ಮಡಿಕೇರಿ, ಅ. ೧೩: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತನ್ನ ವಿರುದ್ಧ ಕುಶಾಲನಗರ ಮೌಲಾನಾ ಶಾಲೆಯ ನಿರ್ಮಾಣದ ಉಪಗುತ್ತಿಗೆ ಪಡೆಯಲು ಸಾಧ್ಯವಾಗದೇ ಇರುವ ಕಾರಣ ಮಾನ್ಯ ವಿಧಾನ ಪರಿಷತ್ ಸದಸ್ಯರು ಜಿಲ್ಲಾ ಅಧಿಕಾರಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎನ್ನುವುದು ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದದ್ದು ಎಂದು ಶಶಾಂಕ್ ಪ್ರತಿಕ್ರಿಯಿಸಿದ್ದಾರೆ.

ತಾ.೧೩ರ “ಶಕ್ತಿ''ಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕೃಷ್ಣಮೂರ್ತಿ ಅವರ ಪತ್ರಿಕಾ ಹೇಳಿಕೆಗೆ ಇವರು ಪ್ರತಿಕ್ರಿಯಿಸಿ ಹೇಳಿಕೆ ನೀಡಿದ್ದಾರೆ. ಉಪಗುತ್ತಿಗೆಯನ್ನು ಪಡೆಯುವುದು ಅಥವಾ ಪಡೆಯದೇ ಇರುವುದು ನನ್ನ ಸ್ವತಂತ್ರ ನಿರ್ಧಾರ ಮತ್ತು ಮುಖ್ಯ ಗುತ್ತಿಗೆದಾರರು ನಿರ್ಮಾಣಕ್ಕೆ ಬೇಕಾದ ಅಗತ್ಯ ಸಾಮಗ್ರಿ, ಜಲ್ಲಿ, ಕಲ್ಲು ಸರಬರಾಜು, ಕಾರ್ಮಿಕರ ಪೂರೈಕೆ ಮುಂತಾದ ಉಪ ಗುತ್ತಿಗೆಯನ್ನು ಪಡೆಯುವುದು ಸರ್ವೇ ಸಾಮಾನ್ಯ ವಿಚಾರವಾಗಿದೆ ಎಂದಿರುವ ಅವರು, ಒಬ್ಬ ಜಿಲ್ಲಾ ಅಧಿಕಾರಿ ಗುತ್ತಿಗೆಯನ್ನು ನೀಡಲು ನಿರಾಕರಿಸಿದ್ದಾರೆ ಎನ್ನುವುದು ಹಾಸ್ಯಾಸ್ಪದವಾಗಿದೆ; ಗುತ್ತಿಗೆಯನ್ನು ನೀಡುವ ಯಾವುದೇ ಅಧಿಕಾರ ಜಿಲ್ಲಾ ಅಧಿಕಾರಿಗೆ ಇರುವುದಿಲ್ಲ; ಈ ಅಧಿಕಾರವನ್ನು ರಾಜೀವ್ ಗಾಂಧಿ ವಸತಿ ನಿಗಮ ಮಾತ್ರ ಹೊಂದಿದೆ ಎನ್ನುವ ಸಾಮಾನ್ಯ ಜ್ಞಾನವಿಲ್ಲದ, ಇಂತಹ ಅಧಿಕಾರಿ ನಮ್ಮ ಜಿಲ್ಲೆಯಲ್ಲಿದ್ದಾರೆ ಎಂದು ಅಭಿಪ್ರಾಯಿಸಿದ್ದಾರೆ.

“ಇದೇ ವರ್ಷದ ಮಾರ್ಚ್ ತಿಂಗಳಿನ ೧೩ ನೇ ತಾರೀಕಿನಂದು ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯ ವಿಧ್ಯಾರ್ಥಿನಿ ಕುಮಾರಿ ಪೂರ್ವಿಕ ಸಾವನ್ನಪ್ಪಿದ್ದರು. ಈ ಸಾವಿನ ಹಿಂದೆ ಅನುಮಾನಗಳ ಹುತ್ತ ಎದ್ದಿದ್ದರಿಂದ ಈ ಬಗ್ಗೆ ನಾನು ಆ ಬಡ ಕುಟುಂಬದ ಪರವಾಗಿ ನಿಂತು ನ್ಯಾಯ ಒದಗಿಸಿ ಕೊಡುವ ಕೆಲಸಕ್ಕೆ ಕೈ ಹಾಕಿದ್ದೆ, ಇದರಿಂದ ವಿಚಲಿತಗೊಂಡ ಜಿಲ್ಲಾ ಅಧಿಕಾರಿ ಕೃಷ್ಣಮೂರ್ತಿ ಅವರು ನನ್ನ ವಿರುದ್ಧ ಕಾನೂನು ಬಾಹಿರವಾಗಿ ಅಂದರೆ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಮಾಧ್ಯಮ ಹೇಳಿಕೆ ನೀಡಿದ್ದಾರೆ'' ಎಂದು ಶಶಾಂಕ್ ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಎಂ. ಪಿ ಸುಜಾ ಕುಶಾಲಪ್ಪ ಅವರು ಸಾರ್ವಜನಿಕರ ಮತ್ತು ಪೋಷಕರಿಂದ ದೂರು ಬಂದಿದ್ದರಿAದ ವಸತಿ ಶಾಲೆಗೆ ಭೇಟಿ ನೀಡಿದ್ದಾರೆ, ಅಲ್ಲಿನ ಅವ್ಯವಸ್ಥೆಯ ಕುರಿತು ದಾಖಲೆ ಸಹಿತವಾಗಿ ಬಹಿರಂಗಪಡಿಸಿದ್ದಾರೆ ಮತ್ತು ಇದರಲ್ಲಿ ನನ್ನ ಹೆಸರನ್ನು ತಳುಕು ಹಾಕುವುದು ಸಮಂಜಸವಲ್ಲ. ಕುಮಾರಿ ಪೂರ್ವಿಕ ಅವರ ಸಾವಿನ ನ್ಯಾಯಕ್ಕಾಗಿ ಮುಂದಾಗಿರುವ ಮತ್ತು ಇದೇ ಅಧಿಕಾರಿಯ ಹುದ್ದೆಯ ಉನ್ನತೀಕರಣದ ಕುರಿತು ಮಾಹಿತಿ ಹಕ್ಕಿನಲ್ಲಿ ಪ್ರಶ್ನಿಸಲು ಹೊರಟಿರುವ ಎರಡೇ ಕಾರಣಕ್ಕಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ವೈಯಕ್ತಿಕ ಅಸಮಾಧಾನ ಅಥವಾ ಗುತ್ತಿಗೆ ಸಿಗದ ಕಾರಣವೆಂದು ತಿರುಚಿ ಬಿಂಬಿಸುವುದು ದುರದೃಷ್ಟಕರ ಮತ್ತು ಖಂಡನೀಯ ಎಂದಿದ್ದಾರೆ.

ತಾನು ಎತ್ತಿರುವ ಪ್ರತಿಯೊಂದು ವಿಚಾರಕ್ಕೂ ದಾಖಲೆಗಳ ಆಧಾರವಿದ್ದು, ಸಂಬAಧಪಟ್ಟ ಅಧಿಕಾರಿ ವಿಷಯದ ಮೂಲ ಸಮಸ್ಯೆಗಳನ್ನು ಸರಿಪಡಿಸುವ ಬದಲು, ತನ್ನ ಮೇಲೆ ಆರೋಪ ಮಾಡುವ ಮೂಲಕ ವಿಚಾರದಿಂದ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.