ಚೆಯ್ಯಂಡಾಣೆ/ನಾಪೋಕ್ಲು, ಡಿ. ೫: ಸಿಲ್ವರ್ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಘಟನೆ ನಾಪೋಕ್ಲು ಮೂರ್ನಾಡು ಮುಖ್ಯರಸ್ತೆಯ ಹೊದ್ದೂರು ಗ್ರಾಮದಲ್ಲಿ ನಡೆದಿದೆ.

ನಾಪೋಕ್ಲು ಕಡೆಯಿಂದ ಮೂರ್ನಾಡು ಮಾರ್ಗವಾಗಿ ಕೇರಳಕ್ಕೆ ಸಿಲ್ವರ್ ಮರದ ನಾಟಾಗಳನ್ನು ತುಂಬಿ ಸಾಗುತ್ತಿರುವ ಸಂದರ್ಭ ಹೊದ್ದೂರು ಗ್ರಾಮದ ಬಳಿಯ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.

ಅಪಘಾತದಿಂದ ಮೂರು ವಿದ್ಯುತ್ ಕಂಬ ಸೇರಿದಂತೆ ಮನೆ ಕಾಂಪೌAಡ್ ಗೇಟ್‌ಗೆ ಹಾಗೂ ಬೈಕ್‌ಗೆ ಹಾನಿಯಾಗಿ ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದು ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸೆಸ್ಕ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಪೊಲೀಸರು ಸಾರ್ವಜನಿಕರ ಸಹಕಾರದಿಂದ ರಸ್ತೆಯಲ್ಲಿದ್ದ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಅಪಘಾತದಿಂದ ಲಾರಿಯ ಚಾಲಕ ಹಾಗೂ ಕ್ಲೀನರ್‌ಗೆ ಗಾಯಗಳಾಗಿದ್ದು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.