ಗೋಣಿಕೊಪ್ಪ ವರದಿ, ಡಿ. ೧೨ : ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ಕೊಡಗು ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ಜಿಲ್ಲೆಯ ೭೬ ರೈತರು ಭಾಗವಹಿಸಿ ರೈತ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದರು. ರೈತ ಸಾಗರದಲ್ಲಿ ಮುಖ್ಯಮಂತ್ರಿ ಮತ್ತು ಸಚಿವರುಗಳಿಗೆ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಯಿತು.

ಮೈಸೂರಿನಿಂದ ರೈಲಿನಲ್ಲಿ ತೆರಳಿದ ಕೊಡಗಿನ ರೈತರು ಮಾನವ ಮತ್ತು ವನ್ಯಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಒದಗಿಸುವುದು, ಸಿ ಮತ್ತು ಡಿ ಜಾಗದ ಸೆಕ್ಷನ್ ೪ ರ ಸಮಸ್ಯೆ ಪರಿಹರಿಸುವುದು. ಬೆಳೆಹಾನಿ ಪರಿಹಾರವನ್ನು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮೂಲಕ ಶೀಘ್ರದಲ್ಲಿ ಬಿಡುಗಡೆಗೊಳಿಸುವುದು, ೧೦ ಹೆಚ್‌ಪಿ ಪಂಪ್‌ಸೆಟ್‌ಗೆ ವಿದ್ಯುತ್ ಅನ್ನು ಉಚಿತವಾಗಿ ನೀಡುವುದು, ಡಿಬಿಟಿ ಮೂಲಕ ಪಾವತಿ ನಿಯಮವನ್ನು ಕೈಬಿಡುವುದು, ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ಮತ್ತು ಮದ್ಯವರ್ತಿಗಳನ್ನು ನಿಯಂತ್ರಿಸುವುದು, ಗುಣಮಟ್ಟದ ರಸ್ತೆ ಅಭಿವೃದ್ಧಿ, ವನ್ಯಪ್ರಾಣಿಗಳಿಂದ ಜೀವ ಕಳೆದುಕೊಂಡವರಿಗೆ ಹಾಗೂ ನಷ್ಟ ಅನುಭವಿಸಿದವರಿಗೆ ಹೆಚ್ಚಿನ ಪರಿಹಾರ ಒದಗಿಸುವುದು, ವನ್ಯ ಪ್ರಾಣಿ ದಾಳಿಗೆ ಒಳಗಾದವರಿಗೆ ವಿಮೆ ಯೋಜನೆ ರೂಪಿಸುವುದು, ಸರ್ಫೇಸಿ ಕಾಯ್ದೆಯಲ್ಲಿನ ಸಮಸ್ಯೆ ಬಗೆಹರಿಸುವ ಬೇಡಿಕೆಗೆ ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಸೇರಿದಂತೆ ೭೬ ರೈತರು ಭಾಗವಹಿಸಿದ್ದರು.