ಮಡಿಕೇರಿ, ಡಿ. ೨೪: ಆದಾಯ ಮೀರಿ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ವಸತಿ ಸಚಿವರ ಆಪ್ತ ಕಾರ್ಯದರ್ಶಿ, ಕೆಎಎಸ್ ಅಧಿಕಾರಿ ಸರ್ದಾರ್ ಸರ್ಫರಾಝ್ ಖಾನ್ ಒಡೆತನದ ಮನೆ, ಕಚೇರಿ ಸೇರಿದಂತೆ ಜಾಗಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಅಕ್ರಮ ಆಸ್ತಿ ಗಳಿಕೆ ಕುರಿತು ಬೆಂಗಳೂರಿನಲ್ಲಿ ದಾಖಲಾಗಿದ್ದ ದೂರಿನ ಅನ್ವಯ ಜಿಲ್ಲೆಯ ಮಡಿಕೇರಿ ತಾಲೂಕಿನ ವಣಚಲು ಹಾಗೂ ಕಾಟಕೇರಿ ಗ್ರಾಮದಲ್ಲಿ ಸರ್ಫರಾಝ್ಗೆ ಸೇರಿದ ಫಾರ್ಮ್ ಹೌಸ್ಗೆ ದಾಳಿ ನಡೆಸಿದ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ, ಕೆಲ ದಾಖಲಾತಿಗಳನ್ನು ಕೊಂಡೊಯ್ದಿದ್ದಾರೆ.
ವಣಚಲು ಗ್ರಾಮಕ್ಕೆ ಲೋಕಾಯುಕ್ತ ಇನ್ಸ್ಪೆಕ್ಟರ್ ಎಸ್.ಬಿ. ಪಾಟೀಲ್ ನೇತೃತ್ವದ ತಂಡ ಹಾಗೂ ಕಾಟಕೇರಿ ಗ್ರಾಮಕ್ಕೆ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿತು. ವಣಚಲು ಗ್ರಾಮದಲ್ಲಿ ಬಹುತೇಕ ನಿರ್ಮಾಣಗೊಂಡಿರುವ ಫಾರ್ಮ್ ಹೌಸ್ ಇದ್ದು, ಕಾಟಕೇರಿಯಲ್ಲಿಯೂ ಫಾರ್ಮ್ ಹೌಸ್ ಇರುವುದಾಗಿ ಮಾಹಿತಿ ಲಭ್ಯವಾಗಿದೆ.
ಕೊಡಗಿನ ವಣಚಲು, ಕಾಟಕೇರಿ ಗ್ರಾಮದಲ್ಲಿರುವ ಫಾರ್ಮ್ ಹೌಸ್ ಸೇರಿದಂತೆ ಸರ್ಫರಾಝ್ ಖಾನ್ ಅವರ ಬೆಂಗಳೂರಿನ ಮನೆಗಳು, ಕಚೇರಿ, ಹೆಚ್ಡಿ ಕೋಟೆಯಲ್ಲಿರುವ ರೆಸಾರ್ಟ್ ಸೇರಿದಂತೆ ೧೦ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಹಲಸೂರಿನಲ್ಲಿರುವ ಮನೆಯಲ್ಲಿದ್ದ ಸರ್ಫರಾಝ್ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದರು.
ಸರ್ಫರಾಝ್ ಖಾನ್ ಈ ಹಿಂದೆ ಬಿಬಿಎಂಪಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ವಸತಿ ಸಚಿವ ಜಮೀರ್ ಅಹಮ್ಮದ್ ಅವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.