ಮಡಿಕೇರಿ: ಮರೆನಾಡು ಪ್ರೌಢಶಾಲೆ, ಬಿರುನಾಣಿಯ ೬೩ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ಆಡಳಿತ ಮಂಡಳಿಯ ಅಧ್ಯಕ್ಷರಾದ ಕಾಳಿಮಾಡ ಬಿ. ರಶಿಕ ಕಾವೇರಪ್ಪ ಅವರ ನೇತೃತ್ವದಲ್ಲಿ ನಾಡಿನ ವಿದ್ಯಾಭಿಮಾನಿಗಳೊಂದಿಗೆ ಆಚರಿಸಲಾಯಿತು.

ಶಾಲಾ ಮೈದಾನದಲ್ಲಿ ಕ್ರೀಡೋತ್ಸವವನ್ನು ಆಯೋಜಿಸಲಾಗಿತ್ತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಕಾಳಿಮಾಡ ಬಿ. ರಶಿಕ ಕಾವೇರಪ್ಪ ಅಧ್ಯಕ್ಷತೆ ವಹಿಸಿದ್ದರು. ಮರೆನಾಡು ಕೊಡವ ಸಮಾಜದ ನೂತನ ಅಧ್ಯಕ್ಷರು, ಪೊನ್ನಂಪೇಟೆ ತಾಲೂಕಿನ ಬಗರ್‌ಹುಕುಂ (ಅಕ್ರಮ ಸಕ್ರಮ) ಸಮಿತಿಯ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ ಧ್ವಜಾರೋಹಣವನ್ನು ನೆರವೇರಿಸಿದರು. ರಾಷ್ಟçಗೀತೆ ಮೂಲಕ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲಾ ಆಡಳಿತ ಮಂಡಳಿಯ ಖಜಾಂಚಿಯಾದ ಕಾಳಿಮಾಡ ಎ. ಉತ್ತಪ್ಪ ಶಾಲೆಯ ವಿದ್ಯಾರ್ಥಿಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಮಾಜಿ ಸೈನಿಕರು, ಮರೆನಾಡು ಕೊಡವ ಸಮಾಜದ ಉಪಾಧ್ಯಕ್ಷರು ಹಾಗೂ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಕಾಯಪಂಡ ಎಂ. ಸುನಿಲ್ ಮಾಚಯ್ಯ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಕುಪ್ಪಣಮಾಡ ನಂಜಮ್ಮ ದೇವಯ್ಯ (ಬೇಬಿ) ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸಿದರು. ವಿದ್ಯಾರ್ಥಿಗಳಿಂದ ಕವಾಯತು ನೆರವೇರಿತು. ಶಾಲೆಯ ಹಾಗೂ ನೆರೆ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಹಾಗೂ ನಾಡಿನ ಸಾರ್ವಜನಿಕರಿಗೆ ಪಾಯ್ಸನ್‌ಬಾಲ್, ಶಾಟ್‌ಪುಟ್, ಹಗ್ಗ ಜಗ್ಗಾಟ (ಮಹಿಳೆಯರಿಗೆ ಮತ್ತು ಪುರುಷರಿಗೆ) ಸ್ಲೋಬೈಕ್ ರೇಸ್ ಹಾಗೂ ಓಟ ಇನ್ನಿತರ ಆಟೋಟಗಳನ್ನು ಏರ್ಪಡಿಸಲಾಗಿತ್ತು.

ಶ್ರೀ ಮೃತ್ಯುಂಜಯ ದೇವಸ್ಥಾನದ ವತಿಯಿಂದ ಮಧ್ಯಾಹ್ನ ಸಾಮೂಹಿಕ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ನಂತರ ಸಭಾ ಕಾರ್ಯಕ್ರಮ ಆಡಳಿತ ಮಂಡಳಿಯ ಅಧ್ಯಕ್ಷರಾದ ಕಾಳಿಮಾಡ ಬಿ. ರಶಿಕ ಕಾವೇರಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಕಾಯಪಂಡ ಎಂ. ಕಿಶೋರ್ ಸ್ವಾಗತಿಸಿದರು. ಅಧ್ಯಾಪಕ ಕಾರ್ಯದರ್ಶಿ ನಾಗರಾಜು ಪ್ರಸಕ್ತ ಸಾಲಿನ ಶಾಲಾ ವರದಿ ವಾಚನ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚೆಪ್ಪುಡಿರ ಎಸ್. ಅರುಣ್‌ಮಾಚಯ್ಯ ಅವರಿಗೆ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಆಗಮಿಸಿದ ವಲಯ ಸಂಪನ್ಮೂಲ ವ್ಯಕ್ತಿಗಳಾದ ಸೌಮ್ಯ ವಿದ್ಯಾರ್ಥಿಗಳಿಗೆ ಪೂರಕವಾದ ಇಲಾಖೆಯ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ವಿಶೇಷ ಆಹ್ವಾನಿತರಾಗಿ ಕಾಯಪಂಡ ಕುಟುಂಬದ ಅಧ್ಯಕ್ಷರಾದ ಕಾಯಪಂಡ ಕೆ. ಆಯ್ಯಪ್ಪ ಅವರು ಶಾಲೆಗೆ ಸ್ಥಳ ದಾನ ಮಾಡಿದವರ ಪರವಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಕಾಯಪಂಡ ಎಂ. ಸುನೀಲ್ ಮಾಚಯ್ಯ, ಗೌರವ ಕಾರ್ಯದರ್ಶಿಗಳಾದ ಕುಪ್ಪಣಮಾಡ ನಂಜಮ್ಮ ದೇವಯ್ಯ (ಬೇಬಿ) ಶಾಲಾ ಆಡಳಿತ ಮಂಡಳಿಯ ಖಜಾಂಚಿಯಾದ ಕಾಳಿಮಾಡ ಎ. ಉತ್ತಪ್ಪ ಹಾಗೂ ಆಡಳಿತ ಮಂಡಳಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ೨೦೨೫-೨೬ನೇ ಸಾಲಿನಲ್ಲಿ ೮, ೯ ಮತ್ತು ೧೦ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಹಾಗೂ ಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಂಬAಧಿಸಿದAತೆ ದತ್ತಿ ನಿಧಿ ಹಾಗೂ ಇತರ ಪ್ರೋತ್ಸಾಹಕರ ಬಹುಮಾನಗಳನ್ನು ಮಕ್ಕಳಿಗೆ ನೀಡಿ ಪುರಸ್ಕರಿಸಲಾಯಿತು. ಶಿಕ್ಷಕ ಶಾಂತಮೂರ್ತಿ ವಂದಿಸಿದರು.

ಅಣ್ಣಳಮಾಡ ಸನ್ನಿ ತಿಮ್ಮಯ್ಯ ಅವರಿಂದ ಸಂಜೆ ಆಯೋಜಿಸಿದ್ದ ಲಘು ಉಪಹಾರದ ನಂತರ ಬೆಕ್ಕಸೊಡ್ಲೂರಿನ ಮಚ್ಚಮಾಡ ವಿನೋದ್ ಅವರ ಗೆಜ್ಜೆತಂಡ್ ನೃತ್ಯ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾತ್ರಿ ಶಾಲೆಯ ವತಿಯಿಂದ ಉಟದ ವ್ಯವಸ್ಥೆಯನ್ನು ಮಾಡಲಾಗಿತ್ತು.