ಆಲೂರು-ಸಿದ್ದಾಪುರ, ಡಿ. ೫: ಆಲೂರು-ಸಿದ್ದಾಪುರ ಕಾಂಗ್ರೆಸ್ ವಲಯ ಅಧ್ಯಕ್ಷರ ಹಾಗೂ ಸದಸ್ಯರ ಸಭೆ ಮಾಲಂಬಿಯಲ್ಲಿ ಆಲೂರು - ಸಿದ್ದಾಪುರ ವಲಯ ಅಧ್ಯಕ್ಷ ಎಂ.ವಿ. ಅಶೋಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಪಕ್ಷ ಸಂಘಟನೆ ಒಂದೇ ನಮ್ಮ ಗುರಿ ಆಗಬೇಕು. ಮುಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ಬರಲಿದ್ದು, ಎಲ್ಲರೂ ಕ್ರಿಯಾಶೀಲರಾಗಬೇಕು.
ಈಗಾಗಲೇ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಶಾಸಕ ಮಂತರ್ ಗೌಡ ಅವರು ಈ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಈ ಬಗ್ಗೆ ಜನರಿಗೆ ಪ್ರಚಾರ ಮಾಡಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಬೇಕು. ಯಾವುದೇ ಮನಸ್ತಾಪ ಮಾಡಿಕೊಳ್ಳದೆ ಯೋಗ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಲಾರೆನ್ಸ್ ಮಾತನಾಡಿ, ನಮ್ಮ ಯೋಜನೆಗಳನ್ನು ಮನೆ ಮನೆಗೆ ಪ್ರಚಾರ ಮಾಡಬೇಕು. ಯಾವುದೇ ಅನುಮಾನ ಬೇಡ.
ಈಗಾಗಲೇ ಎಲ್ಲಾ ಉಚಿತ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುತ್ತಿದೆ. ಅದಕ್ಕಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಆಗಿದೆ. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ನಮ್ಮ ಕೈ ಸೇರಬೇಕು ಎಂದರು.
ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಮಾತನಾಡಿ, ಯುವಕರು ಹೆಚ್ಚು ಚುರುಕಾಗ ಬೇಕು. ನಮಗೆ ಕೊಟ್ಟ ಸ್ಥಾನ ಮಾನಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಮುಂದೆ ಒಂದು ಉತ್ತಮ ಯುವ ತಂಡ ಕಾಂಗ್ರೆಸ್‌ನಲ್ಲಿ ರಚನೆಗೊಳ್ಳಲಿದೆ ಎಂದರು.
ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ರಾಜಮ್ಮ ರುದ್ರಯ್ಯ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಜನಾರ್ಧನ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುನಿಲ್, ಪ್ರಚಾರ ಸಮಿತಿ ಸದಸ್ಯ ವಿನೋದ್, ಪ್ರಮುಖರಾದ ಹೆಚ್.ಟಿ. ಕೋಮರಪ್ಪ, ಲೀಲಾದಾಸ್, ಗಣೇಶ್, ಸುಮೇಶ್, ಕಣಿವೆ - ಬಸವನಹಳ್ಳಿ ಎನ್. ದಿನೇಶ್, ಸ್ವಾಮಿಗೌಡ, ವೆಂಕಟೇಶ್, ಎಂ.ಈ. ರಮೇಶ್, ಗಿರೀಶ್ ಹಾಗೂ ಮುಂತಾದವರಿದ್ದರು.