ನಾಪೋಕ್ಲು, ಡಿ. ೧೧: ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದ ನೆಬ್ಬೂರು ಗೌಡ ಸಂಘದ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಕಟ್ರತನ ಲೋಕನಾಥ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಮಡಿಕೇರಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕರು, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕೊಟ್ಟಕೇರಿಯನ ಧಮೇಂದ್ರ, ಕ್ರೀಡಾ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನ ಪಡೆದ ಪೂನ್ನಚನ ವೃಂಧಾ ಹಾಗೂ ಎಂ.ಬಿ.ಎ. ಸ್ನಾತಕೋತರ ಪದವಿಯಲ್ಲಿ ಅತ್ಯುತ್ತಮ ಇಂಟರ್ನ್ಶಿಫ್ ಪ್ರಶಸ್ತಿ ಪಡೆದ ಕೋಟ್ಟಕೇರಿಯನ ಮೋನಿಕಾ ಇವರುಗಳನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಹಿರಿಯ ವಕೀಲ ಕೊಟ್ಟಕೇರಿಯನ ದಯಾನಂದ ಸಂಘದ ಸಮಗ್ರ ಅಭಿವೃದ್ಧಿ ಬಗ್ಗೆ ಸಲಹೆ - ಸೂಚನೆಯನ್ನು ನೀಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಗ್ಗ-ಜಗ್ಗಾಟ, ತೆಂಗಿನ ಕಾಯಿಗೆ ಕಲ್ಲು ಹೊಡೆಯುವುದು, ಕಣ್ಣಿಗೆ ಬಟ್ಟೆ ಕಟ್ಟಿ ಮಾಡಿಕೆ ಒಡೆಯುವುದು, ಹೀಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಿ ವಿಜೇತರಾದವರಿಗೆ ಗಣ್ಯರು ಬಹುಮಾನವನ್ನು ವಿತರಿಸಿದರು. ಸಂಘದ ಕಾರ್ಯದರ್ಶಿ ಪೊನ್ನಚ್ಚನ ರೋಹಿತ್ ವರದಿ ವಾಚಿಸಿ, ಪೊನ್ನಚ್ಚನ ಹರೀಶ್ ಸ್ವಾಗತಿಸಿದರೆ, ಪೊನ್ನಚ್ಚನ ಡಯನ ವಂದಿಸಿದರು.