ಸಿದ್ದಾಪುರ, ಡಿ. ೩: ಬಾಡಗ ಬಾಣಂಗಾಲ ಗ್ರಾಮದ ಮಠ ಭಾಗದಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಲಿ ಸಂಚಾರ ನಡೆಸುತ್ತಿರುವ ಕಾಫಿ ತೋಟಗಳಿಗೆ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಚರ್ಚಿಸಿದರು. ಹುಲಿಯ ಚಲನವಲನ ಕಂಡುಹಿಡಿಯಲು ಸೂಚಿಸಿದ ಸೋನಾಲ್ ಅವರು, ಹುಲಿ ಸೆರೆಗೆ ಅನುಮತಿ ಕೋರಿ ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಸರಕಾರದ ಆದೇಶ ಬಂದ ಕೂಡಲೇ ಹುಲಿಯ ಸೆರೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಾಫಿ ಫಸಲು ಹಣ್ಣಾಗಿರುವ ಹಿನ್ನೆಲೆ ಸಾಕಾನೆ ಬಳಸಿಕೊಂಡು ತೋಟಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹುಲಿಯ ಚಲನವಲನ ಕಂಡುಹಿಡಿಯುವ ನಿಟ್ಟಿನಲ್ಲಿ ಈ ಹಿಂದೆ ಈ ಭಾಗದ ಕಾಫಿ ತೋಟಗಳಲ್ಲಿ ಕ್ಯಾಮರಗಳನ್ನು ಅಳವಡಿಸಲಾಗಿತ್ತು. ಕ್ಯಾಮರದಲ್ಲಿ ಹುಲಿಯ ಚಿತ್ರವೂ ಸೆರೆಯಾಗಿತ್ತು. ಆ ಬಳಿಕ ಹುಲಿಯ ಸೆರೆಗೆ ಅರಣ್ಯ ಇಲಾಖೆ ವತಿಯಿಂದ ಬಾಡಗ ಗ್ರಾಮದ ಖಾಸಗಿ ಸಂಸ್ಥೆಯ ಕಾಫಿ ತೋಟದೊಳಗೆ ಒಂದು ಬೋನ್ ಇರಿಸಿ ಒಳಗೆ ಆಡನ್ನು ಕಟ್ಟಿ ಹಾಕಲಾಗಿತ್ತು. ಆದರೆ ಹಲವು ದಿನಗಳವರೆಗೆ ಬೋನಿಗೆ ಹುಲಿ ಬೀಳದಿರುವ ಹಿನ್ನೆಲೆಯಲ್ಲಿ ಬೋನ್ ತೆರವು ಮಾಡಲಾಗಿತ್ತು. ಇದೀಗ ಮತ್ತೆ ಹುಲಿಯ ಉಪಟಳ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಬೋನ್ ಇಡಲು ನಿರ್ಧರಿಸಲಾಗಿದೆ. ದಕ್ಷಿಣ ಕೊಡಗಿನಲ್ಲಿ ಹುಲಿಯ ಉಪಟಳ ಇರುವ ಹಿನ್ನೆಲೆಯಲ್ಲಿ ಆ ಭಾಗಕ್ಕೆ ಬೋನನ್ನು ತೆಗೆದುಕೊಂಡು ಹೋಗಲಾಗಿದ್ದು ಅದನ್ನು ಈ ಭಾಗಕ್ಕೆ ತಂದು ಇರಿಸಲಾಗುವುದೆಂದು ಅರಣ್ಯ ಇಲಾಖೆಯಿಂದ ತಿಳಿದು ಬಂದಿದೆ. ಈ ಸಂದರ್ಭ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್. ಜಗನ್ನಾಥ್, ಎ.ಸಿ.ಎಫ್. ಗೋಪಾಲ್, ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್, ತಿತಿಮತಿ ವಲಯ ಅರಣ್ಯ ಅಧಿಕಾರಿ, ಗಂಗಾಧರ್ ಉಪವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.