(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಜ. ೧೪: ೨೦೨೫ರಲ್ಲಿ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆಯು ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕುಸಿತ ಕಂಡಿದೆ. ೨೦೨೪ಕ್ಕೆ ಹೋಲಿಸಿದರೆ ೨೦೨೫ರಲ್ಲಿ ೨.೧೦ ಲಕ್ಷದಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಕಡಿಮೆಯಾಗಿದ್ದಾರೆ. ಪ್ರವಾಸೋದ್ಯಮ ಇಲಾಖೆ ದಾಖಲೆ ಪ್ರಕಾರ ೨೦೨೪ರಲ್ಲಿ ಜಿಲ್ಲೆಯ ತಾಣಗಳಿಗೆ ೪೫,೭೨,೭೯೦ ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. ೨೦೨೫ರಲ್ಲಿ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಅರ್ಧಕೋಟಿ ದಾಟಬಹುದೆಂದು ನಿರೀಕ್ಷಿಸಲಾಗಿತ್ತು.

ಆದರೆ ೨೦೨೫ರಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ವಿದೇಶಿಗರೂ ಸೇರಿ ೪೩,೬೨,೩೩೨ ಪ್ರವಾಸಿಗರು ಭೇಟಿ ನೀಡಿದ್ದಾರೆ. ೨೦೨೩ರಲ್ಲಿಯೇ ಜಿಲ್ಲೆಗೆ ೪೩,೬೯,೫೦೭ ಮಂದಿ ಪ್ರವಾಸಿಗರು ಭೇಟಿ ನೀಡಿದ್ದು, ೨೦೨೫ರಲ್ಲಿ ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

ಈ ಅಂಕಿ ಅಂಶವು, ಕೇವಲ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆಯಾಗಿದೆಯಷ್ಟೆ ಹೊರತು, ಜಿಲ್ಲೆಗೆ ಭೇಟಿ ನೀಡಿ ರೆಸಾರ್ಟ್-ಹೊಟೇಲ್‌ಗಳಲ್ಲಿ ತಂಗಿ ಅಲ್ಲೇ ಕಾಲ ಕಳೆಯುವವರ ಸಂಖ್ಯೆ ಇದರಲ್ಲಿ ಸೇರ್ಪಡೆಯಾಗಿಲ್ಲ.

ಜಿಲ್ಲೆಗೆ ಪ್ರತೀ ವರ್ಷಾಂತ್ಯ ಡಿಸೆಂಬರ್ ತಿಂಗಳಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಸಾಮಾನ್ಯವಾಗಿ ಹೊಸ ವರ್ಷ ಆಚರಿಸಲು ಮತ್ತು ಡಿಸೆಂಬರ್ ತಿಂಗಳ ಕೊನೆಯ ವಾರ ಸಾಲು ಸಾಲು ರಜೆಗಳು ಇರುವುದರಿಂದ ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದುಬರುತ್ತದೆ.ಅದಲ್ಲದೇ ಜಿಲ್ಲೆಯ ಬಹುತೇಕ ರೆಸಾರ್ಟ್, ಹೋಂ-ಸ್ಟೇ, ಹೊಟೇಲ್‌ಗಳು ಸಂಪೂರ್ಣ ಬುಕ್ ಆಗಿರುತ್ತವೆ. ಆದರೆ ಪ್ರಸ್ತುತ ವರ್ಷ ಈ ಸಂಖ್ಯೆಯೂ ಕಡಿಮೆಯಾಗಿರುವುದು ಅಂಕಿ-ಅAಶಗಳಿAದ ತಿಳಿದು ಬರುತ್ತಿದೆ.

೨೦೨೪ರ ಡಿಸೆಂಬರ್ ತಿಂಗಳಲ್ಲಿ ೮,೦೧,೨೬೯ ಮಂದಿ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ೨೦೨೫ರ ಡಿಸೆಂಬರ್ ತಿಂಗಳಲ್ಲಿ ೫,೫೨,೦೭೨ ಮಂದಿ ಪ್ರವಾಸಿಗರು ಮಾತ್ರ ಭೇಟಿ ನೀಡಿದ್ದು, ಸಂಖ್ಯೆಯಲ್ಲಿ ಗಣನೀಯವಾಗಿ ೨.೪೯ ಲಕ್ಷದಷ್ಟು ಇಳಿಕೆಯಾಗಿದೆ.

೨೦೨೩ರ ಡಿಸೆಂಬರ್ ತಿಂಗಳಲ್ಲಿ ೫,೮೨,೯೦೬ ಮಂದಿ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದು, ಮೂರು ವರ್ಷಗಳಲ್ಲಿ ೨೦೨೪ರಲ್ಲಿಯೇ ಹೆಚ್ಚಿನ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿರುವುದಾಗಿ ದಾಖಲಾಗಿದೆ.

ಪ್ರವಾಸಿಗರ ‘ಫೇವರೇಟ್ ಸ್ಪಾಟ್’ ರಾಜಾಸೀಟ್

ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿರುವ ರಾಜಾಸೀಟ್, ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ೨೦೨೩ರಲ್ಲೂ ಕೂಡ ರಾಜಾಸೀಟ್ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ತಾಣಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ೨೦೨೪ರಲ್ಲಿ ಕೂಡ ರಾಜಾಸೀಟ್‌ಗೆ ಇತರ ತಾಣಗಳಿಗೆ ಹೋಲಿಸಿದರೆ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು. ೨೦೨೫ರಲ್ಲಿ ೭,೬೩,೪೯೪ ಮಂದಿ ಪ್ರವಾ ಸಿಗರು ರಾಜಾಸೀಟ್‌ಗೆ ಭೇಟಿ ನೀಡಿದ್ದಾರೆ. ೨೦೨೪ಕ್ಕೆ ಹೋಲಿಸು ವುದಾದರೆ ೨೦೨೫ರಲ್ಲಿ ರಾಜಾಸೀಟ್‌ಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ೨.೨೭ ಲಕ್ಷದಷ್ಟು ಕುಸಿತ ಕಂಡಿದೆ. ಪ್ರವಾಸಿಗರ ಅಚ್ಚು ಮೆಚ್ಚಿನ ತಾಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನÀವನ್ನು ಕುಶಾಲ ನಗರದ ನಿಸರ್ಗಧಾಮ ಪಡೆದಿದೆ. ೨೦೨೪ರಲ್ಲಿ ನಿಸರ್ಗಧಾಮಕ್ಕೆ ೫,೯೮,೬೦೫ ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. ೨೦೨೫ರಲ್ಲಿ ೬,೦೬,೮೮೬ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ದುಬಾರೆಗೆ ೪,೧೭,೦೭೬, ಹಾರಂಗಿಗೆ ೩,೩೪,೯೨೧, ಅಬ್ಬಿಫಾಲ್ಸ್ಗೆ ೨,೮೧,೬೯೮ ಮಂದಿ, ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ೫೧,೨೩೯ ಮಂದಿ ಹಾಗೂ ಮಾಂದಲ್‌ಪಟ್ಟಿಗೆ ೪೧,೬೯೭ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ.