ಮಡಿಕೇರಿ, ಡಿ. ೨೬: ವೀರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು, ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ವಿವಿಧ ಗ್ರಾಮಗಳ ಆಯ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸರಕಾರ ನೀಡುವ ಉಚಿತ ಕೊಳವೆಬಾವಿ ಸೌಲಭ್ಯದ ಪ್ರಮಾಣ ಪತ್ರ ವಿತರಿಸಿದರು.

ಸಣ್ಣ ನೀರಾವರಿ ಇಲಾಖೆ ವತಿಯಿಂದ ಸರಕಾರ ನೀಡುವ ಈ ಸೌಲಭ್ಯವನ್ನು ವಿತರಿಸಿ ಫಲಾನುಭವಿಗಳಿಗೆ ಶುಭ ಕೋರಿದ ಶಾಸಕರು, ಸರಕಾರ ಸಮಾಜದ ಎಲ್ಲಾ ಸ್ಥಳದ ಜನರ ಏಳಿಗೆಗೆ ಶ್ರಮಿಸುತ್ತಿದ್ದು ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹರನ್ನು ಸಮಾಜದ ಮುನ್ನೆಲೆಗೆ ತಂದು ಸದೃಢರನ್ನಾಗಿ ಮಾಡುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಶೀಘ್ರದಲ್ಲೇ ಇದರ ಫಲ ಎಲ್ಲರಿಗೂ ಸಿಗುವಂತಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ತೆನ್ನಿರ ಮೈನಾ, ವಲಯ ಅಧ್ಯಕ್ಷ ನವೀನ್, ಕೆಡಿಪಿ ಸದಸ್ಯ ಪ್ರಶಾಂತ್, ಇಲಾಖೆಯ ಅಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.