ಕುಶಾಲನಗರ, ಡಿ. ೨೪: ಕುಶಾಲನಗರ ಮತ್ತು ಗಡಿಭಾಗದ ಕೊಪ್ಪ, ಬೈಲುಕೊಪ್ಪ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಿಯಮಬಾಹಿರ, ಅಕ್ರಮ ಸ್ಪಾ ಮಸಾಜ್ ಸೆಂಟರ್‌ಗಳಿಗೆ ಬೀಗ ಜಡಿಯಲಾಗಿದೆ.

ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ವ್ಯಾಪ್ತಿಯ ಸುಮಾರು ಆರು ಮಸಾಜ್ ಕೇಂದ್ರಗಳಿಗೆ ಇತ್ತೀಚೆಗೆ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಅವುಗಳ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗಿ ಯಾವುದೇ ಅನುಮತಿ ಇಲ್ಲದೆ ನಿಯಮಬಾಹಿರವಾಗಿ ನಡೆಯುತ್ತಿದ್ದ ಎಲ್ಲಾ ಕೇಂದ್ರಗಳಿಗೂ ಬೀಗ ಜಡಿಯಲಾಗಿತ್ತು.

ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚುವರಿ ಆರಂಭಗೊಳ್ಳಲಿದ್ದ ಮೂರು ನೂತನ ಸ್ಪಾ ಮತ್ತು ಮಸಾಜ್ ಕೇಂದ್ರಗಳು ಕೂಡ ಸ್ಥಗಿತಗೊಂಡಿವೆ.ಕುಶಾಲನಗರ ಸಮೀಪದ ಕೊಪ್ಪ, ಬೈಲುಕೊಪ್ಪ ವ್ಯಾಪ್ತಿಯಲ್ಲಿ ಅಲ್ಲಿನ ಪೊಲೀಸರು ಸುಮಾರು ೧೦ಕ್ಕೂ ಅಧಿಕ ಮಸಾಜ್ ಕೇಂದ್ರಗಳಿಗೆ ಬೀಗ ಹಾಕಿಸಿ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಪ್ಪ ಗ್ರಾಮದಲ್ಲಿ ಅಣಬೆಯಂತೆ ರಸ್ತೆ ಬದಿಗಳಲ್ಲಿ ಆರಂಭಿಸಿ ನಿಯಮಬಾಹಿರವಾಗಿ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳು ಕೇಳಿಬಂದ ಹಿನ್ನೆಲೆ ತಕ್ಷಣ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಈ ನಡುವೆ ಸ್ಥಳೀಯ ಕೆಲವು ವ್ಯಕ್ತಿಗಳು ಕೇಂದ್ರಗಳಿಗೆ ನುಗ್ಗಿ ಕೇಂದ್ರದ ಮಾಲೀಕರನ್ನು ಬೆದರಿಸಿ ಹಣ ವಸೂಲಿ ದಂಧೆಯಲ್ಲಿ ತೊಡಗಿರುವ ಬಗ್ಗೆಯೂ ದೂರುಗಳು ಬಂದಿದ್ದು, ಈ ಬಗ್ಗೆ ದೂರಿನ ಹಿನ್ನೆಲೆ ಪೊಲೀಸರು ಮಸಾಜ್ ಕೇಂದ್ರಗಳ ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಾವಳಿ ಮೇರೆಗೆ ವಿಚಾರಣೆ ಕೈಗೊಂಡಿದ್ದಾರೆ.