ಮಡಿಕೇರಿ, ಡಿ. ೩೧ : ಮಡಿಕೇರಿಯ ಸುದರ್ಶನ ವೃತ್ತದ ಬಳಿ ಸುಮಾರು ೪೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಯಾರೂ ದೇಣಿಗೆ ಸಂಗ್ರಹಿಸಬಾರದು ಹಾಗೂ ದೇಣಿಗೆ ನೀಡಬಾರದು ಎಂದು ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಯೋಜಕ ಎಂ.ಎನ್. ರಾಜಪ್ಪ ಮನವಿ ಮಾಡಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಡಿಕೇರಿ ನಗರಸಭೆಯಿಂದ ಕಂಚಿನ ಪುತ್ಥಳಿಗೆ ೨೦ ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ. ಉಳಿದ ೨೪ ಲಕ್ಷ ರೂ.ಗಳನ್ನು ಶಾಸಕರು ಭರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಅಂಬೇಡ್ಕರ್ ಪುತ್ಥಳಿ ನಿರ್ಮಾಣವಾಗುವಲ್ಲಿ ಅದರ ನಿರ್ವಹಣೆಗಾಗಿ ಶಾಸಕರು ಕೆಲವು ದಲಿತ ಸಂಘಟನೆಗಳ ಮುಖಂಡರ ಮೇಲುಸ್ತುವಾರಿ ಸಮಿತಿ ಮಾಡಿದ್ದು, ಪುತ್ಥಳಿ ನಿರ್ಮಾಣಕ್ಕೆ ಸಹಕರಿಸುವುದಷ್ಟೇ ಇವರ ಕೆಲಸ. ಆದರೆ ಇತ್ತೀಚೆಗೆ ಪುತ್ಥಳಿ ನಿರ್ಮಾಣ ಮೇಲುಸ್ತುವಾರಿ ಸಮಿತಿಯಲ್ಲಿ ಕೆಲವು ಸದಸ್ಯರುಗಳು ಪುತ್ಥಳಿ ನಿರ್ಮಾಣದ ಹೆಸರಿನಲ್ಲಿ ಸರ್ಕಾರಿ ನೌಕರರಿಂದ, ಅಧಿಕಾರಿಗಳಿಂದ ದೇಣಿಗೆ ಪಡೆಯಲು ಹೊರಟಿರುವುದು ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ಸರ್ಕಾರವೇ ೪೪ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿರುವಾಗ ನೌಕರರಿಂದ ದೇಣಿಗೆ ಪಡೆಯುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಎಲ್ಲೂ ದಲಿತ ಸಂಘಟನೆಗಳು ಪುತ್ಥಳಿ ನಿರ್ಮಾಣಕ್ಕೆ ದೇಣಿಗೆ ಪಡೆದ ಉದಾಹರಣೆಯಿಲ್ಲ.
ಈಗಾಗಲೇ ಕೆಲವು ನೌಕರರು ಫೋನ್ ಮೂಲಕ ನಮ್ಮನ್ನು ಸಂಪರ್ಕಿಸಿ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದು, ಇದಕ್ಕೆ ಯಾರೂ ಅವಕಾಶ ಕೊಡಬಾರದು.
ಸರ್ಕಾರಿ ಅಧಿಕಾರಿಗಳು, ನೌಕರರು, ಯಾರೂ ಕೂಡ ಈ ಕಾರ್ಯಕ್ರಮಕ್ಕೆ ದೇಣಿಗೆ ನೀಡಬಾರದೆಂದು ದಲಿತ ಸಂಘರ್ಷ ಸಮಿತಿ ಮನವಿ ಮಾಡುತ್ತದೆ ಎಂದ ರಾಜಪ್ಪ, ಹಾಗೇನಾದರೂ ದೇಣಿಗೆ ಕೇಳಿದಲ್ಲಿ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.
ಹುಬ್ಬಳ್ಳಿಯ ಇನಾಂ ವೀರಾಂಪುರದಲ್ಲಿ ನಡೆದ ಗರ್ಭಿಣಿಯೊಬ್ಬರ ಮರ್ಯಾದಾ ಹತ್ಯೆ ಪ್ರಕರಣವು ಖಂಡನೀಯವಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು.
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಹತ್ಯೆ ಬಗ್ಗೆ ಪ್ರಕರಣ ದಾಖಲಿಸಲು ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆಗಳು ಕರ್ನಾಟಕದಲ್ಲಿ ದಲಿತ ಯುವಕ ಹಾಗೂ ಆತನ ಪತ್ನಿ ಗರ್ಭಿಣಿಯ ಮೇಲೆ ನಡೆದ ಅಮಾನುಷ ಕೃತ್ಯದ ಬಗ್ಗೆ ಧನಿ ಎತ್ತದಿರುವುದು ವಿಷಾದನೀಯ ಎಂದು ಹೇಳಿದರು. ಗೋಷ್ಠಿಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಯೋಜಕ ರಾಜಶೇಖರ್, ಜಿಲ್ಲಾ ಸಮಿತಿ ಸದಸ್ಯರಾದ ಪೊನ್ನಪ್ಪ, ಡೀಲಾಕ್ಷ, ಮಂಜುನಾಥ್, ಸೋಮವಾರಪೇಟೆ ತಾಲೂಕು ಸಂಯೋಜಕ ಚಂದ್ರಶೇಖರ್ ಉಪಸ್ಥಿತರಿದ್ದರು.