ಪಳೆಯಂಡ ಪಾರ್ಥ ಚಿಣ್ಣಪ್ಪ

ವೀರಾಜಪೇಟೆ, ಡಿ. ೧೨: ಬೆಟ್ಟಗುಡ್ಡಗಳು ಗಿರಿ ಕಾನನಗಳಿಂದ ಆವೃತವಾಗಿರುವ ಕೊಡಗು ಜಿಲ್ಲೆ ಕೃಷಿ ಪ್ರಧಾನ ಪ್ರದೇಶವಾಗಿದ್ದು, ಶೇ. ೭೦ಕ್ಕೂ ಅಧಿಕ ಜನರು ತಮ್ಮ ಬದುಕಿಗಾಗಿ ಕೃಷಿಯನ್ನು ಅವಲಂಭಿಸಿದ್ದಾರೆ. ಜಿಲ್ಲೆಯ ಪ್ರಮುಖ ಬೆಳೆ ಕಾಫಿ ಮತ್ತು ಭತ್ತ ಆಗಿದ್ದು, ಉಪಬೆಳೆಯಾಗಿ ಕಾಳುಮೆಣಸು, ಏಲಕ್ಕಿ, ಅಡಿಕೆ, ಬಾಳೆ ಇತ್ಯಾದಿಗಳನ್ನು ಬೆಳೆಯಲಾಗುತ್ತಿದೆ.

ಹಲವಾರು ಕಾರಣಗಳಿಂದ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ತುಂಬಾ ಶೋಚನೀಯ ಸ್ಥಿತಿ ತಲುಪಿದ್ದು, ಬೆಳೆಗಾರರು ಅವರ ತೋಟಗಳನ್ನು ಪಾಳುಬಿಡುವ ಸ್ಥಿತಿಗೆ ತಲುಪಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಮಾರುಕಟ್ಟೆಯ ವ್ಯವಸ್ಥೆ, ವ್ಯಾಪಾರಿಗಳಿಂದ ಬೆಳೆಗಾರರ ಶೋಷಣೆ, ಕಾರ್ಮಿಕರ ಸಮಸ್ಯೆ, ಪ್ರಾಕೃತಿಕ ವಿಕೋಪ ಇತ್ಯಾದಿಗಳಾಗಿವೆ.

ಕಾಫಿ ವ್ಯವಹಾರ ಸ್ವಾತಂತ್ರö್ಯ ಪೂರ್ವದಿಂದ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು ಬೆಳೆಗಾರರು ಶೋಷಣೆಗೊಳಪಟ್ಟಿದ್ದರು. ಬೆಳೆಗಾರರ ನಿರಂತರ ಹೋರಾಟದಿಂದಾಗಿ, ಕೇಂದ್ರ ಸರ್ಕಾರ ಹಲವು ವರ್ಷಗಳಿಂದ ಕಾಫಿ ವ್ಯವಹಾರವನ್ನು ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಒಳಪಡಿಸಿರುವುದು ಬೆಳೆಗಾರರಿಗೆ ವರದಾನವಾದರೂ ವರ್ಷ ಕಳೆದಂತೆ “ಔಟ್‌ಟನ್’’ ಎಂಬ ಯಾರಿಗೂ ಅರ್ಥವಾಗದ ವ್ಯವಸ್ಥೆಯೊಂದನ್ನು ಮುನ್ನಲೆಗೆ ತಂದು ವ್ಯಾಪಾರಿಗಳು ಶೋಷಣೆಗೆ ಮುಂದಾಗಿದ್ದಾರೆ ಎಂಬುದು ಬೆಳೆಗಾರರ ಅಳಲು.

ಉತ್ತಮ ದರ

ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ೫೦ ಕಿಲೋ ತೂಕದ ಚೀಲಕ್ಕೆ ೧೨ ಸಾವಿರದಿಂದ ೧೪ ಸಾವಿರದವರೆಗೆ ಇದ್ದರು ಇ.ಪಿ. ದರದ ಆಧಾರದಲ್ಲಿ ಕಾಫಿ ದರ ನಿಗದಿ ಮಾಡುವ ವ್ಯಾಪಾರಿಗಳು ಬೆಳೆಗಾರರನ್ನು ಶೋಷಣೆ ಮಾಡುತ್ತಿರುವುದು ಇಂದಿನ ಪ್ರಚಲಿತ ವಿದ್ಯಾಮಾನವಾಗಿದೆ. ಕಾಫಿ ಉತ್ಪಾದನೆಯಲ್ಲಿ ಏರಿಳಿತ ಕಂಡರೂ ವೆಚ್ಚ ದುಬಾರಿಯಾಗಿದೆ. ಉದಾ:- ಕಾರ್ಮಿಕರ ಕೂಲಿಯಲ್ಲಿ ಅವೈಜ್ಞಾನಿಕ ಏರಿಕೆ. ರಾಸಾಯನಿಕ ಗೊಬ್ಬರದ ದರ ಏರಿಕೆ, ತೋಟಗಳಿಗೆ ಕೃತಕ ನೀರುಣಿಸಲು ಬೇಕಾಗುವ ತೈಲ ಹಾಗೂ ವಿದ್ಯುತ್ ದರಗಳಲ್ಲಿ ಗಣನೀಯ ಏರಿಕೆ ಇತ್ಯಾದಿ ಪ್ರಮುಖ ಕಾರಣಗಳಿಂದ ಕಾಫಿ ಬೆಳೆಗಾರರು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಜಿಲ್ಲೆಯ ಪ್ರಕೃತಿ ಅಸಮತೋಲನದಿಂದಾಗಿ ಅನಿಯಮಿತ ಮಳೆಯೂ ಗಾಯದ ಮೇಲೆ ಬರೆ ಎಳೆಯುತ್ತಿರುವುದು ಇತ್ತೀಚಿನ ವರ್ಷಗಳ ವಿದ್ಯಮಾನವಾಗಿದೆ.

೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ)

ಕಾರ್ಮಿಕ ಮಾಫಿಯಾ

ಜಿಲ್ಲೆಯಲ್ಲಿ ಕಳೆದ ೧೦ ವರ್ಷಗಳಿಂದ ಕಾರ್ಮಿಕರ ಒಂದು ಮಾಫಿಯ ಕಾರ್ಯನಿರ್ವಹಿಸುತ್ತಿದೆ. ಕಾರ್ಮಿಕರ ನಿರ್ದೇಶನದಂತೆ ಬೆಳೆಗಾರರು ನಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಬೆಳಿಗ್ಗೆ ೧೦ ಗಂಟೆಗೆ ತೋಟಗಳಿಗೆ ತಲುಪುವ ಕಾರ್ಮಿಕರು, ಕೆಲಸದ ವೇಳೆಯ ಮಧ್ಯೆ ಒಂದುವರೆ ಗಂಟೆಯ ವಿಶ್ರಾಂತಿ ಪಡೆದು ಸಂಜೆ ೩.೩೦ ಗಂಟೆಗೆ ಕೆಲಸ ಸ್ಥಗಿತಗೊಳಿಸುತ್ತಿದ್ದಾರೆ. ವ್ಯವಸ್ಥಿತ ಪಿತೂರಿಯಿಂದಾಗಿ ಕಾರ್ಮಿಕ ನಾಯಕರು ಬೆಳೆಗಾರರನ್ನು ಅವರ ಕಪಿಮುಷ್ಠಿಯಲ್ಲಿ ಇರಿಸಿಕೊಂಡಿದ್ದಾರೆ. ಜೀಪು ಬಾಡಿಗೆ, ಮೇಸ್ತಿç ಕೂಲಿ ಇತ್ಯಾದಿ ನೆಪಗಳನ್ನು ಮುಂದಿಟ್ಟುಕೊAಡು ೪ ರಿಂದ ೪.೩೦ ಗಂಟೆಯ ಕೆಲಸಕ್ಕೆ ಸರಾಸರಿ ೫೦೦ ರಿಂದ ೬೦೦ ಕೂಲಿ ಪಾವತಿ ಅನಿವಾರ್ಯವಾಗಿದೆ. ಇವರ ಚಲನವಲನಗಳನ್ನು ಅರಿತ ಹೊರ ರಾಜ್ಯದ ಕಾರ್ಮಿಕರು ಕೂಡ ದುಬಾರಿ ಕೂಲಿ ವಸೂಲಿ ಮಾಡಲಾರಂಭಿಸಿದ್ದಾರೆ.

ರಸಗೊಬ್ಬರ ದುಬಾರಿ

೫-೬ ವರ್ಷಗಳಿಂದ ರಾಸಾಯನಿಕ ಗೊಬ್ಬರಗಳ ಬೆಲೆ ಶೇ. ೫೦೦ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಉದಾ:- ಡಿಎಪಿ ರೂ. ೫೦೦ ರಿಂದ ರೂ. ೧೪೦೦, ಪೊಟೇಶ್ ರೂ. ೧೩೦ ರಿಂದ ರೂ. ೯೦೦. ಜಿಲ್ಲೆಯಲ್ಲಿ ಏಕರೆಗೆ ಸರಾಸರಿ ೧೨೫೦ ರಿಂದ ೧೫೦೦ ಕಿಲೋ ಕಾಫಿ ಫಸಲು ದೊರಕುತ್ತಿದ್ದು, ಇದರಿಂದ ಎಕರೆಗೆ ರೂ. ೯೦,೦೦೦ ರಿಂದ ೧ ಲಕ್ಷದವರೆಗೆ ಆದಾಯ ಬಂದು ತೋಟದ ನಿರ್ವಹಣೆಗೆ ವಿವಿಧ ರೀತಿಯಲ್ಲಿ ಎಕರೆಗೆ ಕನಿಷ್ಟ ರೂ. ೬೦,೦೦೦/- ವೆಚ್ಚವಾಗುತ್ತದೆ. ಉಳಿಕೆಯಾಗಿರುವ ರೂ. ೩೦-೪೦ ಸಾವಿರಗಳಲ್ಲಿ ಸಾಲದ ಬಡ್ಡಿ-ಸಾಲದ ಹೊಂದಾಣಿಕೆ ಮಾಡಿಕೊಂಡು ಕುಟುಂಬ ನಿರ್ವಹಣೆ ಬೆಳೆಗಾರರಿಗೆ ಗಗನ ಕುಸುಮವಾಗಿದೆ.

ಶಾಶ್ವತ ಪರಿಹಾರ ಬೇಕಿದೆ

ಉತ್ಪಾದನಾ ವೆಚ್ಚಕ್ಕನುಗುಣವಾಗಿ ಸರ್ಕಾರ ಬೆಲೆ ನಿಗದಿಪಡಿಸುವುದು. ಸಾಲ ಮನ್ನಾದಿಂದ ಬೆಳೆಗಾರರ ಸಮಸ್ಯೆ ಪರಿಹಾರವಾಗುವುದಿಲ್ಲ. ಹಲವಾರು ಬೆಳೆಗಾರರ ಒಕ್ಕೂಟ ಸಾಲಮನ್ನಕ್ಕಾಗಿ ಹೋರಾಟ ನಡೆಸುತ್ತಿದೆಯಲ್ಲದೆ ಶಾಶ್ವತ ಪರಿಹಾರಕ್ಕಾಗಿ ಯೋಜನೆ ರೂಪಿಸಿ ಹೋರಾಟ ನಡೆಸುತ್ತಿರುವುದು ಕಂಡುಬರುತ್ತಿಲ್ಲ. ಕಾರ್ಮಿಕರಿಗೆ ಕನಿಷ್ಟ ವೇತನ ನಿಗದಿಪಡಿಸುವ ಸರ್ಕಾರ ಅವರಿಗೆ ಕೆಲಸದ ಸಮಯವನ್ನು ನಿಗದಿಪಡಿಸುವ ಬಗ್ಗೆಯೂ ಆಧ್ಯತೆ ನೀಡಬೇಕು. ವಿವಿಧ ರಾಸಾಯನಿಕ ಗೊಬ್ಬರ, ಉತ್ಪಾದಕರಿಗೆ ಸಹಾಯ ಧನ ನೀಡುತ್ತಿರುವ ಕೇಂದ್ರ ಸರ್ಕಾರ, ವ್ಯವಸ್ಥೆಗೆ ಬದಲಾವಣೆ ತಂದು ಸಹಾಯ ಧನವನ್ನು ಬೆಳೆಗಾರ ಗೊಬ್ಬರ ಖರೀದಿದಾರರಿಗೆ ನೇರವಾಗಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರುವತ್ತ ಗಮನ ಹರಿಸಬೇಕು. ಸರ್ಕಾರ ಕಾಫಿ ವ್ಯಾಪಾರಿಗಳಿಗೆ ಹಲವು ನಿಬಂಧನೆಗಳನ್ನು ವಿಧಿಸಿ, ಪರವಾನಗಿ ಪಡೆದು ವ್ಯಾಪಾರ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುವಂತಾಗಬೇಕು. ವ್ಯವಸ್ಥಿತ ಮಾರುಕಟ್ಟೆಯ ಅಭಾವದಿಂದಾಗಿ ಕಳೆದ ಹಲವು ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಬೆಳೆಗಾರರು ಕಳೆದುಕೊಂಡು ಅಸಹಾಯಕರಾಗಿದ್ದಾರೆ.

ಭತ್ತ

ಒಂದು ಕಾಲದಲ್ಲಿ ಕೊಡಗು ಜಿಲ್ಲೆ ಸಮೃದ್ಧ ಭತ್ತದ ಬೆಳೆಗೆ ಹೆಸರುವಾಸಿಯಾಗಿತ್ತು. ಆದರೆ ಕಳೆದ ೧೦-೧೫ ವರ್ಷಗಳಿಂದ ಜಿಲ್ಲೆಯ ಶೇ. ೭೫ಕ್ಕೂ ಹೆಚ್ಚು ಭತ್ತದ ಗದ್ದೆಗಳು ಪಾಳು ಬಿದ್ದಿವೆ. ಭತ್ತಕ್ಕೆ ಅವೈಜ್ಞಾನಿಕ ಬೆಲೆ ನಿಗದಿ, ಕಾರ್ಮಿಕರ ಕೊರತೆ ಅತ್ಯಧಿಕ ಕೂಲಿಯ ಬೇಡಿಕೆ, ಅಕಾಲಿಕ ಮಳೆ, ಕಾಡು ಹಂದಿ, ಕಾಡಾನೆಗಳ ಹಾವಳಿಗಳು ಪ್ರಮುಖ ಕಾರಣಗಳಾಗಿವೆ. ಭತ್ತದ ಗದ್ದೆಗಳನ್ನು ಪರಿವರ್ತನೆಗೊಳಿಸಿ ಮನೆ ಹಾಗೂ ವಾಣಿಜ್ಯ ಸಂಕಿರ್ಣಗಳಿಗೆ ಬಳಕೆಯಾಗುತ್ತಿದೆ. ಗದ್ದೆಗಳನ್ನು ಪಾಳುಬಿಡುವುದರಿಂದ ಜಿಲ್ಲೆಯಲ್ಲಿನ ಅಂತರ್ಜಲಮಟ್ಟ ನೂರಾರು ಅಡಿ ತಳಮಟ್ಟ ತಲುಪಿದೆ. ಬೇಸಿಗೆಯಲ್ಲಿ ಕಾವೇರಿಯ ಉಗಮ ಸ್ಥಳ ಹಾಗೂ ಅತ್ಯಧಿಕ ಮಳೆ ಬೀಳುವ ನಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಅಭಾವ ಉಂಟಾಗಿದೆ.

ಬೆಂಬಲ ಬೆಲೆ

ಸರ್ಕಾರ ಪ್ರಸ್ತುತ ನಿಗದಿಪಡಿಸಿರುವ ಭತ್ತದ ಬೆಂಬಲ ಬೆಲೆ ಉತ್ಪಾದನೆಯ ಅರ್ಧ ವೆಚ್ಚಕ್ಕೆ ಸಮನಾಗಿದೆ. ನಾಲಾ ನೀರಾವರಿ ಪದ್ಧತಿ ಬೆಳೆಗೆ ನಿಗದಿಪಡಿಸುವ ಬೆಂಬಲ ಬೆಲೆ, ಕೊಡಗು ಜಿಲ್ಲೆಗೆ ಅನ್ವಯವಾಗುವುದು ಅವೈಜ್ಞಾನಿಕವಾಗಿದೆ. ಕೊಡಗು ಜಿಲ್ಲೆಯಲ್ಲಿ ಭತ್ತ ಮಳೆಯಾಧಾರಿತ ಕೃಷಿಯಾಗಿರುವುದರಿಂದ ಜಿಲ್ಲೆಗೆ ಪ್ರತ್ಯೇಕ ಬೆಂಬಲ ಬೆಲೆ ನಿಗದಿಪಡಿಸುವತ್ತ ಸರ್ಕಾರ ಗಮನ ಹರಿಸಬೇಕಾಗಿದೆ. ಪಾಳು ಬಿದ್ದಿರುವ ಭತ್ತದ ಗದ್ದೆಗಳ ಪುನಃಶ್ಚೇತನಕ್ಕೆ ಸರ್ಕಾರ ವಿಶೇಷ ಗಮನ ಹರಿಸಿ, ರೈತರಿಗೆ ಪ್ರೋತ್ಸಾಹಧನ ನೀಡಿ ಭತ್ತದ ಮರು ಕೃಷಿ ಪುನರಾರಂಭಕ್ಕೆ ನಿಯಮಾವಳಿಗಳನ್ನು ರೂಪಿಸಿ ನಿಗದಿತ ಸಮಯದೊಳಗಾಗಿ ಇದನ್ನು ಕಾರ್ಯರೂಪಕ್ಕೆ ತರುವತ್ತ ಸಂಬAಧಪಟ್ಟವರು ಗಮನ ಹರಿಸುವಂತಾಗಬೇಕಿದೆ.

ಕಾಳುಮೆಣಸು

ಕಪ್ಪು ಬಂಗಾರವೆAದೇ ಮನೆ ಮಾತಾಗಿರುವ, ಉತ್ಕೃಷ್ಠ ಗುಣಮಟ್ಟದ ಕೊಡಗಿನ ಕಾಳುಮೆಣಸು ಬೆಳೆಗಾರರಿಗೆ ಸಂಜೀವಿನಿಯಾಗಿತ್ತು. ಕಾಫಿ ತೋಟದಲ್ಲಿ ಉಪಬೆಳೆಯಾಗಿ ಬೆಳೆಯುವ ಕಾಳುಮೆಣಸು, ಬೆಳೆಗಾರರಿಗೆ ಬೋನಸ್ ಎಂದು ಪರಿಗಣಿಸಲ್ಪಡುತ್ತಿತ್ತು. ಕಳೆದ ೩-೪ ವರ್ಷಗಳಿಂದ ಕಾಳುಮೆಣಸು ದರ ಮೆಲೇಳುತ್ತಿಲ್ಲ. ಮೆಣಸು ಕುಯಿಲು ಮಾಡುವ ಕಾರ್ಮಿಕರ ಕೂಲಿ ಹಣಕ್ಕೆ ಮಾತ್ರ ಸಾಕಾಗುತ್ತದೆ. ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಾಳುಮೆಣಸಿಗೆ ಅತ್ಯಧಿಕ ಬೆಲೆ ದೊರಕುತ್ತಿದ್ದರೂ, ಸರ್ಕಾರದ ನೀತಿ ನಿಯಮದಿಂದ ಕಳಪೆ ಗುಣಮಟ್ಟದ ಕಾಳುಮೆಣಸು ಭಾರತಕ್ಕೆ ಅಮದಾಗಿ ಕಲಬೆರಕೆ ಕಾಳುಮೆಣಸು ಮಾರಾಟ ಜಾಲದಿಂದಾಗಿ ಬೆಳೆಗಾರರು ಸರ್ಕಾರದ ವತಿಯಿಂದಲೇ ಶೋಷಣೆಗೆ ಒಳಗಾಗಿರುವುದು ದುರದೃಷ್ಟಕರ. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ಬೆಳೆಗಾರರ ಸಮಸ್ಯೆ ಪರಿಹಾರ ಸಾಧ್ಯ.

ಅಡಿಕೆ-ಬಾಳೆ

ಅಡಿಕೆ ಜಿಲ್ಲೆಯ ರೈತರ ಉಪಬೆಳೆಯಾಗಿದ್ದು ಜಿಲ್ಲೆಯ ಹಲವಾರು ರೈತರು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚಿನ ಹಲವು ವರ್ಷಗಳಿಂದ ಅಡಿಕೆ ಫಸಲಿಗೆ ತಗಲುತ್ತಿರುವ ಕೊಳೆರೋಗದಿಂದ ಫಸಲು ಕೈ ಸೇರುತ್ತಿಲ್ಲ. ವಿಪರೀತ ಮಳೆಯಿಂದಾಗಿ ರೋಗ ನಿಯಂತ್ರಣ ಔಷಧಿ ಸಿಂಪಡಿಕೆಯೂ ಸಾದ್ಯವಾಗುತ್ತಿಲ್ಲ.

ಬಾಳೆ ಬೆಳೆ ಜಿಲ್ಲೆಯ ಹಲವು ಭಾಗಗಳಲ್ಲಿ ಬೆಳೆಯಲಾಗುತ್ತಿದ್ದು, ಇದರಿಂದ ಒಂದಿಷ್ಟು ರೈತರು ನಿಟ್ಟುಸಿರು ಬಿಡುವಂತ ಸಂದರ್ಭದಲ್ಲಿ ಕಾಡಾನೆಗಳ ಹಾವಳಿಯಿಂದ ಕ್ಯೆಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಂತಾಗಿದೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯ ರೈತರು ತೀವ್ರ ಸಂಕಷ್ಟದಲ್ಲಿದ್ದು ಇದರ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ, ಜನಪ್ರತಿನಿಧಿಗಳು, ಸಂಘ-ಸAಸ್ಥೆಗಳು ತ್ವರಿತಗತಿಯ ಯೋಜನೆಗಳನ್ನು ಅನುಷ್ಠಾನಗೊಳಿಸುವಂತಾದರೆ ಮಾತ್ರ ಜಿಲ್ಲೆ ತನ್ನ ಎಂದಿನ ಸಿರಿತನವನ್ನು ಉಳಿಸಿಕೊಳ್ಳುವುದು ಸಾಧ್ಯವಾಗಬಹುದು.