ಕೂಡಿಗೆ, ಡಿ. ೧೩: ಗ್ರಾಮಾಂತರ ಪ್ರದೇಶದ ಹಾಲು ಉತ್ಪಾದಕ ರೈತರು ಗುಣಮಟ್ಟದ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಕುವುದರ ಮೂಲಕ ಸಂಘದ ಅಭಿವೃದ್ಧಿ ಸಾಧ್ಯ ಎಂದು ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ, ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕೂಡಿಗೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಇವರುಗಳ ಸಂಯುಕ್ತಾಶ್ರದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಕಾರ್ಯದರ್ಶಿಗಳಿಗೆ ನಡೆದ ವಿಶೇಷ ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕೊಡಗು ಜಿಲ್ಲೆಯು ಒಳಗೊಂಡAತೆ ಇರುವ ಹಾಸನ ಹಾಲು ಒಕ್ಕೂಟವು ರಾಜ್ಯದಲ್ಲಿ ಉತ್ತಮವಾಗಿ ಹಾಲು ಸಂಸ್ಕರಣೆ ಮಾಡುವ ಮೂಲಕ ಹಾಲು ಸೇರಿದಂತೆ ಹಾಲಿನ ಉತ್ಪನ್ನಗಳನ್ನು ದೇಶದ ಎಲ್ಲಾ ಭಾಗಗಳಲ್ಲಿ ಅಂಡಮಾನ್, ನಿಕೋಬಾರ್, ದ್ವೀಪಗಳಲ್ಲಿಯೂ ಸಹ ಮಾರಾಟ ಮಾಡುತ್ತಿದೆ. ದೇಶದ ಸೈನಿಕರಿಗೂ ಸಹ ನಂದಿನಿ ಹಾಲು ಸರಬರಾಜು ಆಗುತ್ತಿದೆ ಎಂದರು.

ಹಾಸನ ಒಕ್ಕೂಟದ ವತಿಯಿಂದ ಗುಜರಾತ್ ರಾಜ್ಯದ ಮೆಗಾಡೈರಿಯ ಮಾದರಿಯಲ್ಲಿ ರೂ. ೬೦೦ ಕೋಟಿ ವೆಚ್ಚದಲ್ಲಿ ವಿದೇಶಿ ನೂತನ ತಂತ್ರಜ್ಞಾನದ ಯಂತ್ರಗಳ ಅಳವಡಿಕೆಗೆ ಸಿದ್ಧತೆ ನಡೆಯುತ್ತಿದೆ.

ಅದರ ಮೂಲಕ ಹಾಲು ಉತ್ಪಾದಕರ ಸಂಘಗಳ ಅಭಿವೃದ್ಧಿಗೆ ಸಹಕಾರ, ಜೊತೆಗೆ ರೈತರಿಗೆ ವಿಶೇಷ ಅನುದಾನವನ್ನು ಒದಗಿಸುವ ಯೋಜನೆಯನ್ನು ಹಾಸನ ಹಾಲು ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳುವ ಮುಖೇನ ಹಾಲು ಉತ್ಪಾದಕರಿಗೆ ಸಹಕಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ ಮಾತನಾಡಿ, ಪ್ರಪಂಚದಲ್ಲೇ ಭಾರತ ಹೈನುಗಾರಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ದೇಶೀಯ ರಾಸುಗಳ ಸಾಕಾಣಿಕೆ, ಹಾಲು ಸಂಗ್ರಹ ಸೇರಿದಂತೆ ಹಾಲಿನ ಉತ್ಪನ್ನಗಳನ್ನು ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡುತ್ತಿದೆ ಎಂದರು.

ಜಿಲ್ಲೆಯಲ್ಲಿ ೩೯ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಇನ್ನೂ ಹೆಚ್ಚಿನ ಸಂಘಗಳ ಆರಂಭಕ್ಕೆ ಒಕ್ಕೂಟವು ಹೆಚ್ಚು ಒತ್ತು ನೀಡಬೇಕು. ಇದರ ಮೂಲಕ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಹೈನುಗಾರಿಕೆಗೆ ಒತ್ತು ನೀಡಿದಂತೆ ಆಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಆರ್. ಸುನಿಲ್ ರಾವ್, ವಿ.ಸಿ. ಅಮೃತ್, ಎಂ.ಎA. ಶ್ಯಾಮಲಾ, ಹಾಸನ ಹಾಲು ಒಕ್ಕೂಟದ ಪಶುವೈದ್ಯಾಧಿಕಾರಿ ಡಾ. ಪ್ರಸನ್ನ, ಕೂಡಿಗೆ ಜಾನುವಾರು ಸಂವರ್ಧನ ಮತ್ತು ತರಬೇತಿ ಕೇಂದ್ರದ ಹಿರಿಯ ಪಶು ವೈದ್ಯಾಧಿಕಾರಿ ಡಾ. ಶ್ರೀದೇವ್, ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ. ವೀಣಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಹಾಜರಿದ್ದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಜಿಲ್ಲೆಯ ೩೯ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿ ಅವರಿಗೆ ಸಂಘದ ಮೇಲ್ವಿಚಾರಣೆ, ನಿರ್ವಹಣೆ, ಸಹಕಾರ ಕಾಯ್ದೆಗಳ ಬಗ್ಗೆ, ರಾಸುಗಳ ಆರೋಗ್ಯ - ನಿರ್ವಹಣೆ ಸೇರಿದಂತೆ ವಿಮಾ ಯೋಜನೆಯ ಬಗ್ಗೆ ಡಾ. ಪ್ರಸನ್ನ, ಡಾ. ಶ್ರೀದೇವ್ ಶ್ಯಾಮಲಾ ಸವಿಸ್ತಾರವಾಗಿ ವಿವರಿಸಿದರು.

ಈ ಸಂದರ್ಭ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಆರ್. ಸುನಿಲ್ ಕುಮಾರ್, ಕೆ.ಕೆ. ಹೇಮಂತ್ ಕುಮಾರ್ ಮತ್ತು ರಾಬಿನ್ ದೇವಯ್ಯ ಅವರನ್ನು ಗೌರವಿಸಿ, ಸನ್ಮಾನಿಸಿದರು.

ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಸ್ವಾಗತಿಸಿ, ವಂದಿಸಿದರು.