ಕೊಡ್ಲಿಪೇಟೆ, ಡಿ. ೧೦: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಗ್ರಾಮ ಸಭೆ ಹಾಗೂ ಸಂತೆ ಮೇಳ ಜರುಗಿತು.

ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ಪಾವನ, ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ ಸ್ಥಳೀಯ ಮಟ್ಟದ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಯ ಗಮನ ಸೆಳೆಯಲು ಮಹಿಳಾ ಗ್ರಾಮಸಭೆ ಸಹಕಾರಿಯಾಗಿದೆ. ಸಭೆಯಲ್ಲಿ ಚರ್ಚೆಯಾಗುವ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಆಡಳಿತ ಮಂಡಳಿ ಮುಂದಾಗಲಿದೆ ಎಂದರು.

ಇದರೊAದಿಗೆ ಮಹಿಳೆಯರು ಸ್ವಾವಲಂಭಿಗಳಾಗಲು, ಅವರಲ್ಲಿ ವ್ಯಾವಹಾರಿಕ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಮಹಿಳಾ ಸಂತೆ ಮೇಳ ಆಯೋಜಿಸಲಾಗುತ್ತಿದೆ. ಇದು ಮಹಿಳೆಯರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಲು ಸಹಕಾರಿಯಾಗಿದೆ ಎಂದರು.

ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಕೊಡ್ಲಿಪೇಟೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ರಬ್ ಮಾತನಾಡಿ, ರಾಷ್ಟçದಲ್ಲಿ ಎಲ್ಲಾ ರೀತಿಯ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಇದೆ. ಮಹಿಳೆಯರು ಜಾಗೃತರಾಗಿ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ ಎಂದರು. ಪಂಚಾಯಿತಿ ವ್ಯಾಪ್ತಿಯ ಮಹಿಳೆಯರು ಮಹಿಳಾ ಗ್ರಾಮಸಭೆಯಲ್ಲಿ ಭಾಗವಹಿಸಿ, ತಮ್ಮ ಗ್ರಾಮ ವ್ಯಾಪ್ತಿಯಲ್ಲಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರಾದ ಹನೀಫ್, ದಿನೇಶ್ ಕುಮಾರ್, ದೊಡ್ಡಯ್ಯ, ಮೋಕ್ಷಿಕ್‌ರಾಜ್, ರೇಣುಕಾ, ವಿನೋದಾ, ಅಭಿವೃದ್ಧಿ ಅಧಿಕಾರಿ ಹರೀಶ್ ಇದ್ದರು. ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಆಯೋಜಿಸಿದ್ದ ಸಂತೆಮೇಳದಲ್ಲಿ, ಒಕ್ಕೂಟದ ಮಹಿಳಾ ಸದಸ್ಯರುಗಳು ತಮ್ಮ ಮನೆಯಲ್ಲಿ ಸಿದ್ಧಪಡಿಸಿದ ತಿಂಡಿ ತಿನಿಸುಗಳು ಹಾಗೂ ಹಣ್ಣು ತರಕಾರಿಗಳನ್ನು ಮಾರಾಟ ಮಾಡಿದರು.

ಒಕ್ಕೂಟದ ತಾಲೂಕು ವ್ಯವಸ್ಥಾಪಕ ಜಯಚಂದ್ರ, ವಲಯ ಮೇಲ್ವಿಚಾರಕಿ ಪದ್ಮಶ್ರೀ, ಸ್ಥಳೀಯ ಘಟಕದ ಅಧ್ಯಕ್ಷೆ ಸರೋಜಮ್ಮ, ಪ್ರಮುಖರಾದ ಶ್ವೇತಾ, ಹರಿಣಾಕ್ಷಿ, ಜ್ಯೋತಿ, ಶ್ವೇತಾ ಪ್ರದೀಪ್, ಒಕ್ಕೂಟದ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ನೌಕರರು ಇದ್ದರು.