ಮಡಿಕೇರಿ, ಡಿ. ೫: ವೀರಾಜಪೇಟೆ ಬಾರ್ ಅಸೋಸಿಯೇಷನ್ ವತಿಯಿಂದ ವಕೀಲರ ದಿನಾಚರಣೆಯನ್ನು ಆಚರಿಸಲಾಯಿತು.

ಪೆರಂಬಾಡಿಯ ಖಾಸಗಿ ರೆಸಾರ್ಟ್ ಸಭಾಂಗಣದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಸಕರಾದ ಎ.ಎಸ್. ಪೊನ್ನಣ್ಣ ಭಾಗವಹಿಸಿ ಮಾತನಾಡಿದರು. ವಕೀಲ ವೃತ್ತಿ ಅತ್ಯಂತ ಪವಿತ್ರ ಹಾಗೂ ವಿಶ್ವಾಸನೀಯವಾದುದಾಗಿದೆ.

ಕಕ್ಷಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ನ್ಯಾಯ ಕೊಡಿಸಲು ಸಕಲ ಪ್ರಯತ್ನ ಮಾಡುವುದೇ ವಕೀಲರ ಆದ್ಯ ಕರ್ತವ್ಯವಾಗಿದೆ ಎಂದು ಕಿವಿಮಾತು ಹೇಳಿದರು.

ಎಲ್ಲಕ್ಕಿಂತ ಮಿಗಿಲಾಗಿ ಸಂವಿಧಾನಕ್ಕೆ ತಲೆಬಾಗಬೇಕು. ಸಂವಿಧಾನದ ಮೌಲ್ಯವನ್ನು ಎತ್ತಿಹಿಡಿಯುವ ಕೆಲಸ ವಕೀಲರು ಮಾಡಬೇಕಾಗಿದೆ. ದೇಶದ ಭದ್ರತೆ, ದೇಶದ ಏಳಿಗೆ ಹಾಗೂ ದೇಶದ ಜನರ ಬದುಕಿಗೆ ದಾರಿದೀಪ ಆಗುವ ಕೆಲಸ ವಕೀಲರ ಪಾಲಿಗೆ ಲಭಿಸುತ್ತದೆ. ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆಯನ್ನು ಬೆಳೆಸಿಕೊಂಡು ತಮ್ಮನ್ನು ನಂಬಿದ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವುದೇ ವಕೀಲ ವೃತ್ತಿಯ ಪರಮಧರ್ಮ ಆಗಿರಬೇಕೆಂದು ಕರೆ ನೀಡಿದರು.

ಈ ಸಂದರ್ಭ ನ್ಯಾಯಾಧೀಶರಾದ ನಟರಾಜ್, ಮಂಜುನಾಥ್, ಪ್ರದೀಪ್ ಪೊತದರ್, ವೀರಾಜಪೇಟೆ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ. ಪೂವಣ್ಣ, ವಕೀಲರಾದ ನರೇಂದ್ರ ಕಾಮತ್, ಸೋಮಣ್ಣ ಬಿ.ಎ., ವಕೀಲ ಸಿ.ಕೆ. ಪೊನ್ನಣ್ಣ, ಸಂಘದ ಸದಸ್ಯರು, ಪದಾಧಿಕಾರಿಗಳು ಹಾಗೂ ಹಿರಿಯ ವಕೀಲರು ಉಪಸ್ಥಿತರಿದ್ದರು.