ಕನ್ನಡ ಭಾಷೆಯ ಉಳಿಸುವುದು ಕನ್ನಡಿಗರ ಕರ್ತವ್ಯ : ಟಿ.ಪಿ. ರಮೇಶ್ಸೋಮವಾರಪೇಟೆ, ನ. ೩೦ : ಕನ್ನಡ ಭಾಷೆಯ ಉಳಿವು; ಅದನ್ನು ಬಳಸುವ ಕನ್ನಡಿಗರ ಕರ್ತವ್ಯವಾಗಿದೆ. ನಾವು ಕನ್ನಡದಲ್ಲಿ ಮಾತನಾಡಿದಾಗ, ಕನ್ನಡದಲ್ಲಿ ಬರೆದಾಗ, ಕನ್ನಡದ ಸಾಹಿತ್ಯ ಓದಿದಾಗ, ಕನ್ನಡದ ಕಲೆಯನ್ನು ಬೆಂಬಲಿಸಿದಾಗ ಮಾತ್ರ ಕನ್ನಡ ಭಾಷೆ ಬದುಕುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು.
ಇಲ್ಲಿನ ಸಂತ ಜೋಸೆಫರ ವಿದ್ಯಾ ಸಂಸ್ಥೆ ಮತ್ತು ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ೭೦ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಸಂಭ್ರಮ- ೨೦೨೫ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಕನ್ನಡ ಅತೀ ಪ್ರಾಚೀನ ಹಾಗೂ ತರ್ಕಬದ್ಧ ಭಾಷೆಯಾಗಿದೆ. ೮ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕನ್ನಡಿಗರು ಕನ್ನಡವನ್ನು ಹೆಮ್ಮೆಯಿಂದ ಮಾತನಾಡಬೇಕು. ಪರಭಾಷಿಕರಿಗೆ ಕನ್ನಡವನ್ನು ಮಾತನಾಡುವಂತೆ ಹೇಳಿಕೊಡಬೇಕು ಎಂದು ಹೇಳಿದರು.
ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಗೆ ಎಲ್ಲಾ ಕ್ಷೇತ್ರದಲ್ಲೂ ಮೊದಲ ಆದ್ಯತೆ ನೀಡಬೇಕು. ಕನ್ನಡವನ್ನು ದಿನನಿತ್ಯದ ಬದುಕಿನ ಭಾಷೆಯಾಗಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಸಂತ ಜೋಸೆಫ್ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ಅವಿನಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕನ್ನಡದ ಮೌಲ್ಯಗಳನ್ನು ಕಲಿಸುವಲ್ಲಿ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಕೆಲ ಮಕ್ಕಳಿಗೆ ಕನ್ನಡವನ್ನು ಓದಲೂ ಬರುವುದಿಲ್ಲ. ಪೋಷಕರು ಮಕ್ಕಳು ಕನ್ನಡವನ್ನು ಕಲಿಯುವಂತೆ ತಿಳಿ ಹೇಳಬೇಕು ಎಂದು ತಿಳಿಸಿದರು.
ಹತ್ತನೆ ಮತ್ತು ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಪಡೆದ ಯು.ಎನ್. ಖುಷಿ, ಕೆ.ಎಸ್. ರೇಚನ, ಎಚ್.ಜೆ.ಸಹನ, ಎಚ್.ಪಿ.ದುರ್ಗಾಶ್ರಿ, ಧನ್ಯಶ್ರೀ, ಲಿಶ್ಮಾ ಡಯಾಸ್, ಜಾಹ್ನವಿ, ತನಿಶಾ ರೈ, ಎಸ್.ವೈ.ಹಿಮಾನಿ, ಮೆಹರೂಪ್, ಸಿ.ಎಲ್.ಡಿಂಪಲ್ ಅವರುಗಳನ್ನು ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಸೇರಿದಂತೆ ಅತಿಥಿಗಳು ಸನ್ಮಾನಿಸಿದರು.
ವಿವಿಧ ವಿಭಾಗಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಜರುಗಿದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿವೃತ್ತ ಶಿಕ್ಷಕ ಸಿ.ಎಲ್.ಸುಬ್ಬಯ್ಯ, ಸಾಹಿತಿ ಲಾವಣ್ಯ ಮೋಹನ್, ಧರ್ಮಗುರು ಅವಿನಾಶ್ ಅವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ.ವಿಜೇತ್, ಬಿಇಒ ಎಂ.ಕೃಷ್ಣಪ್ಪ, ಸಾಹಿತಿ ಜಲಾ ಕಾಳಪ್ಪ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ಶೀಲಾ ಡಿಸೋಜ, ಕಸಾಪ ಕಾರ್ಯದರ್ಶಿ ಜ್ಯೋತಿ ಅರುಣ್, ನಿವೃತ್ತ ಶಿಕ್ಷಕಿ ಅನುರಾಧ ಮತ್ತಿತರರು ಇದ್ದರು.