ಮಡಿಕೇರಿ, ಡಿ. ೨ : ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷರಾಗಿ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕಾರ್ಯದರ್ಶಿಯಾಗಿ ವಾಟೇರಿರ ಶಂಕರಿ ಪೂವಯ್ಯ ಅವರು ಮುಂದಿನ ಮೂರು ವರ್ಷಗಳ ಅವಧಿಗೂ ಪುನರ್ ನೇಮಕಗೊಂಡಿದ್ದಾರೆ.
ಬಾಳುಗೋಡಿನಲ್ಲಿರುವ ಕೊಡವ ಸಾಂಸ್ಕೃತಿಕ ಕೇಂದ್ರ ಹಾಗೂ ಕ್ರೀಡಾ ಸಮುಚ್ಚಯದಲ್ಲಿ ನಡೆದ ಒಕ್ಕೂಟದ ಮಹಾಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಹಾಲಿ ಅಧ್ಯಕ್ಷ ವಿಷ್ಣು ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಲಿ ಆಡಳಿತ ಮಂಡಳಿಯ ಕಾರ್ಯವೈಖರಿ ಹಾಗೂ ಕೇಂದ್ರದ ಆವರಣದಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಗೊಂಡಿತು. ಸರಕಾರದಿಂದ ದೊರೆತಿರುವ ರೂ. ೬ ಕೋಟಿ ಅನುದಾನದಲ್ಲಿ ಹಲವು ಕೆಲಸಗಳನ್ನು ಸಮರ್ಪಕವಾಗಿ ನಡೆಸಲಾಗಿದೆ. ಅಲ್ಲದೆ ಇನ್ನಷ್ಟು ಕೆಲಸಗಳನ್ನು ಪೂರೈಸಬೇಕಿದೆ ಎಂಬ ಸದಭಿಪ್ರಾಯದೊಂದಿಗೆ ಈಗಿನ ಆಡಳಿತ ಮಂಡಳಿಯನ್ನೇ ಮುಂದಿನ ಸಾಲಿಗೂ ಮುಂದುವರಿಸಲು ಸಭೆಯಲ್ಲಿದ್ದವರು ಸಮ್ಮತ್ತಿಯಿತ್ತರು. ಇದರೊಂದಿಗೆ ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಪ್ರಕಟಿಸಲಾಗಿದ್ದ ರೂ. ೫ ಕೋಟಿ ಅನುದಾನ ಇನ್ನೂ ಲಭ್ಯವಾಗಿಲ್ಲ. ಈ ಬಗ್ಗೆ ಪ್ರಯತ್ನಿಸಿ ಈ ಅನುದಾನ ಪಡೆದುಕೊಳ್ಳುವ ಮೂಲಕ ಕ್ರೀಡಾ ಸಮುಚ್ಚಯದ ಇನ್ನಷ್ಟು ಅಭಿವೃದ್ದಿಗೆ ಪ್ರಯತ್ನ ನಡೆಸಲು ಸಲಹೆ ನೀಡಲಾಯಿತು.
ಕೊಡವ ಸಂಸ್ಕೃತಿ - ಆಚಾರ ವಿಚಾರಗಳ ಬಗ್ಗೆ ಕ್ರಿಯಾಶೀಲ ಪ್ರಯತ್ನ ಹಾಗೂ ಜನಾಂಗದ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಲು ಸಭೆ ಸೂಚಿಸಿತು. ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ೨೦೨೮ ರಿಂದ ಬಾಳುಗೋಡುವಿನ ಕ್ರೀಡಾ ಸಮುಚ್ಚಯದಲ್ಲೇ ನಡೆಸಲು ಅಗತ್ಯ ಗಮನಹರಿಸಲು ನಿರ್ಧರಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಮಹಾಪೋಷಕರಾದ ಮಾಜಿ ಸಚಿವ ಎಂ.ಸಿ. ನಾಣಯ್ಯ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದಾ ಬೆಳ್ಯಪ್ಪ, ಉಪಾಧ್ಯಕ್ಷರುಗಳಾದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಸೋಮವಾರಪೇಟೆ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್, ಬಾಳೆಲೆ ಸಮಾಜದ ಮಲಚೀರ ಬೋಸ್, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಜಂಟಿ ಕಾರ್ಯದರ್ಶಿ ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಮೀದೇರಿರ ಸವಿನ್ ಉಪಸ್ಥಿತರಿದ್ದರು.
ಅಮ್ಮತ್ತಿ, ನಾಪೋಕ್ಲು, ವೀರಾಜಪೇಟೆ, ಪೊನ್ನಂಪೇಟೆ, ಬೆಪ್ಪುನಾಡ್, ಆರಾಯಿರನಾಡ್, ಚೆಯ್ಯಂಡಾಣೆ ಸೇರಿದಂತೆ ವಿವಿಧ ಕೊಡವ ಸಮಾಜಗಳ ಅಧ್ಯಕ್ಷರು, ಒಕ್ಕೂಟದ ಸದಸ್ಯರು ಪಾಲ್ಗೊಂಡಿದ್ದರು.
ಚೇAದAಡ ಮೀನಾ ಪ್ರಾರ್ಥಿಸಿ, ವಿಷ್ಣು ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಶಂಕರಿ ಪೂವಯ್ಯ ಸ್ವಾಗತಿಸಿ, ವಂದಿಸಿದರು.