ಚೆಯ್ಯಂಡಾಣೆ, ಡಿ. ೧೧: ಚಾಲಕನ ನಿಯಂತ್ರಣ ಕಳೆದುಕೊಂಡ ಮಾರುತಿ ಕಾರು ರಸ್ತೆ ಬದಿಯ ತೋಟದ ಚರಂಡಿಗೆ ಉರುಳಿ ಬಿದ್ದ ಘಟನೆ ನಾಪೋಕ್ಲು - ಮಡಿಕೇರಿ ಮುಖ್ಯರಸ್ತೆಯ ಕೊಟ್ಟಮುಡಿ ಜಂಕ್ಷನ್ ಬಳಿ ಗುರುವಾರ ಸಂಜೆ ನಡೆದಿದೆ.

ಕುಶಾಲನಗರದಿಂದ ಬೆಟ್ಟಗೇರಿ, ಕೊಟ್ಟಮುಡಿ ಮಾರ್ಗವಾಗಿ ಬಲ್ಲಮಾವಟಿ ಗ್ರಾಮದ ನಿವಾಸಿ ನಿತಿನ್ ಎಂಬವರು ತಮ್ಮ ಮಾರುತಿ ಓಮಿನಿ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಕೊಟ್ಟಮುಡಿ ಜಂಕ್ಷನ್ ಬಳಿಯ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ಕಾರು ರಸ್ತೆ ಬದಿಯ ತೋಟದ ಚರಂಡಿಗೆ ಉರುಳಿ ಬಿದ್ದಿದೆ. ಅಪಘಾತದಿಂದ ಕಾರಿಗೆ ಹಾನಿಯಾಗಿದ್ದು, ನಿತಿನ್ ಹಾಗೂ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉರುಳಿ ಬಿದ್ದ ಕಾರನ್ನು ಸಾರ್ವಜನಿಕರ ಸಹಕಾರದಿಂದ ಮೇಲೆತ್ತಿ ತೆರವುಗೊಳಿಸಲಾಯಿತು.