ಪೆರಾಜೆ, ಡಿ. ೨೮: ವಿದ್ಯಾರ್ಥಿಗಳನ್ನು, ಯುವಕರನ್ನು ಸದಾ ಪ್ರೋತ್ಸಾಹಿಸುತ್ತಿದ್ದ ಡಾ. ಕುರುಂಜಿ ವೆಂಕಟ್ರಮಣ ಗೌಡರು ಯುವ ಜನಾಂಗಕ್ಕೆ ಸದಾ ಸ್ಫೂರ್ತಿಯಾಗಿದ್ದರು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.
ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ ೯೭ನೇ ಜಯಂತ್ಯೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ನಡೆದ ಕೆವಿಜಿ ಸುಳ್ಯ ಹಬ್ಬದಲ್ಲಿ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ಪ್ರದಾನ ಹಾಗೂ ಕೆವಿಜಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕೆವಿಜಿ ಅವರು ಯುವ ಸಮುದಾಯಕ್ಕೆ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಒಎಲ್‌ಇ ಅಧ್ಯಕ್ಷ ಹಾಗೂ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ. ಕೆ.ವಿ. ಚಿದಾನಂದ ಮಾತನಾಡಿ, ಡಾ. ಕೆವಿಜಿ ಅವರ ಬಗ್ಗೆ ಜನತೆಗೆ ಇರುವ ಪ್ರೀತಿ, ಗೌರವ ಹಾಗೂ ಸುಳ್ಯ ಹಬ್ಬ ಸಮಿತಿಯ ಪ್ರಯತ್ನದಿಂದ ಸುಳ್ಯ ಹಬ್ಬ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದರು. ನಿವೃತ್ತ ಪ್ರಾಂಶುಪಾಲ ಪ್ರೊ.ಎಂ. ಬಾಲಚಂದ್ರ ಗೌಡ ಕೆವಿಜಿ ಸಂಸ್ಮರಣಾ ಭಾಷಣ ಮಾಡಿದರು. ಹಿರಿಯರಾದ ಎಸ್.ಎಂ. ಬಾಪೂ ಸಾಹೇಬ್ ಮತ್ತು ಹಿರಿಯ ಪತ್ರಕರ್ತ ಡಾ. ಯು.ಪಿ ಶಿವಾನಂದ ಅವರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ವಿಶ್ವನಾಥ, ಸಂಘದ ನಿಕಟಪೂರ್ವ ಅಧ್ಯಕ್ಷ ಡಾ. ಎನ್.ಎ. ಜ್ಞಾನೇಶ್, ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್, ಕೋಶಾಧಿಕಾರಿ ಚಂದ್ರಾವತಿ ಬಡ್ಡಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ವಿಶ್ವನಾಥ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಾವತಿ ಬಡ್ಡಡ್ಕ ಹಾಗೂ ಚಂದ್ರಮತಿ ಕೆ. ಸಾಧನಾಶ್ರೀ ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು. ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲರವ, ಕುಡ್ಲದ ಚಾಪರ್ಕ ಕಲಾವಿದರು ಅಭಿನಯಿಸಿದ ಪುದರ್ ದೀತಿಜಿ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.