ಕಣಿವೆ, ಡಿ. ೧೨: ಕಾಡಿನಿಂದ ಆಹಾರ ಅರಸಿ ಜನವಸತಿಯತ್ತ ಧಾವಿಸಿ ಬಂದ ದೈತ್ಯ ಕಾಡಾನೆಯೊಂದು ಕಾಡಿಗೆ ಮರಳಲು ಸಾಹಸ ಪಟ್ಟ ಪ್ರಸಂಗ ಏಳನೇ ಹೊಸಕೋಟೆ ಬಳಿಯ ತೊಂಡೂರಿನಲ್ಲಿ ಶುಕ್ರವಾರ ಬೆಳಿಗ್ಗೆ ೭-೩೦ ರ ಸಮಯದಲ್ಲಿ ನಡೆದಿದೆ.

ಅದೃಷ್ಟವಶಾತ್, ಕೊರೆವ ಚಳಿ ಹಾಗೂ ಮುಂಜಾನೆಯ ಮಂಜಿಗೆ ಅಂಜಿ ಮನೆಯೊಳಗೆ ನಿವಾಸಿಗಳು ಇದ್ದುದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಗುರುವಾರ ರಾತ್ರಿ ಸಮಯ ಅರಣ್ಯದಿಂದ ಆಹಾರ ಅರಸಿ ಕಾಫಿ ತೋಟಕ್ಕೆ ಬಂದಿರಬಹುದಾದ ಕಾಡಾನೆ ಬೆಳಿಗ್ಗೆ ಕಾಡಿಗೆ ಮರಳಲು ತೊಂಡೂರಿನ ಕಾಡಂಚಿನ ಉದ್ದಕ್ಕೂ ಅಳವಡಿಸಿರುವ ರೈಲ್ವೆ ಕಂಬಿ ತಡೆಗೋಡೆಯಿಂದಾಗಿ ಕಾಡಿನೊಳಗೆ ಮರಳಲು ಹರಸಾಹಸ ಪಟ್ಟು ನೇರವಾಗಿ ಜನವಸತಿಯ ರಸ್ತೆಯಲ್ಲಿಯೇ ನಿರ್ಭೀತಿಯಿಂದ ಹೆಜ್ಜೆ ಇಡುವ ಮೂಲಕ ಗ್ರಾಮ ನಿವಾಸಿಗಳಲ್ಲಿ ಭೀತಿ ಮೂಡಿಸಿತು ಎಂದು ಏಳನೇ ಹೊಸಕೋಟೆ ಗ್ರಾಪಂ ಉಪಾಧ್ಯಕ್ಷೆ ಸೌಮ್ಯ “ಶಕ್ತಿ'' ಗೆ ತಿಳಿಸಿದರು.

ಅರಣ್ಯದ ಉದ್ದಕ್ಕೂ ರೈಲ್ವೆ ಕಂಬಿ ಆಳವಡಿಸಿದ ಬಳಿಕ ಕಾಡಾನೆಗಳ ಹಾವಳಿ ಕ್ಷೀಣಿಸಿತ್ತು. ಒಂದು ವೇಳೆ ಹಸಿವು ತಡೆಯಲಾರದೆ ಆಹಾರ ಅರಸಿ ಸಾಹಸದಿಂದ ರೈಲ್ವೆ ಕಂಬಿಯ ಒಳ ನುಸುಳಿ ಬಂದಿರಬಹುದಾದ ಅಥವಾ ತಡರಾತ್ರಿ ಹೆದ್ದಾರಿಯಲ್ಲೇ ಬಂದಿರಬಹುದಾದ ಈ ಕಾಡಾನೆಯ ಎತ್ತರ, ಗಾತ್ರ, ರೂಪ ನೋಡುಗರಲ್ಲಿ ಭಯ ಭೀತಿ ಮೂಡಿಸಿತು. ಗ್ರಾಮದ ಮನೆಯ ಮುಂಬದಿ ಸಾಗುತ್ತಿದ್ದುದನ್ನು ಕಂಡು ನಾವೆಲ್ಲರೂ ಭಯ ಭೀತರಾದೆವು. ತಕ್ಷಣವೇ ಭಯದ ನಡುವೆಯೂ ದೂರದಲ್ಲಿ ರಸ್ತೆಯ ಬದಿಯಲ್ಲಿ ಇದ್ದವರಿಗೆ ಕಾಡಾನೆ ಬರುತ್ತಿರುವುದಾಗಿ ಕೂಗಿ ಕೊಂಡೆವು ಎಂದು ನಿವಾಸಿಗಳಾದ ಭವಾನಿ, ಅಕ್ಕಮ್ಮ ವಿವರಿಸಿದರು.

ಬೆಳ್ಳಂಬೆಳಗ್ಗೆ ದೂರದ ಊರುಗಳ ಕಾಫಿ ತೋಟಗಳಿಗೆ ತೆರಳುವ ಕಾರ್ಮಿಕ ಮಹಿಳೆಯರು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬೆಳಿಗ್ಗೆ ಸಮಯ ಹೆಚ್ಚಾಗಿ ತೆರಳುವ ಕಾರಣ ಅರಣ್ಯಾಧಿಕಾರಿಗಳು ಪ್ರತಿ ದಿನ ಈ ಜನವಸತಿ ಮಾರ್ಗದಲ್ಲಿ ಗಸ್ತು ವಾಹನದಲ್ಲಿ ಸಂಚರಿಸುವ ಮೂಲಕ ಗ್ರಾಮಸ್ಥರಲ್ಲಿ ಸ್ಥೆöÊರ್ಯ ಹಾಗೂ ಧೈರ್ಯ ತುಂಬಬೇಕು. ಕಾಡಾನೆಗಳು ಕಾಡಿನಿಂದ ಹೊರ ಬಂದಾಗ ಅರಣ್ಯ ದೊಳಕ್ಕೆ ಮರಳುವ ರೀತಿ ಏನಾದರೂ ರೈಲ್ವೆ ಕಂಬಿಯ ಮಾರ್ಗದಲ್ಲಿ ಏನಾದರೂ ಬದಲಾವಣೆಯ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.