- ವಿಶ್ಲೇಷಣೆ ಅನಿಲ್ ಎಚ್.ಟಿ.
ಕಾಫಿ ಉದ್ಯಮದ ಪಾಲಿಗೆ ೨೦೨೫ ಆಶಾದಾಯಕವಾಗಿತ್ತು. ಕಾಫಿ ಬೆಳೆದವರಿಗೆ, ಕಾಫಿ ವಹಿವಾಟುದಾರರಿಗೆ ಅನೇಕ ವರ್ಷಗಳ ನಿರಾಶಾದಾಯಕ ದಿನಗಳ ನಂತರ ಹೊಸ ಭರವಸೆ ಮೂಡಿತ್ತು. ಕಾಫಿಗೆ ಕಂಡು ಕೇಳರಿಯದ ಬೆಲೆ ದೊರಕಿದ್ದು ಒಂದೆಡೆಯಾದರೆ ಇದೇ ಬೆಲೆ ಮುಂದೆಯೂ ಸಿಗಲು ಸಾಧ್ಯವಿದೆ ಎಂಬ ಆಶಾಭಾವನೆ ಕಳೆದ ವರ್ಷ ಕಂಡುಬAತು.
ಹೌದೇ? ಇದೇ ಬೆಲೆ ಕಾಫಿ ಬೆಳೆಗೆ ಈ ವರ್ಷವೂ ದೊರಕೀತೇ? ಇದಕ್ಕೆ ಕಾಫಿ ತಜ್ಞರು ಹೇಳುವುದೇನೆಂದರೆ, ಬ್ರೆಜಿಲ್ , ವಿಯೆಟ್ನಾಂ. ಉಗಾಂಡದAಥ ಪ್ರಮುಖ ಕಾಫಿ ಬೆಳೆಗಾರ ದೇಶಗಳಲ್ಲಿ ಕಾಫಿ ಫಸಲು ಹೆಚ್ಚಾಗಿದೆ. ಈಗಾಗಲೇ ಕೆಲವು ದೇಶಗಳ ಕಾಫಿ ಜಾಗತಿಕ ಮಾರುಕಟ್ಟೆ ಪ್ರವೇಶಿಸಿದ್ದು, ಭಾರತಕ್ಕಿಂತ ಕಡಮೆ ಬೆಲೆಗೆ ಮಾರಲ್ಪಡುತ್ತಿದೆ ಹೀಗಾಗಿ ಕಳೆದ ವರ್ಷ ದೊರಕಿದಷ್ಟೇ ಹೆಚ್ಚಿನ ಬೆಲೆ ಈ ವರ್ಷ ಭಾರತೀಯ ಕಾಫಿಗೆ ದೊರಕುವುದು ಕಷ್ಟ. ಉತ್ತಮ ಬೆಲೆ ದೊರಕಿದ್ದ ಹಿನ್ನೆಲೆಯಲ್ಲಿ ಕಾಫಿಯನ್ನು ನಿರ್ಲಕ್ಷಿಸಿದ್ದ ಕೆಲವಾರು ದೇಶಗಳೂ ಕಾಫಿ ಉತ್ಪಾದನೆಯಲ್ಲಿ ಸಮಾರೋಪಾದಿಯಲ್ಲಿ ತೊಡಗಿದ ಪರಿಣಾಮವೂ ಭಾರತೀಯ ಕಾಫಿಗೆ ಬೇಡಿಕೆ ಕುಸಿಯಲು ಕಾರಣವಾಗಬಹುದು. ಭಾರತದ ಕಾಫಿ ಕೃಷಿಕರು ಗುಣಮಟ್ಟ ಕಾಯ್ದುಕೊಂಡದ್ದೇ ಆದಲ್ಲಿ ಖಂಡಿತವಾಗಿಯೂ ಉತ್ತಮ ಬೆಲೆ ದೊರಕುವ ಸಾಧ್ಯತೆಯಿದೆ. ಆದರೆ ಗುಣಮಟ್ಟದ ಬಗ್ಗೆ ಕಾಫಿ ಬೆಳೆಗಾರರು ಗಂಭೀರಗಮನ ನೀಡುತ್ತಿಲ್ಲ. ಇದೇ ಸಮಸ್ಯೆಯಾಗಿದೆ ಎಂಬುದು ಕಾಫಿ ವಹಿವಾಟು ತಜ್ಞರ ಕಳವಳ. ಗುಣಮಟ್ಟದ ಕಾಫಿ ನೀಡದೇ ಕಳಪೆ ಕಾಫಿಗೆ ಉತ್ತಮ ಬೆಲೆ ನಿರೀಕ್ಷೆ ಮಾಡುವುದು ಹೇಗೆ ಸಾಧ್ಯ? .
ವಿಯೆಟ್ನಾಂ, ಬ್ರೆಜಿಲ್, ಉಗಾಂಡದAಥ ದೇಶಗಳ ಕಾಫಿ ಈ ಹೊಸ ವರ್ಷದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಯಾವ ಪರಿಣಾಮ ಬೀರಲಿದೆ ಎಂಬುದು ಜನವರಿ ಅಂತ್ಯದಲ್ಲಿ ಸ್ಪಷ್ಟವಾಗಲಿದೆ. ಭಾರತೀಯ ಕಾಫಿಗೆ ಎಷ್ಟರ ಮಟ್ಟಿಗೆ ಬೇಡಿಕೆಯಿದೆ. ಯಾವ ಪ್ರಮಾಣದಲ್ಲಿ ಬೆಲೆ ದೊರಕಲಿದೆ ಎಂಬುದು ಖಚಿತವಾಗಲು ಮಾರ್ಚ್ ಅಂತ್ಯದವರೆಗೂ ಕಾಯಲೇಬೇಕಾಗಿದೆ. ಹೀಗಾಗಿ ಕಾಫಿಗೆ ದರ ಎಷ್ಟರ ಮಟ್ಟಿಗೆ ದೊರಕಲಿದೆ ಎಂಬುದನ್ನು ತಿಳಿಯಲು ಮಾರ್ಚ್ ಕೊನೇಯವರೆಗೂ ತಾಳ್ಮೆಯಿಂದಿರಬೇಕಾಗಿದೆ.
ಬಹುಪಯೋಗಿ ಕಾಫಿ
೨೦೨೬ ನೇ ವರ್ಷಧಲ್ಲಿ ಕಾಫಿ ಲೋಕದ ವಿದ್ಯಮಾನಗಳ ಬಗ್ಗೆ ವಿಶ್ಲೇಷಿಸುವುದಾದಲ್ಲಿ. ಕಾಫಿ ಬೆಳೆ ಕ್ಷೇತ್ರ ಕಳೆದ ಕೆಲವು ತಿಂಗಳಿನಿAದ ಭಾರೀ ಪರಿವರ್ತನೆಯ ಹಾದಿಯಲ್ಲಿದೆ. ಮೊದಲೆಲ್ಲಾ ತೆಂಗಿಗೆ ಕಲ್ಪವೃಕ್ಷ ಎಂಬ ಖ್ಯಾತಿಯಿತ್ತು. ಈಗ ಕಾಫಿ ಕೂಡ ಕಲ್ಪವೃಕ್ಷ ಎಂಬ ಹೆಸರನ್ನು ತನ್ನದಾಗಿಸಿಕೊಂಡಿದೆ. ಅಂದರೆ, ಕಾಫಿಯ ಪ್ರತೀಯೊಂದು ಅಂಶವೂ ಸಮರ್ಪಕವಾಗಿ ಬಳಕೆಯಾಗಬಲ್ಲ ಸಾಮರ್ಥ್ಯ ಹೊಂದಿದೆ. ಕಾಫಿ ಸಿಪ್ಪೆಯಿಂದ ಜ್ಯೂಸ್ ತಯಾರು ಮಾಡಲು ಸಾಧ್ಯವಿದೆ ಎಂದು ಯುವಪೀಳಿಗೆಯ ಸ್ಟಾರ್ಟ್ ಅಪ್ ಸಂಸ್ಥೆಗಳು ನಿರೂಪಿಸಿವೆ. ಕಾಫಿ ಸಿಪ್ಪೆಯಿಂದ ಇಂಧನ ತಯಾರಿಕೆಗೂ ಪ್ರಯೋಗಗಳು ನಡೆಯುತ್ತಿವೆ. ಕಾಫಿ ಬೀಜದಿಂದ ವಿವಿಧ ಉತ್ಪನ್ನಗಳ ತಯಾರಿಯತ್ತಲೂ ಯುವ ಪೀಳಿಗೆ ಪ್ರಯತ್ನ ಕೈಗೊಂಡು ಯಶಸ್ವಿಯಾಗಿದೆ.
ಕಾಫಿ ಎಲೆಯಿಂದಲೂ ಗೊಬ್ಬರ ಉತ್ಪಾದನೆ, ಕಾಫಿ ಪಲ್ಪ್ ನಿಂದ ವಿದ್ಯುತ್ ಮತ್ತು ಬಯೋ ಇಂಧನ ಉತ್ಪಾದನೆ, ಸಾಧ್ಯವಾಗುತ್ತಿದೆ. ಕಾಫಿ ಹಣ್ಣಿನ ಯಾವೊಂದು ಅಂಶವೂ ನಿಷ್ಪçಯೋಜಕ ಆಗುತ್ತಿಲ್ಲ ಎಂಬುದೇ ಕಾಫಿಯ ವಿಶೇಷತೆಯಾಗಿದೆ. ಕಾಫಿಯಿಂದ ಸೋಪ್, ಕಾಫಿಯಿಂದ ಚಾಕೋಲೇಟ್, ಕಾಫಿ ವೈನ್, ಕಾಫಿ ಬಿಸ್ಕೆಟ್, ಹೀಗೆ ಕಾಫಿಯನ್ನು ಬಳಸಿಕೊಂಡು ಮಾರುಕಟ್ಟೆಯ ದೃಷ್ಟಿಕೋನದಿಂದ ಹಲವಾರು ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ. ಅರ್ಥಾತ್, ಕಾಫಿ ಕೇವಲ ಪೇಯವಾಗಿ ಮಾತ್ರ ಕಂಡುಬರುತ್ತಿಲ್ಲ. ಕಾಫಿಯ ಪ್ರತೀ ಅಂಶವೂ ಪ್ರಯೋಜನಕಾರಿ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಕಾಫಿಯನ್ನು ಕಲ್ಪವೃಕ್ಷ ಎಂದೇ ಪರಿಗಣಿಸಿ ಹೊಸ ಮಾರುಕಟ್ಟೆಯನ್ನು ಸೃಷ್ಟಿ ಮಾಡಲಾಗುತ್ತಿದೆ. ಕಾಫಿಯ ಭವಿಷ್ಯದ ದೃಷ್ಟಿಯಿಂದ ಇದೊಂದು ಶ್ಲಾಘನೀಯ ಮತ್ತು ಆಶಾದಾಯಕ ಬೆಳವಣಿಗೆಯಾಗಿದೆ.
ಪ್ರಸ್ತುತ, ಭಾರತದಲ್ಲಿ ೩.೬೦ ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗುತ್ತಿದೆ. ೨೦೪೭ ನೇ ವರ್ಷಕ್ಕೆ ಭಾರತ ದೇಶಕ್ಕೆ ಸ್ವಾತಂತ್ರ‍್ಯ ದೊರಕಿ ೧೦೦ ವರ್ಷಗಳಾಗುತ್ತವೆ. ಈ ವರ್ಷಕ್ಕೆ ಭಾರತದ ಕಾಫಿ ಉತ್ಪಾದನೆಯನ್ನು ೭ ಲಕ್ಷ ಮೆಟ್ರಿಕ್ ಟನ್‌ಗೆ ಹೆಚ್ಚಿಸುವ ಮೂಲಕ ಜಗತ್ತಿನ ಪ್ರಮುಖ ಕಾಫಿ ಉತ್ಪಾದಕ ದೇಶವಾಗಿಸುವ ಗುರಿಯನ್ನು ಭಾರತೀಯ ಕಾಫಿ ಮಂಡಳಿ ಹೊಂದಿದೆ. ಅಂದರೆ, ಮುಂದಿನ ೨೧ ವರ್ಷಗಳಲ್ಲಿ ಹಾಲಿ ಇರುವ ಕಾಫಿ ಉತ್ಪಾದನೆ ದುಪ್ಪಟ್ಟಾಗಲೇಬೇಕು. ಇದಕ್ಕಾಗಿ ಕಾಫಿ ಬೆಳೆಯುವ ಪ್ರದೇಶವೂ ವಿಸ್ತಾರವಾಗಬೇಕು. ಕಾಫಿ ಬೆಳೆ ಪ್ರದೇಶವೂ ದುಪ್ಪಟ್ಟಾಗಲೇಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆಂತರಿಕವಾಗಿ ಕಾಫಿಯ ಬಳಕೆ ಹೆಚ್ಚಾಗಬೇಕು. ಪ್ರಸ್ತುತ ಭಾರತದಲ್ಲಿ ೭೦ ಸಾವಿರ ಮೆಟ್ರಿಕ್ ಟನ್ ಕಾಫಿ ಬಳಸಲ್ಪಡುತ್ತಿದೆ. ಮುಂದಿನ ದಿನಗಳಲ್ಲಿ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಈ ಪ್ರಮಾಣ ಕನಿಷ್ಟ ೧.೭೫ ಲಕ್ಷ ಮೆಟ್ರಿಕ್ ಟನ್‌ಗೆ ತಲುಪಬೇಕಾಗಿದೆ.
ಮುಂದಿನ ಎರಡು ವರ್ಷಗಳಲ್ಲಿ ದೇಶೀಯವಾಗಿ ೪ ಲಕ್ಷ ಟನ್ ಕಾಫಿ ಬೆಳೆದರೆ ಆ ಪೈಕಿ ೧.೫೦ ಲಕ್ಷ ಟನ್‌ಗಳನ್ನಾದರೂ ದೇಶದಲ್ಲಿಯೇ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಹೀಗಾದಾಗ ಭಾರತೀಯ ಕಾಫಿ ಉದ್ಯಮ ವಹಿವಾಟಿಗೆ ವಿದೇಶಗಳನ್ನು ಅವಲಂಬಿಸುವುದು ತಪ್ಪುತ್ತದೆ. ತಾನು ಬೆಳೆದ ಕಾಫಿಯ ಮಾರುಕಟ್ಟೆಯನ್ನು ತಾನೇ ನಿರ್ಧರಿಸುವ ಸುವರ್ಣ ಕಾಲ ಕಾಫಿಗೂ ಬಂದAತಾಗುತ್ತದೆ.
ನೂತನ ತಂತ್ರಜ್ಞಾನ
ಕಾಫಿ ಕ್ಷೇತ್ರ ಈಗ ನವ ತಂತ್ರಜ್ಞಾನದೊAದಿಗೆ ಬೆಳವಣಿಗೆಯ ಪರ್ವ ಕಾಲದಲ್ಲಿದೆ. ಕಾಫಿ ಬೆಳೆಯ ಹೊಸ ಪ್ರಯೋಗಗಳು ಮೊದಲಿನಂತೆ ಸಾಕಷ್ಟು ವರ್ಷ ತೆಗೆದುಕೊಳ್ಳುತ್ತಿಲ್ಲ. ವಿಳಂಬರಹಿತವಾಗಿ ಪ್ರಯೋಗಳ ಫಲಿತಾಂಶ ಲಭ್ಯವಾಗುತ್ತಿದೆ. ಬೆಳೆಗಾರರು ಸಲಹೆ, ಪ್ರಗತಿಪರ ಕೃಷಿಕರ ಸಾಧನೆಯ ಯಶೋಗಾಥೆ ಆಧರಿಸಿಯೇ ಕಾಫಿ ಉದ್ಯಮ ಮುಂದೆ ಸಾಗುತ್ತಿದೆ. ಭವಿಷ್ಯದಲ್ಲಿ ಕಾಫಿ ಕೃಷಿಕರಿಗೆ ಅಚ್ಚೇ ದಿನ್ ಖಂಡಿತಾ ಕಾಣಲಿದೆ ಎಂದು ಭರವಸೆ ನೀಡುತ್ತಾರೆ ಕಾಫಿ ಮಂಡಳಿ ಕಾರ್ಯದರ್ಶಿ ಎಂ.ಕೂರ್ಮಾರಾವ್.
ಕಾಫಿ ಬೆಳೆಯ ಮಣ್ಣಿನ ಫಲವತ್ತತೆಯನ್ನು ಹಿಂದಿನ ಕಾಲದಂತೆಯೇ ಸಂರಕ್ಷಿಸಿಕೊಳ್ಳಲು ಬಯೋಕ್ಯಾಪ್ಸುಲ್ ಎಂಬ ನೂತನ ತಂತ್ರಜ್ಞಾನ ಪರಿಚಿತವಾಗಿದೆ. ಈ ಕ್ಯಾಪ್ಸುಲ್ ಅನ್ನು ಮಣ್ಣಿನೊಳಕ್ಕೆ ಹಾಕಿದರೆ ಸಾಕಷ್ಟು ಪೌಷ್ಟಿಕಾಂಶಗಳನ್ನು ಇದು ಕಾಫಿಯ ಮಣ್ಣಿಗೆ ಒದಗಿಸಬಲ್ಲದಾಗಿದೆ. ಜಾಗತಿಕವಾಗಿ ಭಾರತೀಯ ಕಾಫಿ ಉದ್ಯಮ ಪ್ರಬಲವಾಗಿದೆ. ಭಾರತ ಇನ್ನೇನು ತಾನೇ ಮಾರುಕಟ್ಟೆ ಬೆಲೆಯನ್ನು ನಿರ್ಧರಿಸಿಕೊಳ್ಳುವ ಸಾಮರ್ಥ್ಯ ಹೊಂದಲಿದೆ. ಸಣ್ಣ ಬೆಳೆಗಾರರೂ ಕಾಫಿ ಲೋಕದ ದಿಕ್ಕು ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಹೊಸ ತಂತ್ರಜ್ಞಾನದ ನೆರವಿನಿಂದ ಕಾಫಿಗೆ ಹೊಸದಿಕ್ಕು ಹೊಸ ಮಾರುಕಟ್ಟೆ ಸೃಷ್ಟಿಸುವ ಮಂಡಳಿಯ ಪ್ರಯತ್ನ ಯಶಸ್ಸಿನ ದಾರಿಯಲ್ಲಿದೆ. ಕಾಫಿ ಲೋಕದ ಭವಿಷ್ಯ ಖಂಡಿತಾ ಉಜ್ವಲವಾಗಿರಲಿದೆ ಎಂದು ವಿಶ್ವಾಸದಿಂದ ಹೇಳುತ್ತಾರೆ. ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ.
ಉಳಿತಾಯ ಮಾಡಿ
ಕಾಫಿಗೆ ಉತ್ತಮ ಬೆಲೆ ದೊರಕಿದಾಗ ಸಾಧ್ಯವಾದಷ್ಟು ಹಣವನ್ನು ಉಳಿತಾಯ ಮಾಡಿಕೊಳ್ಳಿ. ದುಂದುವೆಚ್ಚ ಮಾಡದೇ ಕಾಫಿಯ ಗುಣಮಟ್ಟ ಕಾಪಾಡಿಕೊಳ್ಳಲು ಅಗತ್ಯವಾದ ಕ್ರಮಗಳನ್ನು (ಕಾಫಿ ಕಣ, ಕಾಫಿ ಯಂತ್ರಗಳು, ಹನಿ ನೀರಾವರಿ ಇತ್ಯಾದಿ) ಕೈಗೊಳ್ಳಿ. ಕಾಫಿ ದರ ಕಡಿಮೆಯಾದರೂ ಬೆಳೆಗಾರರು ಸಮಸ್ಯೆಗೊಳಗಾಗಬಾರದು. ಈ ನಿಟ್ಟಿನಲ್ಲಿ ದೂರದೃಷ್ಟಿಯ ಚಿಂತನೆ ಅತ್ಯಗತ್ಯ ಎಂಬ ಕಿವಿಮಾತು ದಿನೇಶ್ ಅವರದ್ದು.
ಮುಂದಿನ ಸವಾಲುಗಳು
೨೦೨೬ ರಲ್ಲಿ ಕಾಫಿ ಕೃಷಿಕರಿಗೆ ಎದುರಾಗುವ ಪ್ರಮುಖ ಸವಾಲುಗಳೆಂದರೆ. ಕಳೆದ ವರ್ಷದಂತೆ ಹವಾಮಾನ ವೈಪರೀತ್ಯ ಈ ವರ್ಷವೂ ಇರಲಿದೆ. ಅಕಾಲಿಕ ಮಳೆ, ಗಾಳಿಯಿಂದಾಗಿ ಫಸಲು ನಾಶದ ಸಾಧ್ಯತೆ ಇಲ್ಲದಿಲ್ಲ. ಕಾರ್ಮಿಕರ ಕೊರತೆಯ ಜೊತೆಗೇ ಅತ್ಯಧಿಕ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಕೊಡಗಿಗೆ ಬರಲಿದ್ದಾರೆ. ಬಂದ ಕಾರ್ಮಿಕರು ಅಸ್ಸಾಮಿಗಳೋ, ಉತ್ತರ ಭಾರತದವರೋ, ಅಥವಾ ಬಾಂಗ್ಲಾದವರೋ ಎಂದು ಪತ್ತೆ ಹಚ್ಚುವುದೇ ಕಷ್ಟಸಾಧ್ಯವಾಗಲಿದೆ. ಪೊಲೀಸ್ ಇಲಾಖೆ ಮತ್ತು ಬೆಳೆಗಾರ ಹಾಗೂ ಕಾರ್ಮಿಕ ಸಂಘಟನೆಗಳು ಒಟ್ಟಾಗಿ, ಈ ಸಮಸ್ಯೆಗೆ ಪರಿಹಾರ ಕಂಡು ಹುಡುಕದೇ ಹೋದಲ್ಲಿ ಕಾಫಿ ತೋಟದ ವಲಸೆ ಕಾರ್ಮಿಕರೇ ಕೊಡಗಿಗೆ ಬಹಳ ದೊಡ್ಡ ಸಮಸ್ಯೆಯಾಗುವುದು ಖಂಡಿತಾ. ಕಾರ್ಮಿಕರ ಕೊರತೆ ಎದುರಿಸಲು ಯಂತ್ರೋಪಕರಣಗಳ ಬಳಕೆ ಮತ್ತು ಅವಲಂಬನೆ ಅತ್ಯಗತ್ಯ ಇಂಥ ಯಂತ್ರಗಳಿಗೆ ಸಹಾಯ ಧನ ಹೆಚ್ಚಾಗಬೇಕು. ಸುಲಭವಾಗಿ ಬೆಳೆಗಾರರಿಗೆ ದೊರಕುವಂತಾಗಬೇಕು ಎಂಬ ಆಗ್ರಹ ಕೃಷಿಕರದ್ದಾಗಿದೆ. ರಸಗೊಬ್ಬರದ ದರ ಏರಿಕೆಗೆ ಕಡಿವಾಣ ಬೇಕು. ಸಾವಯವ ಗೊಬ್ಬರ ಬಳಕೆಯಿಂದ ಉಪಯೋಗ ನಿಜವೇ ಎಂಬುದಕ್ಕೆ ಪರಿಣಿತರಿಂದ ಸ್ಪಷ್ಟತೆ ಬೇಕು. ಕಾಫಿಗೆ ಪರ್ಯಾಯವಾಗಿ ಬೆಳೆಯಲಾಗುತ್ತಿರುವ ಕರಿಮೆಣಸು, ಏಲಕ್ಕಿ, ಬಾಳೆ, ಕಿತ್ತಳೆ, ಶುಂಠಿ ಮೊದಲಾದ ಕೃಷಿ ಫಸಲಿಗೂ ಸೂಕ್ತ ಬೆಲೆ ದೊರಕಬೇಕು ಎಂಬ ಆಕಾಂಕ್ಷೆಗಳು ೨೦೨೬ ರಲ್ಲಿ ಬೆಳಗಾರನದ್ದಾಗಿದೆ. ಕಾಫಿಯನ್ನು ಬಂದರಿಗೆ ಸಾಗಿಸುವ ರಸ್ತೆಗಳ ಸ್ಥಿತಿ ಮತ್ತಷ್ಟು ಉತ್ತಮವಾಗಬೇಕು. ಗುಣಮಟ್ಟಕ್ಕೆ ಮಾತ್ರ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಲಭಿಸುವುದರಿಂದಾಗಿ ಗುಣಮಟ್ಟ ಕಾಯ್ದುಕೊಂಡು ಕಾಫಿ ಬೆಳೆಸಬೇಕೆಂಬ ಅಗತ್ಯ ಜಾಗ್ರತಿ ಪ್ರತೀ ಕೃಷಿಕರಲ್ಲಿ ಮೂಡಬೇಕು ಎಂಬುದು ೨೦೨೬ ರ ಆಶಯಗಳು.
ಆಶಾಭಾವನೆ
ಭಾರತದಾದ್ಯಂತ ಹೆಚ್ಚಾಗುತ್ತಿರುವ ಕಾಫಿ ಕಲ್ಚರ್ (ಕಾಫಿ ಸಂಸ್ಕೃತಿ), ಪೂರಕವಾಗಿ ಅಧಿಕವಾಗುತ್ತಿರುವ ಕಾಫಿ ಕೆಫೆಗಳು, ಹಳ್ಳಿ ಹಳ್ಳಿಗಳಲ್ಲಿಯೂ ಕಂಡುಬರುತ್ತಿರುವ ಕೆಫೆಗಳಿಂದ ಕಾಫಿಯ ಬಳಕೆ ಏರಿಕೆಯಾಗುತ್ತಿರುವುದು. ಯುವ ಪೀಳಿಗೆಯಲ್ಲಿ ಡ್ರಿಂಕ್ ಕಾಫಿ ಎಂಬುದು ಹೆಮ್ಮೆ ಎನಿಸುತ್ತಿರುವುದು, ಕಾಫಿ ಆರೋಗ್ಯಕ್ಕೆ ಒಳ್ಳೆಯದು ಎಂಬ ಚಿಂತನೆ ಇತ್ಯಾದಿಗಳು ಕೂಡ ೨೦೨೬ ರಲ್ಲಿ ಕಾಫಿಯ ಭವ್ಯ ಭವಿಷ್ಯಕ್ಕೆ ಕಾರಣವಾಗಬಲ್ಲ ಅಂಶಗಳು.
ಮನೆಗಳಲ್ಲಿ ಕಾಫಿಯನ್ನು ಹೆಚ್ಚಾಗಿ ಬಳಕೆ ಮಾಡುವುದು,ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಕಾಫಿಯನ್ನೇ ಸರಬರಾಜು ಮಾಡುವುದು, ಪ್ರವಾಸಿಗರಿಗೆ, ಮನೆಗೆ ಬಂದ ಅತಿಥಿಗಳಿಗೆ ಕಾಫಿ ಸಂಬAಧಿತ ಉತ್ಪನ್ನಗಳನ್ನೇ ಕೊಡುಗೆಯಾಗಿ ನೀಡುವುದು, ವಿವಾಹ ಸಮಾರಂಭಗಳಲ್ಲಿ, ಬೃಹತ್ ಕಾರ್ಯಕ್ರಮಗಳಲ್ಲಿ ಕಾಫಿಯ ಮಹತ್ವ ಸಾರುವ ಸಂದೇಶ ಫಲಕ ಅಳವಡಿಕೆಯ ಮೂಲಕ ಕಾಫಿಯನ್ನು ಪ್ರಚುರಪಡಿಸುವುದು ಕೂಡ ಸಾಧ್ಯವಾಗಬೇಕು.
ಕಾಫಿಯನ್ನು ಯಾಕೆ ಬ್ರಾಂಡ್ ಮಾಡಲೇಬೇಕೆಂದರೆ, ನಮ್ಮ ಜೀವನಾಡಿಯಂತಿರುವ ಕಾಫಿಯನ್ನು, ಕಾಫಿ ಬೆಳೆಗಾರರಾಗಿ ನಾವೇ ಪ್ರೋತ್ಸಾಹಿಸದೇ ಹೋದಲ್ಲಿ ಮತ್ತೆ ಯಾರು ಉತ್ತೇಜಿಸಬೇಕು ಹೇಳಿ? ಮನೆಯಂಗಳದಿ ಬೆಳೆದ ಕಾಫಿಯನ್ನು ನಾವೇ ಬೆಂಬಲಿಸದೇ ಹೋದಲ್ಲಿ ಕಾಫಿ ಹೇಗೆ ಚೇತರಿಸಿಕೊಳ್ಳಲು ಸಾಧ್ಯ?
೨೦೨೬ - ಕಾಫಿ ಜಿಲ್ಲೆಯ ಕೊಡಗಿನ ಸರ್ವರಿಗೂ ಕಾಫಿಯನ್ನು ಸಂಭ್ರಮಿಸುವ ವರ್ಷವಾಗಲಿ... ಚಿಯರ್ಸ್ ಹೇಳಿ ಕಾಫಿಗೆ..!!