ಕೊಡ್ಲಿಪೇಟೆ, ಡಿ. ೨೧: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯಲ್ಲಿ ವಿಶೇಷಚೇತನರ ಗ್ರಾಮಸಭೆ ನಡೆಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸಿ.ವಿ. ದಿಲೀಪ್ ಮಾತನಾಡಿ, ವಿಶೇಷಚೇತನರಿಗೆ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ವಿಶೇಷಚೇತನರಿಗೆ ರಿಯಾಯಿತಿ ದರದಲ್ಲಿ ಬಸ್‌ಪಾಸ್ ಹಾಗೂ ಬೌದ್ಧಿಕ ವಿಶೇಷಚೇತನರ ಆರೈಕೆದಾರರಿಗೆ ಸಿಗುವ ಮಾಸಿಕ ಒಂದು ಸಾವಿರ ಆರೈಕೆ ಭತ್ಯೆ, ಸ್ವಯಂ ಉದ್ಯೋಗಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಧಾರ್ ಯೋಜನೆ, ಅಗತ್ಯಕ್ಕೆ ಅನುಗುಣವಾಗಿ ನೀಡುವ ಸಾಧನ ಸಲಕರಣೆಗಳು ಮತ್ತು ಕಂದಾಯ ಇಲಾಖೆಯಿಂದ ನೀಡುವ ಪಿಂಚಣಿ ಯೋಜನೆ, ಶೇ. ೪೨ ರಿಂದ ಶೇ. ೭೫ ರವರೆಗಿನ ಅಂಗವೈಕಲ್ಯತೆಗೆ ಮಾಸಿಕ ೮೦೦ ರೂಪಾಯಿ, ಶೇ. ೭೫ ಮೇಲ್ಪಟ್ಟವರಿಗೆ ಮಾಸಿಕ ೧೪೦೦ ರೂ., ಮಾನಸಿಕ ವಿಶೇಷ ಚೇತನರಿಗೆ ೨೦೦೦ ರೂ. ಮಾಸಿಕ ಭತ್ಯೆ ನೀಡುವ ಸೌಲಭ್ಯಗಳು, ನೋಂದಣಿ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ. ಅಧ್ಯಕ್ಷೆ ಪಾವನ ಗಗನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಹೆಚ್.ಎಸ್., ಗ್ರಾ.ಪಂ. ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರಾದ ಹನೀಫ್, ದಿನೇಶ್ ಕುಮಾರ್, ಮೋಕ್ಷಿಕ್‌ರಾಜ್, ದೊಡ್ಡಯ್ಯ, ರೇಣುಕಾ, ವಿನೋದಾ, ಸಿಬ್ಬಂದಿಗಳಾದ ರಾಜೇಶ್, ರಂಜಿತಾ, ಸಚಿನ್, ಜಯರಾಜ್, ಧರ್ಮ, ಯುವರಾಜ್, ಜೀವನ್, ಈರಪ್ಪ, ಮಹೇಶ್ ಸೇರಿದಂತೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷಚೇತನರು ಇದ್ದರು.