ಪೊನ್ನಂಪೇಟೆ, ಡಿ. ೨೬: ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯಲ್ಲಿ ಊಟದ ಗುಣಮಟ್ಟ ಸರಿಯಿಲ್ಲ ಎಂದು ಆರೋಪಿಸಿ ಹಾಗೂ ವಿದ್ಯಾರ್ಥಿಗಳು ಊಟದ ಬಗ್ಗೆ ದೂರು ನೀಡಲು ತೆರಳಿದಾಗ ಮೆಸ್ ಟೆಂಡರ್‌ದಾರರು ಆ ವಿದ್ಯಾರ್ಥಿಗಳಿಗೆ ಗದರಿಸಿ ಕಳುಹಿಸಿದ್ದಾರೆ ಎಂದು ಆರೋಪಿಸಿ ವಸತಿ ಶಾಲೆಯಲ್ಲಿ ಕ್ರೀಡಾ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ವಸತಿ ಶಾಲೆ ಮುಂದೆ ತಾ. ೨೬ ರಂದು ಸಂಜೆ ಪ್ರತಿಭಟನೆ ನಡೆಸಿದರು.

ರಾತ್ರಿ ಸುಮಾರು ೮ ಗಂಟೆವರೆಗೂ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ದೂರವಾಣಿ ಮೂಲಕ ಮಾತನಾಡಿ, ಕೂಡಲೇ ಪೋಷಕರ ಸಭೆ ಕರೆಯುತ್ತೇವೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪೋಷಕರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಕೈಬಿಟ್ಟರು.

ಈ ಘಟನೆಗೆ ಸಂಭAದಿಸಿದAತೆ ತಾ. ೨೭ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ ಅವರ ಸಮ್ಮುಖದಲ್ಲಿ ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಕರೆಯಲಾಗಿದೆ.