ಮಡಿಕೇರಿ, ಡಿ. ೧೨: ದೇಶದ ಪ್ರಧಾನಮಂತ್ರಿಗಳನ್ನು ಅಪಮಾನಿಸಿ ಬಂಧಿತರಾಗಿರುವ ಕಿಡಿಗೇಡಿ ಆರೋಪಿಗಳು ಮಡಿಕೇರಿ ನಗರ ಬಿಜೆಪಿ ಮುಖಂಡರ ಬೆಂಬಲಿಗರುಗಳೇ ಆಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಗಂಭೀರ ಆರೋಪ ಮಾಡಿದ್ದಾರೆ.

ದೇಶದ ಪ್ರಧಾನಿಗಳ ಬಗ್ಗೆ ಮಡಿಕೇರಿಯ ರಾಷ್ಟಿçÃಯ ಹೆದ್ದಾರಿ ಸಮೀಪದಲ್ಲಿ ಅನಧಿಕೃತ ಮಳಿಗೆಗಳನ್ನು ಮಡಿಕೇರಿಯ ಕೆಲವು ಬಿಜೆಪಿ ಮುಖಂಡರ ಬಹಿರಂಗ ಕುಮ್ಮಕ್ಕಿನಿಂದ ನಡೆಸುತ್ತಿರುವ ವ್ಯಕ್ತಿಯ ಸಿಬ್ಬಂದಿಗಳು ಅತ್ಯಂತ ಕೀಳಾಗಿ ನಿಂದಿಸಿ ವೀಡಿಯೋ ಹರಿಯಬಿಟ್ಟಿದ್ದು ಬಹಿರಂಗವಾಗಿದೆ. ಈ ಹಿನ್ನಲೆಯಲ್ಲಿ ಮಡಿಕೇರಿ ನಗರ ಪೋಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ಷಿಪ್ರಗತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದರಿ ಆರೋಪಿಗಳು ಮಡಿಕೇರಿ ಬಿಜೆಪಿ ಮುಖಂಡರ ಅನುಯಾಯಿಗಳಾಗಿದ್ದು, ಅವರ ಕೃಪಾಕಟಾಕ್ಷದಿಂದಲೇ ಇಂತಹ ದುಷ್ಕೃತ್ಯ ಎಸಗಿದ್ದಾರೆ. ಹಾಗಾಗಿ ಕೊಡಗು ಬಿಜೆಪಿ ಸಾರ್ವಜನಿಕವಾಗಿ ಜನರ ಕ್ಷಮೆಯಾಚಿಸಲಿ ಎಂದು ತೆನ್ನಿರ ಮೈನಾ ಒತ್ತಾಯಿಸಿದ್ದಾರೆ.

ಸದರಿ ಅಕ್ರಮ ಮಳಿಗೆಗಳನ್ನು ತೆರವುಗೊಳಿಸಲು ನಗರಸಭೆ ಸೂಚನೆ ನೀಡಿದ್ದರೂ ಬಿಜೆಪಿ ಪಕ್ಷದ ಕೆಲವು ನಗರಸಭಾ ಸದಸ್ಯರು ಅಕ್ರಮ ಮಳಿಗೆಯ ಪರ ನಿಂತು ನಗರಸಭೆ ಸಾಮಾನ್ಯ ಸಭೆಯಲ್ಲಿ ಕೂಡ ಇದನ್ನು ತೋರ್ಪಡಿಸಿದ್ದರು. ಇವರುಗಳ ಪರೋಕ್ಷ ಕುಮ್ಮಕ್ಕು ಈ ಕೃತ್ಯದ ಹಿಂದಿರುವ ಸಾಧ್ಯತೆಯಿದ್ದು, ಸೂಕ್ತ ತನಿಖೆಗೆ ಆಗ್ರಹಿಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.