ವೀರಾಜಪೇಟೆ, ಡಿ. ೨೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವೀರಾಜಪೇಟೆ ಇವರ ವತಿಯಿಂದ ಸಾಲ ಪಡೆಯುವ ಫಲಾನುಭವಿಗಳಿಗೆ ಒಂದು ದಿನದ ಉದ್ಯಮ ಶೀಲತಾ ತರಬೇತಿಯನ್ನು ಪಟ್ಟಣದ ಅಂಗಾಳ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪಳೆಯಂಡ ಪಾರ್ಥ ಚಿಣ್ಣಪ್ಪ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರಕಾರಕ್ಕಿಂತಲು ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ಸಂಘದ ಸದಸ್ಯರುಗಳು ಹಾಗೂ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಸಮಾಜದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಾದೇಶಿಕ ಕಚೇರಿ ಸಿಡ್ಬಿ ಯೋಜನಾಧಿಕಾರಿ ಪ್ರವೀಣ್‌ಕುಮಾರ್ ಮಾತನಾಡಿ, ಯಾವ ಉದ್ದೇಶಕ್ಕಾಗಿ ಸಿಡ್ಬಿ ಸಾಲ ಪಡೆಯಬಹುದು ಮತ್ತು ಬಡ್ಡಿದರ, ಬ್ಯಾಂಕಿನ ನಿಯಮಗಳ ಬಗ್ಗೆ, ಸಿಬಿಲ್ ಸ್ಕೋರ್‌ಗಳ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡಿದರು.
ವೀರಾಜಪೇಟೆ ತಾಲೂಕು ಯೋಜನಾಧಿಕಾರಿ ಹರೀಶ್ ಪಿ. ಮಾತನಾಡಿ, ಸಿಡ್ಬಿ ಸಾ¯ದಿಂದ ಸದಸ್ಯರಿಗೆ ಆಗುವ ಪ್ರಯೋಜನ ಹಾಗೂ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವೀರಾಜಪೇಟೆ ಮೇಲ್ವಿಚಾರಕ ಶಿವಕುಮಾರ್, ಕಡಂಗ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸಿಡ್ಬಿ ವಿಭಾಗದ ಸಹಾಯಕರಾದ ಹರ್ಷಿತಾ ಮತ್ತಿತರರು ಉಪಸ್ಥಿತರಿದ್ದರು.