ಕಡಂಗ: ವೀರಾಜಪೇಟೆ ತಾಲೂಕಿನ ಅರಮೇರಿ ಎಸ್‌ಎಂಎಸ್ ವಿದ್ಯಾಪೀಠ ಶಾಲೆಯಲ್ಲಿ ನಡೆಯುತ್ತಿರುವ ವಸುದೈವ ಕುಟುಂಬಕA ಎಂಬ ಪೀಠಿಕೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಶಾಲಾ ಮೈದಾನದಲ್ಲಿ ನಡೆಯಿತು.

ಸಂಸ್ಥೆಯ ಪ್ರಾಂಶುಪಾಲೆ ಕುಸುಮ್ ಟಿಟ್ಟೋ ಶಾಲೆಯ ಪ್ರಾರಂಭದ ಮತ್ತು ಪ್ರಸ್ತುತ ಶಾಲೆಯ ಕಾರ್ಯವೈಖರಿಗಳ ಬಗ್ಗೆ ವಿವರಣೆ ನೀಡಿದರು. ವಿದ್ಯಾರ್ಥಿಗಳು ಪೆರೇಡ್ ಮೂಲಕ ಗೌರವಾನ್ವಿತ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ಅತಿಥಿಗಳಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ವಸುದೈವ ಕುಟುಂಬಕA ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿರುವ ಈ ವಾರ್ಷಿಕೋತ್ಸವ ಸಂಸ್ಥೆಯ ವಿಶಾಲ ಮನೋಭಾವ ಹಾಗೂ ಧ್ಯೇಯವನ್ನು ಸಾರುತ್ತದೆ ಹಾಗೂ ಪ್ರಪಂಚವೇ ಒಂದು ಕುಟುಂಬ ಎಂದು ಸಾರುವ ಈ ಧ್ಯೇಯ ವಾಕ್ಯವು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ದಶಕಗಳಿಂದ ಅರಮೇರಿ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಸೌಲಭ್ಯವನ್ನು ಒದಗಿಸುತ್ತ ವಿದ್ಯಾರ್ಜನೆ ಮಾಡುತ್ತಾ ಬಂದಿದೆ.

ಇಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಈಗಾಗಲೇ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಹೆಸರನ್ನು ಪಡೆದು, ನಾಡಿನ ಒಳಿತಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಉತ್ತಮ ಶಿಕ್ಷಣ ಸಂಸ್ಥೆಗಳಿAದ ವಿದ್ಯೆ ಪಡೆದು ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಏರಲು ಸಹಕಾರವಾಗಲು ಸಾಧ್ಯವಾಗಿದೆ ಎಂದರು.

ಸAಸ್ಥೆಯ ರೂವಾರಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಅರಮೇರಿ ಎಂಬ ಚಿಕ್ಕ ಗ್ರಾಮದಲ್ಲಿ ಉತ್ತಮವಾದ ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ಶಿಕ್ಷಕರ ಹಾಗೂ ಗ್ರಾಮಸ್ಥರ, ವಿದ್ಯಾರ್ಥಿಗಳ ಹಾಗೂ ಆಡಳಿತ ಮಂಡಳಿಯವರ ಸಹಕಾರದಿಂದ ಎಸ್‌ಎಂಎಸ್ ಎಂಬ ವಿದ್ಯಾಸಂಸ್ಥೆಯು ಇವತ್ತು ಬೆಳೆದು ನಿಂತಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ದೇಶದಲ್ಲಿ ಹಲವಾರು ವಿಶ್ವವಿದ್ಯಾನಿಲಯಗಳು ಕಾರ್ಯಾಚರಿಸುತ್ತಿದ್ದು ಅದರಲ್ಲಿ ವಿಶ್ವದಲ್ಲಿ ಹೆಸರುಗಳಿಸಿದಂತಹ ವಿಶ್ವ ವಿದ್ಯಾನಿಲಯಗಳಿಂದ ವಿದ್ಯಾರ್ಹತೆ ಪಡೆದ ವಿದ್ಯಾರ್ಥಿಗಳು ದೇಶ ಮತ್ತು ವಿದೇಶದಲ್ಲೂ ಉನ್ನತ ಕ್ಷೇತ್ರದಲ್ಲಿದೆ. ಈ ಸಂಸ್ಥೆಯು ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಕೋರಿದರು.

ಅರಮೇರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿರೂಪಾಕ್ಷಯ್ಯ ಮಾತನಾಡಿ, ಸರಕಾರಿ ಶಾಲೆಗಳು ಇಂದಿನ ಸ್ಥಿತಿಯಲ್ಲಿ ಮುಚ್ಚಲ್ಪಡಲು ಪ್ರಮುಖ ಕಾರಣಗಳೆಂದರೆ ಶಿಕ್ಷಕರ ವರ್ಗಾವಣೆ. ವರ್ಗಾವಣೆಗೆ ಸಮಯ ನಿರ್ದಿಷ್ಟವಿಲ್ಲದೆ ಇರುವುದು, ಶಾಲಾ ಶಿಕ್ಷಕರ ಕೊರತೆಯಿಂದಲೂ ಹಲವಾರು ಭಾಗದಲ್ಲಿ ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿರುವುದು ಬೇಸರದ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಪೂರ್ವ ವಿದ್ಯಾರ್ಥಿಗಳಲ್ಲಿ ಉನ್ನತ ಕ್ಷೇತ್ರದಲ್ಲಿ ಗುರುತಿಸಿರುವುದನ್ನು ಮನಗಂಡು ಸಂಸ್ಥೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಸಂಸ್ಥೆ ವತಿಯಿಂದ ಶಾಸಕ ಎ.ಎಸ್. ಪೊನ್ನಣ್ಣ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಮತ್ತು ಸಂಸ್ಥೆಯ ಕಾರ್ಯದರ್ಶಿ ವಿರೂಪಾಕ್ಷಯ್ಯ ಅವರನ್ನು ಸನ್ಮಾನಿಸಲಾಯಿತು.