ಸೋಮವಾರಪೇಟೆ, ಡಿ. ೩೧: ಹೊಸ ವರ್ಷಾಚರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವಹಾನಿಯನ್ನು ತಡೆಯುವ ದೃಷ್ಟಿಯಿಂದ ೧೦೮ ಆರೋಗ್ಯ ಕವಚ ಆ್ಯಂಬ್ಯುಲೆನ್ಸ್ ಜಿಲ್ಲಾದ್ಯಂತ ಸಿದ್ಧವಾಗಿದೆ ಎಂದು ಗ್ರೀನ್ ಹೆಲ್ತ್ ಸರ್ವಿಸ್‌ನ ಜಿಲ್ಲಾ ವ್ಯವಸ್ಥಾಪಕ ಎಸ್. ಸೋಮಶೇಖರ್ ತಿಳಿಸಿದ್ದಾರೆ.
ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚು ವರದಿಯಾಗಿವೆ. ೧೦೮ ಆ್ಯಂಬ್ಯುಲೆನ್ಸ್ ಸೇವೆಯು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಹಕಾರವನ್ನು ಹೊಂದಿರುತ್ತದೆ. ಹೆಚ್ಚಿನ ತುರ್ತು ಪರಿಸ್ಥಿತಿಯನ್ನು ನಿರೀಕ್ಷಿಸುವ ಪ್ರದೇಶಗಳಲ್ಲಿ ಹೆಚ್ಚುವರಿ ಆ್ಯಂಬ್ಯುಲೆನ್ಸ್ ಅನ್ನು ನಿಯೋಜಿಸಲಾಗುವುದು. ಹೆಚ್ಚುವರಿ ಸೇವೆಗಾಗಿ ಆ್ಯಂಬ್ಯುಲೆನ್ಸ್ ಸಿಬ್ಬಂದಿಯ ಸಾಪ್ತಾಯಿಕ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಂಜಾಗ್ರತವಾಗಿ ಎಲ್ಲಾ ಆ್ಯಂಬ್ಯುಲೆನ್ಸ್ನಲ್ಲಿ ಇಂಧನ, ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ಇರಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಆ್ಯಂಬ್ಯುಲೆನ್ಸ್ಗಳನ್ನು ತಜ್ಞ ಸಿಬ್ಬಂದಿಗಳೊAದಿಗೆ ನಿಯೋಜಿಸಲಾಗಿದೆ. ತುರ್ತುಪರಿಸ್ಥಿತಿಗಳಲ್ಲಿ ೧೦೮ ಸಹಾಯವಾಣಿ ಸಂಪರ್ಕ ಮಾಡಬಹುದು ಎಂದು ಸೋಮಶೇಖರ್ ತಿಳಿಸಿದ್ದಾರೆ.