಖಲಿಸಿದೆ. ೨೦೨೫ ರಲ್ಲಿ ಭಾರತಕ್ಕೆ ಕಚ್ಚಾ ತೈಲದ ಪ್ರಮುಖ ಪೂರೈಕೆದಾರ ರಷ್ಯಾ, ಕಳೆದ ವರ್ಷ ಭಾರತೀಯ ಕಾಫಿಯ ಆಮದನ್ನು ತೀವ್ರವಾಗಿ ಹೆಚ್ಚಿಸಿಕೊಂಡಿದೆ.
೨೦೨೫ ರಲ್ಲಿ, ಭಾರತದ ಒಟ್ಟು ಕಾಫಿ ರಫ್ತು ಶೇ. ೨೨ ರಷ್ಟು ಹೆಚ್ಚಾಗಿ ಮೊದಲ ಬಾರಿಗೆ ಇನ್ನೂರು ಬಿಲಿಯನ್ ಅಮೇರಿಕನ್ ಡಾಲರ್ (ಸುಮಾರು ೧೮ ಸಾವಿರ ಕೋಟಿ ರೂಪಾಯಿಗಳು) ಗಡಿ ದಾಟಿದೆ. ಕಾಫಿ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ, ರಫ್ತು ಗಳಿಕೆಯು ೨೦೨೪ ರಲ್ಲಿ ೧೬೭.೯ ಬಿಲಿಯನ್‌ನಿಂದ ೨೦೨೫ ರಲ್ಲಿ ೨೦೫.೮ ಬಿಲಿಯನ್‌ಗೆ ಏರಿಕೆ ದಾಖಲಿಸಿದೆ. ಪ್ರತಿ ಟನ್‌ನ ಸರಾಸರಿ ರಫ್ತು ಬೆಲೆಯೂ ಗಮನಾರ್ಹವಾಗಿ ಏರಿಕೆ ದಾಖಲಿಸಿದ್ದು , ರೂ. ೩.೪೮ ಲಕ್ಷದಿಂದ ರೂ. ೪.೬೫ ಲಕ್ಷ ರೂಪಾಯಿಗಳಿಗೆ ಏರಿಕೆ ದಾಖಲಾಗಿದೆ. ಇದರ ಪರಿಣಾಮವಾಗಿ, ರೂಪಾಯಿಯಲ್ಲಿ ರಫ್ತು ಆದಾಯವು ಶೇ. ೨೭ ರಷ್ಟು ಹೆಚ್ಚಾಗಿದೆ. ಕಾಫಿ ಮೌಲ್ಯ ಹೆಚ್ಚಾಗಿದ್ದರೂ ಒಟ್ಟಾರೆ ರಫ್ತು ಪ್ರಮಾಣ ಕಡಿಮೆಯಾಗಿದ್ದು ಕಾಫಿಯ ಮೌಲ್ಯ ಗಣನೀಯ ಏರಿಕೆ ದಾಖಲಿಸಿರುವುದೇ ಇದಕ್ಕೆ ಕಾರಣವಾಗಿದೆ.
೨೦೨೫ ರಲ್ಲಿ ರಫ್ತು ಮಾಡಲಾದ ಒಟ್ಟು ಕಾಫಿ ಪ್ರಮಾಣವು ಶೇ. ೪.೫ ರಷ್ಟು ಕುಸಿದು ೩.೪೮ ಲಕ್ಷ ಟನ್‌ಗಳಿಗೆ ತಲುಪಿದ್ದು, ೨೦೨೪ ರಲ್ಲಿ ರಫ್ತು ೪.೦೨ ಲಕ್ಷ ಟನ್‌ಗಳಷ್ಟಿತ್ತು. ಇದು ಮೌಲ್ಯವರ್ಧಿತ ಕಾಫಿ ಉತ್ಪನ್ನಗಳಿಗೆ ಜಾಗತಿಕವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ.
ಆಮದು ಮಾಡಿಕೊಳ್ಳುವ ದೇಶಗಳಲ್ಲಿ, ಇಟಲಿ ಭಾರತೀಯ ಕಾಫಿಯ ಅತಿದೊಡ್ಡ ಗ್ರಾಹಕನಾಗಿ ಮುಂದುವರೆದಿದೆ. ಒಟ್ಟು ರಫ್ತಿನಲ್ಲಿ ೬೦,೬೬೮ ಟನ್‌ಗಳನ್ನು ಇಟಲಿಗೆ ರವಾನಿಸಲಾಗಿದೆ. ರಷ್ಯಾ ೩೧,೫೦೫ ಟನ್‌ಗಳ ಆಮದು ಮಾಡಿಕೊಳ್ಳುವ ಮೂಲಕ ಎರಡನೇ ಸ್ಥಾನಕ್ಕೆ ತಲುಪಿದೆ, ಆದರೆ ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ಜರ್ಮನಿ ೨೮,೮೪೦ ಟನ್‌ಗಳ ಆಮದಿನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಜರ್ಮನಿಗೆ ರಫ್ತು ಶೇ. ೩೨ ರಷ್ಟು ತೀವ್ರವಾಗಿ ಕುಸಿದಿದೆ, ಆದರೆ ರಷ್ಯಾಕ್ಕೆ ರಫ್ತು ಶೇ. ೨೦ ರಷ್ಟು ಹೆಚ್ಚಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬೆಲ್ಜಿಯಂ ನಂತರದ ಪ್ರಮುಖ ಆಮದು ರಾಷ್ಟçಗಳಾಗಿವೆ. ಭಾರತವು ಪ್ರಸ್ತುತ ಜಾಗತಿಕವಾಗಿ ಏಳನೇ ಅತಿದೊಡ್ಡ ಕಾಫಿ ಉತ್ಪಾದಕ ರಾಷ್ಟçವಾಗಿದೆ ಮತ್ತು ಐದನೇ ಅತಿದೊಡ್ಡ ರಫ್ತುದಾರ ರಾಷ್ಟçವಾಗಿದೆ. ಯುರೋಪಿಯನ್ ಒಕ್ಕೂಟವು ಭಾರತೀಯ ಕಾಫಿಗೆ ಪ್ರಮುಖ ಮಾರುಕಟ್ಟೆಯಾಗಿದ್ದು ಇದು ಒಟ್ಟು ರಫ್ತಿನಲ್ಲಿ ಗಣನೀಯ ಪಾಲನ್ನು ಹೊಂದಿದೆ. ಇನ್‌ಸ್ಟೆಂಟ್(ಕರಗುವ) ಕಾಫಿಯ ದೇಶೀಯ ಉತ್ಪಾದನೆ ಶೇ.೧೨ ರಷ್ಟು ಹೆಚ್ಚಾಗಿ ೪೬,೯೫೪ ಟನ್‌ಗಳಿಗೆ ತಲುಪಿದೆ. ಆಮದು ಮಾಡಿಕೊಂಡ ಹಸಿರು ಕಾಫಿ ಬೀಜಗಳಿಂದ ಉತ್ಪಾದಿಸುವ ಇನ್‌ಸ್ಟೆಂಟ್ ಕಾಫಿಯ ಮರು-ರಫ್ತು ೧.೦೭ ಲಕ್ಷ ಟನ್‌ಗಳಿಂದ ೧.೦೬ ಲಕ್ಷ ಟನ್‌ಗಳಿಗೆ ಸಣ್ಣ ಇಳಿಕೆ ಕಂಡಿದೆ. ಒಟ್ಟಾರೆಯಾಗಿ, ಇನ್‌ಸ್ಟಂಟ್ ಕಾಫಿಯ ಮರು-ರಫ್ತು ಶೇ.೨.೬೮ ರಷ್ಟು ಹೆಚ್ಚಾಗಿ ೧.೫೩ ಲಕ್ಷ ಟನ್‌ಗಳಿಗೆ ತಲುಪಿದೆ, ಹಿಂದಿನ ವರ್ಷದಲ್ಲಿ ಇದು ೧.೪೯ ಲಕ್ಷ ಟನ್ ಆಗಿತ್ತು.
ಕರ್ನಾಟಕವು ಭಾರತೀಯ ಕಾಫಿಯ ತೊಟ್ಟಿಲು ಆಗಿದ್ದು, ಒಟ್ಟು ಉತ್ಪಾದನೆಯ ಸುಮಾರು ೭೦ ಪ್ರತಿಶತದಷ್ಟು ಕೊಡುಗೆ ನೀಡುತ್ತದೆ. ಈ ಉತ್ಪಾದನೆಯ ಸುಮಾರು ೩೫ ರಷ್ಟು ಪ್ರತಿಶತ ಕೊಡಗು ಜಿಲ್ಲೆಯಿಂದ ಬರುತ್ತದೆ, ೨೦-೨೫ ಪ್ರತಿಶತ ಚಿಕ್ಕಮಗಳೂರಿನಲ್ಲಿ ಉತ್ಪಾದಿಸಲಾಗುತ್ತದೆ. ಕೇರಳವು ೨೦ ಪ್ರತಿಶತ ಪಾಲನ್ನು ಹೊಂದಿರುವ ದೇಶದ ಎರಡನೇ ಕಾಫಿ ಉತ್ಪಾದಕ ರಾಜ್ಯವಾಗಿದೆ, ಇಡುಕ್ಕಿ ಮತ್ತು ವಯನಾಡ್ ಪ್ರಮುಖ ಉತ್ಪಾದನಾ ಕೇಂದ್ರಗಳಾಗಿವೆ. ತಮಿಳುನಾಡಿನ ನೀಲಗಿರಿ, ಆಂಧ್ರಪ್ರದೇಶ, ಒಡಿಶಾ, ಮಹಾರಾಷ್ಟç, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿಯೂ ಕಾಫಿಯನ್ನು ಬೆಳೆಯಲಾಗುತ್ತದೆ.
ಅಮೇರಿಕಾ ಆಹಾರ ಉತ್ಪನ್ನಗಳ ಆಮದಿನ ಮೇಲೆ ಶೇಕಡಾ ೫೦ ರಷ್ಟು ಸುಂಕವನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಅಮೇರಿಕಾದ ಅತಿದೊಡ್ಡ ಕಾಫಿ ಪೂರೈಕೆದಾರ ಬ್ರೆಜಿಲ್‌ನಿಂದ ಆಮದು ಕಡಿಮೆಯಾಗಿತ್ತು. ಪ್ರಸ್ತುತ, ಭಾರತದಿಂದ ಅಮೇರಿಕಕ್ಕೆ ಕೇವಲ ೮,೭೦೦ ಟನ್ ಕಾಫಿ ಮಾತ್ರ ರಫ್ತು ಮಾಡಲಾಗುತ್ತಿದೆ. ಅದಾಗ್ಯೂ, ಭಾರತ- ಅಮೇರಿಕ ವ್ಯಾಪಾರ ಒಪ್ಪಂದವು ಕಾರ್ಯರೂಪಕ್ಕೆ ಬಂದರೆ ಮತ್ತು ಸುಂಕಗಳನ್ನು ಶೇ. ೧೫-೨೦ ಕ್ಕೆ ಇಳಿಸಿದರೆ, ಅಮೇರಿಕಕ್ಕೆ ಕಾಫಿ ರಫ್ತು ಗಮನಾರ್ಹವಾಗಿ ಹೆಚ್ಚಾಗಬಹುದು ಎಂದು ರಫ್ತುದಾರರು ನಂಬಿದ್ದಾರೆ.
-ಕೋವರ್‌ಕೊಲ್ಲಿ ಇಂದ್ರೇಶ್