ಸುಂಟಿಕೊಪ್ಪ, ಡಿ. ೧೧: ನಾವು ಯಾವುದೇ ಜಾತಿ, ಭಾಷೆ, ಧರ್ಮಗಳಿಗೆ ಸೇರಿದರೂ ಕೂಡ ಮೊದಲು ನಾವು ಭಾರತೀಯರು ಎಂಬುದು ನಮ್ಮ ಮನಸ್ಸಿನಿಂದ ಜಾತಿ ಭೇದ, ಕುಟುಂಬಗಳಲ್ಲಿ ಒಡಕು ತುಂಡು ತುಂಡಾಗಿರುವ ಸಮಾಜವನ್ನು ಒಗ್ಗೂಡಿಸಿ ವಸುದೈವ ಕುಟುಂಬಕA ಎಂಬ ಭಾವನೆಯಿಂದ ಸಮಾಜವನ್ನು ಕಟ್ಟಬೇಕಾಗಿದೆ ಎಂದು ಮೈಸೂರಿನ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೇರಾವೊ ಕರೆ ನೀಡಿದ್ದಾರೆ.
ಸಂತ ಮೇರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಾರ್ಷಿಕ ದಿನಾಚರಣೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು ಜಾತಿ, ಭಾಷೆ ಪಂಗಡ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಆಗುತ್ತಿರುವುದು ವಿಷಾದನೀಯ. ಇದನ್ನು ತಪ್ಪಿಸಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಸಮಾಜ ಕಟ್ಟುವ ಕೆಲಸ ಮಾಡಬೇಕೆಂದು ಹೇಳಿದರು. ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಎಂಡಿಇಎಸ್ ಕಾರ್ಯದರ್ಶಿ ಎಡ್ವರ್ಡ್ ವಿಲಿಯಂ ಸಾಲ್ಡಾನಾ ಮಾತನಾಡಿ ಜೀವನದಲ್ಲಿ ತಂದೆ ತಾಯಿಯರ ಪಾತ್ರ ಬಹುಮುಖ್ಯ. ಮಕ್ಕಳು ಹೇಗೆ ಬೆಳೆಯುತ್ತಾರೆ ಎಂಬುದು ತಂದೆ ತಾಯಿಯರ ಜೀವನದ ಪ್ರತಿಬಿಂಬವಾಗಿರುತ್ತಾರೆ. ಈ ಹಿನ್ನಲೆಯಲ್ಲಿ ಮಕ್ಕಳು ಮನೆಯೇ ಮೊದಲ ಪಾಠ ಶಾಲೆ ಎಂಬುದನ್ನು ನಾವು ಮರೆಯಬಾರದೆಂದು ಅವರು ಕರೆ ನೀಡಿದರು.
ಮಹಾನಟಿ ರಿಯಾಲಿಟಿ ಶೋನ ಸ್ಪರ್ಧಿ ಸಿಂಚನ ಆರ್. ಮಾತನಾಡಿ, ನಾವು ಇನ್ನೊಬ್ಬರನ್ನು ಅನುಕರಿಸುವುದನ್ನು ಬಿಡಬೇಕು ಪ್ರತಿಯೊಬ್ಬರೂ ವೈದ್ಯರು, ಇಂಜಿನಿಯರ್ ಆಗುವುದು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕೆಲಸ ಮಾಡಿ ಸಮಾಜದಲ್ಲಿ ಗೌರವದಿಂದ ಬಾಳಬೇಕೆಂದು ಕರೆ ನೀಡಿದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಸವರಾಜ್ ಮಾತನಾಡಿ, ಶಾಲಾ ಆಡಳಿತ ವರದಿ ಶಾಲೆಯ ಬಹುಮುಖ ಅಭಿವೃದ್ಧಿ ಮತ್ತು ಚಟುವಟಿಕೆಗಳನ್ನು ಪರಿಚಯಿಸಿದೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆ ಅತಿಮುಖ್ಯ ವಿದ್ಯೆ ಬರದಿಂದ ಜೀವನವನ್ನು ರೂಪಿಸಿಕೊಳ್ಳಬಹುದೆಂದು ಅವರು ಕರೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ ಮಾತನಾಡಿ, ಬದುಕಿನಲ್ಲಿ ಗುರಿ ಸಾಧನೆಗೆ ಆಸಕ್ತಿ ಶ್ರಮ ಮತ್ತು ಶ್ರದ್ಧೆ ಇದ್ದಾಗ ಸಾಧನೆಯಾಗುತ್ತದೆ ಎಂದು ಅವರು ಹೇಳಿದರು. ಶಿಕ್ಷಣ ಸಂಸ್ಥೆಯು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ್ದು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಶಿಕ್ಷಕ ಬಂಧುಗಳು ಪೋಷಕ ವರ್ಗವನ್ನು ಅಭಿನಂದಿಸುವುದಾಗಿ ಅವರು ಹೇಳಿದರು. ವೀರಾಜಪೇಟೆ ಜೇಮ್ಸ್ ಡೊಮಿನಿಕ್ ಸಂತ ಅನ್ನಮ್ಮನವರ ದೇವಾಲಯ ಹಾಗೂ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರು, ವೀರಾಜಪೇಟೆ ಸಂತ ಅನ್ನಮ್ಮನವರ ಕಾಲೇಜು ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರಾದ ಮದಲೈಮುತ್ತು, ಮಡಿಕೇರಿ ಸಂತ ಮೈಕಲರ ದೇವಾಲಯ ಧರ್ಮಗುರುಗಳಾದ ಜಾರ್ಜ್ ದೀಪಕ್, ಹಟ್ಟಿಹೊಳೆ ಪವಿತ್ರ ಜಪಮಾಲೆ ಮಾತೆಯ ದೇವಾಲಯದ ಧರ್ಮಗುರುಗಳಾದ ಗಿಲ್ಬರ್ಟ್ ಡಿಸಿಲ್ವ, ಪೊನ್ನಂಪೇಟೆ ದೇವಾಲಯದ ಧರ್ಮಗುರುಗಳಾದ ಮಾನ್ಯುಯಲ್ ಡಿ ಸೋಜಾ, ಮೈಸೂರು ಧರ್ಮಕೇಂದ್ರದ ಗುರುಗಳಾದ ನವೀನ್ ಕುಮಾರ್, ಸೋಮವಾರಪೇಟೆ ಸಂತ ಜೋಸೆಫರ ವಿದ್ಯಾಸಂಸ್ಥೆ ವ್ಯವಸ್ಥಾಪಕರಾದ ಅವಿನಾಶ್, ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕರಾದ ಜಯಕುಮಾರ್, ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್, ಸಂತ ಮೇರಿ ವಿದ್ಯಾಸಂಸ್ಥೆಯ ಪ್ರಾಚಾರ್ಯರಾದ ಸೆಲ್ವರಾಜ್ ಮತ್ತಿತರರು ಇದ್ದರು. ವಿದ್ಯುತ್ ದೀಪಾಲಂಕೃತ ಭವ್ಯ ವೇದಿಕೆಯಲ್ಲಿ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೂರೆಗೊಳಿಸಿತು.