ಮಡಿಕೇರಿ ಜ.೧೧ : ಶತಮಾನೋತ್ಸವ ಆಚರಣೆ ಎಂಬದು ಮಹತ್ವದ ವಿಚಾರವಾಗಿದ್ದು, ಆ ಸಂಸ್ಥೆಯ ಯಶಸ್ಸಿನ ಮೈಲಿಗಲ್ಲು ಎನಿಸಿಕೊಳ್ಳುತ್ತದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಉಳಿಯಲು ಮತ್ತು ಆರ್ಥಿಕ ಕ್ಷೇತ್ರ ಬಲಗೊಳ್ಳಲು ಸಹಕಾರಿ ಸಂಸ್ಥೆಗಳ ಕೊಡುಗೆ ದೊಡ್ಡ ಪ್ರಮಾಣದಲ್ಲಿ ಸಹಕಾರಿಯಾಗಿದೆ ಎಂದು ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಅಭಿಪ್ರಾಯಪಟ್ಟರು.
ಮಡಿಕೇರಿಯ ಗೌಡ ಸಮಾಜದಲ್ಲಿ ನಡೆದ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದ ‘ಶತಸಂಭ್ರಮ’ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಸಂಸ್ಥೆಯೊAದು ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ದೊಡ್ಡ ಮೈಲಿಗಲ್ಲಾಗಿದೆ. ಸಂಘದ ಸ್ಥಾಪಕ ಅಧ್ಯಕ್ಷ ಪಟ್ಟಡ ಎಂ.ಉತ್ತಪ್ಪ ಹಾಗೂ ಸ್ಥಾಪಕ ಕಾರ್ಯದರ್ಶಿ ತೇಲಪಂಡ ಎಂ.ಕಾರ್ಯಪ್ಪ ಅವರುಗಳನ್ನು ಸ್ಮರಿಸಿ ಗೌರವ ಅರ್ಪಿಸಲೇಬೇಕಾಗಿದೆ. ಸಂಸ್ಥೆಯ ಯಶಸ್ಸಿಗೆ ಈ ಹಿಂದಿನ ಮತ್ತು ಈಗಿನ ಆಡಳಿತ ಮಂಡಳಿಯ ಕೊಡುಗೆಯೂ ಇದೆ ಎಂದರು.
ದೇಶದ ಪ್ರಜಾಪ್ರಭುತ್ವದ ಉಳಿವಿಗೆ ಆರ್ಥಿಕ ಬಲ ಮುಖ್ಯವಾಗುತ್ತದೆ, ಸಹಕಾರಿ ಸಂಸ್ಥೆಗಳು ಆರ್ಥಿಕ ಶಕ್ತಿಯನ್ನು ಹೆಚ್ಚಿಸುತ್ತಾ ಬಂದಿವೆ. ಇಂದಿನ ಆಧುನಿಕ ಕಾಲದಲ್ಲೂ ಕೊಡಗಿನ ಸಹಕಾರಿ ಕ್ಷೇತ್ರ ಇತರರಿಗೆ ಮಾದರಿಯಾಗಿದೆ, ಇಲ್ಲಿನ ಸಹಕಾರಿಗಳಿಂದ ಕಲಿಯುವುದು ಬಹಳಷ್ಟಿದೆ. ಸಹಕಾರಿ ಸಂಘಗಳು ಕೇವಲ ಒಂದು ಸಂಸ್ಥೆಯಲ್ಲ, ಸಮಾಜವನ್ನು ಉತ್ತಮ ರೀತಿಯಲ್ಲಿ ಕಟ್ಟಬಹುದಾದ ಸಂಘಟನೆಯೂ ಹೌದು ಎಂದರು.
೨೦೨೫ರಲ್ಲಿ ಕೇಂದ್ರ ಸರಕಾರ ನೂತನ ಸಹಕಾರಿ ಕಾಯ್ದೆಯನ್ನು ಜಾರಿಗೆ ತಂದಿದೆ. ಇದೇ ಪ್ರಥಮ ಬಾರಿಗೆ ಸಹಕಾರ ಮಂತ್ರಾಲಯ ರಚಿಸಿ ಗೃಹ ಸಚಿವ ಅಮಿತ್ ಶಾ ಅವರೇ ಸಹಕಾರ ಸಚಿವರಾಗಿ ಹಲವು ಸುಧಾರಣೆಗಳನ್ನು ತರಲು ಮುಂದಾಗಿದ್ದಾರೆ. ಈಗಾಗಲೇ ೧೭ ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದ್ದು, ೨೦೨೯ ರ ವೇಳೆಗೆ ೨ಲಕ್ಷ ಸಂಘಗಳು ಡಿಜಿಟಲೀಕರಣಗೊಳ್ಳಲಿವೆ. ಬೇರೆ ಬೇರೆ ಕ್ಷೇತ್ರದವರಿಗೂ ಸಹಕಾರಿ ಸಂಸ್ಥೆಗಳಲ್ಲಿ ಅವಕಾಶ ನೀಡಲಾಗುತ್ತಿದೆ. ಕಾಲೇಜುಗಳಲ್ಲಿ ಸಹಕಾರಿ ಕೋರ್ಸ್ಗಳು ಅರಿವು ಮೂಡಿಸುತ್ತಿವೆ. ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು, ಸಹಕಾರಿ ಚಳುವಳಿಯ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಯದುವೀರ್ ಒಡೆಯರ್ ಕರೆ ನೀಡಿದರು.
ಕೇಂದ್ರದ ಸರಕಾರದ ಯೋಜನೆಗಳು ಕೊಡಗು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಕುಶಾಲನಗರ ಮತ್ತು ಸಂಪಾಜೆ ನಡುವೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ಹೆದ್ದಾರಿ ವ್ಯಾಪ್ತಿಯಲ್ಲಿ ೧೨ ತಡೆಗೋಡೆಗಳು ನಿರ್ಮಾಣಗೊಳ್ಳಲಿವೆ ಎಂದರು.
ಹಿರಿಯರಿಗೆ ಗೌರವ ಶ್ಲಾಘನೀಯ : ಮಂತರ್
ಹಿರಿಯ ನೂರು ಸಹಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಹಿರಿಯರನ್ನು ಸ್ಮರಿಸುವ ಮತ್ತು ಗೌರವಿಸುವ ಕಾರ್ಯ ಶ್ಲಾಘನೀಯ. ಹಿರಿಯರಾದ
ಪಟ್ಟಡ ಎಂ.ಉತ್ತಪ್ಪ ಹಾಗೂ ತೇಲಪಂಡ ಎಂ.ಕಾರ್ಯಪ್ಪ ಅವರು ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ೧೯೨೫ ರಲ್ಲಿ ತಮ್ಮ ಚಿಂತನೆಯನ್ನು ಅನುಷ್ಠಾನಗೊಳಿಸಿ ಶ್ರಮಿಸಿದ ಪರಿಣಾಮ ಸಂಘ ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದು ಹೇಳಿದರು.
ಸಂಘದ ಸದಸ್ಯರಿಗೆ ಹಾಗೂ ಹಿರಿಯ ಸದಸ್ಯರಿಗೆ ಏನೇ ಸಮಸ್ಯೆ ಎದುರಾದರೂ ತಕ್ಷಣ ಸ್ಪಂದಿಸುವ ಕೆಲಸವನ್ನು ಆಡಳಿತ ಮಂಡಳಿ ಮಾಡಬೇಕು, ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.
ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಅವರು, ಶತಸಂಭ್ರಮ ಭವನ ನಿರ್ಮಾಣಕ್ಕೆ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಎಂಎಲ್‌ಸಿ ಅನುದಾನದಿಂದ ೫ ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ಸಹಕಾರಿ ಸಂಘಗಳು ದೇಶದ ಅಭಿವೃದ್ಧಿಗೆ ಸಹಕಾರಿಯಾಗಿವೆ, ಸಣ್ಣ ಪ್ರಮಾಣದ ಬಡ್ಡಿ ದರದಲ್ಲಿ ಸುಲಭ ರೀತಿಯಲ್ಲಿ ಸಾಲ ದೊರೆಯುತ್ತದೆ. ಸಂಘದ ಸದಸ್ಯರಿಗೆ ಎಲ್ಲಾ ಸೌಲಭ್ಯಗಳು ಲಭಿಸಲಿದೆ, ಮುಂದಿನ ಪೀಳಿಗೆಗೂ ಸಹಕಾರ ಕ್ಷೇತ್ರವನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಂದು ಸಂಸ್ಥೆಯ ಪ್ರಗತಿ ಸಾಧ್ಯವಾಗಲಿದೆ, ಆಡಳಿತ ಮಂಡಳಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಪರಿಣಾಮ ಸಂಘ ಶತಮಾನೋತ್ಸವವನ್ನು ಆಚರಿಸಿದೆ ಮತ್ತು ಲಾಭದ ಹಾದಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವುದೇ ಕ್ಷೇತ್ರದ ಯಶಸ್ಸಿಗೆ ದಾನಿಗಳ ಸಹಕಾರದ ಅಗತ್ಯವಿದೆ, ಸ್ವಾತಂತ್ರö್ಯ ಪೂರ್ವದಲ್ಲೇ ಕೊಡಗಿನಲ್ಲಿ ದಾನಿಗಳ ಸಹಕಾರವಿತ್ತು. ದಾನಿಗಳ ಸಹಕಾರದಿಂದ ಶಾಲೆಗಳು ಹಾಗೂ ಸಹಕಾರಿ ಕ್ಷೇತ್ರಗಳು ಬೆಳೆದಿವೆ ಎಂದು ಎಂ.ಪಿ.ಸುಜಾ ಕುಶಾಲಪ್ಪ ತಿಳಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜನಗೌಡ ಅವರು ವ್ಯಕ್ತಿ ಅಥವಾ ಒಂದು ಸಂಸ್ಥೆ ಬೆಳವಣಿಗೆ ಕಾಣಬೇಕಾದರೆ ಸ್ಥಾಪಕರ ಸ್ಮರಣೆ ಅಗತ್ಯ ಎಂದರು.
ಸಮಬಾಳು ಸಮಪಾಲು ಆದರ್ಶದಡಿ ಸರ್ವ ಜನಾಂಗವನ್ನು ತಲುಪುವ ಮತ್ತು ಒಗ್ಗೂಡಿಸಿ ಸಮಾಜವನ್ನು ಬೆಳೆಸುವ ಶಕ್ತಿ ಸಹಕಾರಿ ಚಳವಳಿಗಿದೆ. ಸಂಘ ನೂರು ವರ್ಷಗಳನ್ನು ಪೂರೈಸಿರುವುದರ ಹಿಂದೆ ಹಲವು ಕಷ್ಟ ನಷ್ಟ, ನೋವುಗಳಿರುತ್ತದೆ. ಮೈಸೂರು ವಲಯದ ಎರಡು ಸಹಕಾರ ಸಂಘಗಳು ಮಾತ್ರ ಶತಮಾನೋತ್ಸವವನ್ನು ಕಂಡಿವೆ. ಬ್ಯಾಂಕ್ ಗಳು ಗೌರವ ನೀಡುವುದಿಲ್ಲ ಎನ್ನುವ ಕಾರಣಕ್ಕಾಗಿ ಸಹಕಾರ ಚಳವಳಿಯ ಮೂಲಕ ಆರ್ಥಿಕ ಸೇವೆಯನ್ನು ಆರಂಭಿಸಲಾಯಿತು. ಸಿದ್ದನಗೌಡ ಅವರು ಸಹಕಾರಿ ಕ್ಷೇತ್ರದ ಪಿತಾಮಹರಾಗಿದ್ದಾರೆ. ಕೆಎಂಎಫ್ ನಂತಹ ಬೃಹತ್ ಸಂಸ್ಥೆಯನ್ನು ನೀಡಿದ ಹೆಮ್ಮೆ ಸಹಕಾರಿ ಕ್ಷೇತ್ರಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.
ಸಹಕಾರಿ ಕಾಯ್ದೆ ಜಾರಿಗೆ ಬರುವಲ್ಲಿ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಸಹಕಾರವೂ ಇದೆ. ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಅವರು ಸಹಕಾರಿ ಕ್ಷೇತ್ರಕ್ಕೆ ಯುವಕ, ಯುವತಿಯರು ಬರಬೇಕು ಎಂದು ಕರೆ ನೀಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯರಾಗಿರುವುದು ಸಂತಸ ತಂದಿದೆ. ಮಹಿಳೆಯರು ಇದ್ದಲ್ಲಿ ಆರ್ಥಿಕ ವ್ಯವಸ್ಥೆ ಸಮರ್ಪಕವಾಗಿರುತ್ತದೆ ಎಂದು ಜಿ.ನಂಜನಗೌಡ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಎಸ್.ಚೇತನ್ ಅವರು, ಸದಸ್ಯರೇ ಸಂಸ್ಥೆಯ ಜೀವಾಳವಾಗಿದ್ದಾರೆ. ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಕಾಳಜಿ ಸಂಘದ ಬೆಳವಣಿಗೆಗೆ ಕಾರಣವಾಗಿದೆ. ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಸಹಕಾರಿ ಕ್ಷೇತ್ರಕ್ಕೂ ಸೈ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಸಂಘದ ಸ್ಥಾಪಕ ಅಧ್ಯಕ್ಷ ಪಟ್ಟಡ ಎಂ.ಉತ್ತಪ್ಪ ಹಾಗೂ ಸ್ಥಾಪಕ ಕಾರ್ಯದರ್ಶಿ ತೇಲಪಂಡ ಎಂ.ಕಾರ್ಯಪ್ಪ ಅವರ ನಿಸ್ವಾರ್ಥ ಚಿಂತನೆ ಮತ್ತು ಶ್ರಮದ ಫಲವಾಗಿ ಸಂಘ ಇಂದು ಶತಮಾನೋತ್ಸವವನ್ನು ಆಚರಿಸಿದೆ. ಮಡಿಕೇರಿಯ ಹೃದಯ ಭಾಗದಲ್ಲಿ ೫೮ ಸೆಂಟ್ ಜಾಗವನ್ನು ಸಂಘ ಹೊಂದಿದೆ. ಸುಮಾರು ೫ ಕೋಟಿ ರೂ. ವೆಚ್ಚದಲ್ಲಿ ‘ಶತಸಂಭ್ರಮ’ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಸಂಘದ ಯಶಸ್ಸನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡುತ್ತೇವೆ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ ಅವರು ಮಾತನಾಡಿ ಸಂಘದ ಈ ಸಾಧನೆ ಇತಿಹಾಸ ಸೃಷ್ಟಿಸಿದೆ, ಹಿರಿಯರ ಹಾಗೂ ಆಡಳಿತ ನಡೆಸಿದವರ ಶ್ರಮದ ಫಲದಿಂದ ನೂರು ವರ್ಷ ಪೂರೈಸಿದೆ. ಇದು ಸಾಮಾನ್ಯ ಕೆಲಸವಲ್ಲ, ‘ಶತಸಂಭ್ರಮ ಭವನÀ’ ಯೋಜನೆ ಶೀಘ್ರ ಈಡೇರಲಿ ಎಂದು ಹಾರೈಸಿದರು.
ಮಂಗಳೂರಿನ ಕೆಐಒಸಿಎಲ್ ಲಿಮಿಟೆಡ್ ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ತೇಲಪಂಡ ಎಂ.ಕಾರ್ಯಪ್ಪ ಅವರು ಮಾತನಾಡಿ ನನ್ನ ಅಜ್ಜ ಕಾರ್ಯಪ್ಪ ಅವರು ಹಠವಾದಿ, ಹೊಸತನದ ಪ್ರವೃತ್ತಿ ಹೊಂದಿದ್ದರು. ಹೊಸ ಪ್ರಯೋಗದಲ್ಲಿ ಯಶಸ್ಸು ಕಾಣುತ್ತಿದ್ದರು, ಇದರ ಪರಿಣಾಮದಿಂದ ಈ ಸಂಸ್ಥೆ ಸ್ಥಾಪನೆಯಾಯಿತು ಎಂದು ತಿಳಿಸಿದರು.
ಕನ್ನಡಾಭಿಮಾನ ಹೊಂದಿದ್ದ ಅವರು ಭತ್ತದ ಕೃಷಿಕರಾಗಿದ್ದರು. ಮೊದಲ ಬಾರಿಗೆ ಕೇರಳದಿಂದ ಕಾಳುಮೆಣಸು ಬಳ್ಳಿಯನ್ನು ತಂದು ಹಾಲುಗುಂದದಲ್ಲಿ ಕೃಷಿ ಮಾಡಿದರು. ಇದನ್ನು ಇಲ್ಲಿ ಬೆಳೆಯಲು ಸಾಧ್ಯವಿಲ್ಲವೆಂದು ಕೆಲವು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಕಾಳುಮೆಣಸು ಕೃಷಿಯಲ್ಲಿ ಅವರು ಯಶಸ್ವಿಯಾದರು. ಇಂದು ಕಾಳುಮೆಣಸು ಒಂದು ಕ್ವಿಂಟಾಲ್ ನ ಬೆಲೆ ೭೦ ಸಾವಿರ ರೂ. ಆಗಿದೆ ಎಂದು ಗಮನ ಸೆಳೆದರು.
ಕಾರ್ಯಪ್ಪ ಅವರು ತಮ್ಮ ಲಾಭಕೋಸ್ಕರ ಯಾವುದನ್ನೂ ಮಾಡಿಲ್ಲ, ವಿದ್ಯಾ ಸಹಕಾರ ಸಂಘದ ಬೀಜವನ್ನಷ್ಟೇ ಬಿತ್ತಿದರು. ಶಿಕ್ಷಕರ ಪ್ರಾಮಾಣಿಕ ನಾಯಕತ್ವ ಇಷ್ಟು ದೊಡ್ಡ ಮಟ್ಟಕ್ಕೆ ಸಂಸ್ಥೆ ಬೆಳೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯರಾದ ಪಟ್ಟಡ ಎ.ಪೂವಣ್ಣ ಅವರು ಮಾತನಾಡಿ ಸಂಘದ ಸ್ಥಾಪಕ ಅಧ್ಯಕ್ಷ ಪಟ್ಟಡ ಎಂ.ಉತ್ತಪ್ಪ ಅವರನ್ನು ಸ್ಮರಿಸಿದರು. ಸಂಸ್ಥೆ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಸಿ.ನಟೇಶ ಅವರು ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನೂರು ವರ್ಷ ಸಾಗಿ ಬಂದ ಹಾದಿಯನ್ನು ವಿವರಿಸಿದರು.
ಭವನಕ್ಕೆ ಶಂಕುಸ್ಥಾಪನೆ
ಮುಖ್ಯಮAತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ‘ಶತಸಂಭ್ರಮ ಭವನ’ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜನಗೌಡ ಅವರು ಸೌಹಾರ್ದ ಸೌರಭ ಕಟ್ಟಡದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಹಿರಿಯ ಸಹಕಾರಿಗಳಿಗೆ ಸನ್ಮಾನ
ಸಭಾ ಕಾರ್ಯಕ್ರಮದಲ್ಲಿ ಹಿರಿಯ ನೂರು ಸಹಕಾರಿಗಳನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಸನ್ಮಾನಿಸಿ ಗೌರವಿಸಿದರು. ಶತಸಂಭ್ರಮ ಕಾರ್ಯಕ್ರಮದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಸ್ಥಾಪಕ ಅಧ್ಯಕ್ಷ ಪಟ್ಟಡ ಎಂ.ಉತ್ತಪ್ಪ ಹಾಗೂ ಸ್ಥಾಪಕ ಕಾರ್ಯದರ್ಶಿ ತೇಲಪಂಡ ಎಂ.ಕಾರ್ಯಪ್ಪ ಅವರ ಕುಟುಂಬದ ಸದಸ್ಯರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶತಸಂಭ್ರಮದ ಪ್ರಯುಕ್ತ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಉಡುಗೊರೆಯನ್ನು ನೀಡಲಾಯಿತು. ವೀರಾಜಪೇಟೆ ಶಿಕ್ಷಕರು ಪ್ರಾರ್ಥಿಸಿದರು, ಮಡಿಕೇರಿ ಶಿಕ್ಷಕರು ನಾಡಗೀತೆ ಹಾಡಿದರು, ಸೋಮವಾರಪೇಟೆ ಶಿಕ್ಷಕರು ರೈತ ಗೀತೆ ಪ್ರಸ್ತುತ ಪಡಿಸಿದರು.
ಕೊಡಗು ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಟಿ.ಆರ್.ಶರವಣಕುಮಾರ್, ರಾಜ್ಯ ನೌಕರರ ಸಂಘದ ಹಾಸನ ಜಿಲ್ಲಾಧ್ಯಕ್ಷ ಬಿ.ಪಿ.ಕೃಷ್ಣೇಗೌಡ, ಹಿರಿಯ ಸಹಕಾರಿ ಹಾಗೂ ವಕೀಲ ಬಸವರಾಜ್ ಸಂಗಪ್ಪನವರ್, ಉದ್ಯಮಿ ಹಾಗೂ ಸಮಾಜ ಸೇವಕ ನಾಪಂಡ ಮುತ್ತಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಎಂ., ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಕೆ.ಎಸ್., ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ಹೆಚ್.ಜಿ., ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುತ್ತಮ್ಮ ಪಿ.ಎಸ್, ಕೊಡಗು ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಹೆಚ್.ಡಿ.ರವಿಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪನಿರ್ದೇಶಕ ಬಸವರಾಜು, ಕೂಡಿಗೆ ಡಯಟ್ ನ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್, ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಆರ್.ಪಿ., ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಎಂ., ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ ಟಿ.ಜಿ., ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಹೆಚ್.ಆರ್.ಮುತ್ತಪ್ಪ, ನಿರ್ದೇಶಕರಾದÀ ಮಂಜುನಾಥ್ ಹೆಚ್.ಎನ್., ಪುದಿಯನೆರವನ ರೇವತಿ ರಮೇಶ್, ದೇವಾನಂದ ಎನ್.ಸಿ. ಸೇರಿದಂತೆ ಸರ್ವ ನಿರ್ದೇಶಕರುಗಳು, ಸರ್ವ ಸದಸ್ಯರು, ಹಿರಿಯ ಸದಸ್ಯರು, ಅಧಿಕಾರಿಗಳು, ವಿವಿಧ ನೌಕರರ, ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ಶಿಕ್ಷಕರು ಹಾಗೂ ಸಹಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.