ಮಡಿಕೇರಿ, ಜ. ೧೪: ವಿದ್ಯಾರ್ಥಿಗಳು ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವದರೊಂದಿಗೆ ಅಧ್ಯಯನ ಮಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಕರೆ ನೀಡಿದರು.
ಇಲ್ಲಿನ ಬಾಲಕರ ಬಾಲಭವನಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದಿನಪತ್ರಿಕೆ ಓದಬೇಕು. ಗ್ರಂಥಾಲಯದ ಸೌಲಭ್ಯ ಪಡೆದು ಒಳ್ಳೆಯ ಪುಸ್ತಕಗಳ ಅಧ್ಯಯನ ಮಾಡಬೇಕೆಂದು ಹೇಳಿದರು.
ಬಾಲಕರ ಬಾಲಮಂದಿರದಲ್ಲಿರುವ ಮಕ್ಕಳಿಂದ ವಿದ್ಯಾಭ್ಯಾಸ, ಊಟೋಪಚಾರ, ಬಿಸಿನೀರು ವ್ಯವಸ್ಥೆ, ಗ್ರಂಥಾಲಯ ಸೌಲಭ್ಯ ಮತ್ತಿತರ ಬಗ್ಗೆ ಮಾಹಿತಿ ಪಡೆÀದು ಕುಂದುಕೊರತೆಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಸಲಹೆ ಮಾಡಿದರು. ಮೆನು ಪ್ರಕಾರ ಗುಣಮಟ್ಟದ ಆಹಾರ ಪೂರೈಸಬೇಕು. ಸ್ವಚ್ಛತೆಗೆ ಒತ್ತು ನೀಡಬೇಕು. ಪ್ರತೀ ತಿಂಗಳು ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತೇಜಿಸಬೇಕು ಎಂದು ಸಂಬAಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪಾಠದ ಜೊತೆಗೆ ಆಟ ಇರಬೇಕು. ಹೆಚ್ಚು ಅಧ್ಯಯನ ಮಾಡುವುದರಿಂದ ಉನ್ನತ ವ್ಯಾಸಂಗ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನ ಇರಬೇಕು. ಲಭ್ಯವಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ವೃತ್ತಿಪರ ಶಿಕ್ಷಣ ಮಾಡುವತ್ತ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ಕೊರಗಬಾರದು. ಛಲ ಮತ್ತು ಆತ್ಮವಿಶ್ವಾಸ ಇದ್ದಲ್ಲಿ ಯಶಸ್ಸುಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸತತ ಪ್ರಯತ್ನ ಅಗತ್ಯ ಎಂದು ಹೇಳಿದರು.
ಇಂದಿನ ಆಧುನಿಕ ಯುಗದಲ್ಲಿ ಬುದ್ದಿವಂತಿಕೆಗೆ ಆದ್ಯತೆ ಇದೆ. ಆ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ಅಗತ್ಯ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಗಿರಿಜನ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳು ಮತ್ತು ಮೊರಾರ್ಜಿ ದೇಸಾಯಿ, ಏಕಲವ್ಯ ವಸತಿ ಶಾಲೆಗಳ ವ್ಯಾಪ್ತಿಯಲ್ಲಿ ಮೆನು ಪ್ರಕಾರ ಗುಣಮಟ್ಟದ ಆಹಾರ ನೀಡಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ದಿನಪತ್ರಿಕೆಯನ್ನು ಕಡ್ಡಾಯವಾಗಿ ತರಿಸಬೇಕು. ವಿದ್ಯಾರ್ಥಿಗಳು ದಿನಪತ್ರಿಕೆಯನ್ನು ಓದಲು ಉತ್ತೇಜಿಸಬೇಕು. ಗ್ರಂಥಾಲಯ ಬಳಕೆಗೆ ಅವಕಾಶ ಮಾಡಬೇಕು ಎಂದು ಇದೇ ಸಂದರ್ಭ ಹೇಳಿದರು. ಈ ಸಂದರ್ಭ ಮಕ್ಕಳ ರಕ್ಷಣಾಧಿಕಾರಿ ಎಸ್. ಹೊನ್ನೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಮಕ್ಕಳ ರಕ್ಷಣಾಧಿಕಾರಿಗಳಾದ ಸಚಿನ್ ಸುವರ್ಣ, ಇರ್ಷಾದ್, ಸಂಸ್ಥೆಯ ಮೇಲ್ವಿಚಾರಕರಾದ ಸತ್ಯಭಾಮ, ಪವಿತ್ರ ಹಾಗೂ ಇತರರು ಇದ್ದರು.