ಕುಶಾಲನಗರ, ಡಿ. ೨: ಕುಶಾಲನಗರ ಗೌಡ ಸಮಾಜದಲ್ಲಿ ತಾ. ೪ರಂದು ಹುತ್ತರಿ ಹಬ್ಬ ಆಚರಣೆ ನಡೆಯಲಿದೆ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ತಿಳಿಸಿದ್ದಾರೆ.
ಸಮಾಜದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಗೌಡ ಸಮಾಜ, ಗೌಡ ಯುವಕ ಸಂಘ ಗೌಡ ಮಹಿಳಾ ಸ್ವಸಹಾಯ ಸಂಘ, ನಿವೃತ್ತ ಗೌಡ ಸೈನಿಕರ ಒಕ್ಕೂಟ ಸೇರಿದಂತೆ ಸಮಾಜದ ವಿವಿಧ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಅದ್ದೂರಿ ಹುತ್ತರಿ ಹಬ್ಬ ಆಚರಣೆ ಮಾಡಲಾಗುವುದು.
ರಾತ್ರಿ. ೭.೩೦ಕ್ಕೆ ಗೌಡ ಸಮಾಜದಲ್ಲಿ ಸೇರಿ ಫಲಹಾರ, ನಂತರ ೮.೪೦ ಕ್ಕೆ ನೆರೆಕಟ್ಟುವುದು ತದನಂತರ ಗಣಪತಿ ದೇವಾಲಯಕ್ಕೆ ಮೆರವಣಿಗೆ ಮೂಲಕ ತೆರಳಿ ಪೂಜೆ ಸಲ್ಲಿಸಲಾಗುವುದು. ೯.೪೦ ಕ್ಕೆ ಹಾರಂಗಿ ರಸ್ತೆಯಲ್ಲಿರುವ ಗೌಡ ಯುವಕ ಸಂಘ ಕಟ್ಟಡದ ಬಳಿಯ ಗದ್ದೆಯಿಂದ ಕದಿರು ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಸ್ಥಳದಲ್ಲಿ ಸಮುದಾಯದವರಿಗೆ, ಸಾರ್ವಜನಿಕರಿಗೆ ಕದಿರು ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷರಾದ ಸೆಟ್ಟೇಜನ ದೊರೆ ಗಣಪತಿ, ಕುಲ್ಲಚೆಟ್ಟಿರ ಕಾಶಿ ಪೂವಯ್ಯ, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಸಮಾಜದ ಕಾರ್ಯದರ್ಶಿ ಕುಲ್ಲಚನ ಹೇಮಂತ್, ಗೌಡ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿ ಕುದುಪಜೆ ದೇವಕಿ, ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚೀಯಂಡಿ ಶಾಂತಿ, ಗೌಡ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸೂದನ ಗೋಪಾಲ್, ನಿವೃತ್ತ ಗೌಡ ಸೈನಿಕರ ಒಕ್ಕೂಟದ ವೇದಿಕೆ ಅಧ್ಯಕ್ಷ ದೇವಜನ ಚಿನ್ನಪ್ಪ ನಿರ್ದೇಶಕ ಕೂರನ ಪ್ರಸನ್ನ, ಗುಡ್ಡೆಮನೆ ವಿಶ್ವ ಕುಮಾರ್ ಇದ್ದರು.