ಮೈಸೂರು, ನ. ೩೦: ದಸರಾ ಆನೆ ಅರ್ಜುನನ ಎರಡನೇ ವರ್ಷದ ನೆನಪು ಹಾಗೂ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಡಿ.೪ ರಂದು ಮೈಸೂರಿನಲ್ಲಿ ಜರುಗಲಿದೆ.
ಮೈಸೂರು ಕಲ್ಚರಲ್ ಅಸೋಸಿಯೇಷನ್ ಹಾಗೂ ಕಲಿಸು ಫೌಂಡೇಷನ್ ವತಿಯಿಂದ ಅಂದು ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ನಲ್ಲಿ ಬೆಳಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ಜರುಗಲಿದೆ. ೨೦೨೩ರ ಡಿಸೆಂಬರ್ ೪ ರಂದು ಅರ್ಜುನ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರಿನಲ್ಲಿ ಮದಗಜದೊಂದಿಗೆ ಹೋರಾಡುತ್ತಾ ದುರಂತ ಅಂತ್ಯ ಕಂಡ ದಿನ. ಕಳೆದ ವರ್ಷ ಕೂಡ ಕಲ್ಚರಲ್ ಅಸೋಸಿಯಷನ್ ಮೊದಲ ವರ್ಷದ ಕಾರ್ಯಕ್ರಮ ನಡೆಸಿತ್ತು.
ಐತಿಚಂಡ ರಮೇಶ್ ಉತ್ತಪ್ಪ ಅವರ ೪೦ನೇ ಕೃತಿ ಅರ್ಜುನ ಬಲಿಯಾದ ಘಟನೆಯ ತನಿಖಾ ವರದಿಯನ್ನು ಒಳಗೊಂಡ ‘‘ಸಾವಿನ ಸತ್ಯ-ಅರ್ಜುನ ನಿನ್ನ ಕೊಂದದ್ದು ಮದಗಜವಲ್ಲ ಪಾಪಿ ಮನುಷ್ಯ” ಹಾಗೂ ‘‘ದಸರಾ ಆನೆಗಳು- ಭೀಮ ಹಾಗೂ ಇತರರು” ಕೃತಿಗಳನ್ನು ಬಿಡುಗಡೆ ಮಾಡಲಾಗುವುದು. ಡಿ.೪ ರಂದು ಕಾರ್ಯಕ್ರಮವನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಲಿದ್ದಾರೆ. ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜು ಗೌಡ, ಕಾಂಗ್ರೆಸ್ ಮುಖಂಡ ಡಾ. ಬಿ.ಜೆ. ವಿಜಯಕುಮಾರ್ ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಬಿ. ಲಿಂಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭ ಅರಣ್ಯ ಇಲಾಖೆಯಲ್ಲಿ ಸಾಕಷ್ಟು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಪಶು ವೈದ್ಯಾಧಿಕಾರಿ ಡಾ. ಮುಜೀಬ್ ಉರ್ ರೆಹಮಾನ್ ಹಾಗೂ ಅರ್ಜುನನ ಅಭಿಮಾನಿ ಕೆ.ಆರ್. ಸತ್ಯಪ್ರಭಾ ಅವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮಕ್ಕೆ ಅರ್ಜುನನ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕಲ್ಚರಲ್ ಅಸೋಸಿಯೇಷನ್ನ ಅಧ್ಯಕ್ಷ ಎ.ಪಿ. ನಾಗೇಶ್ ಹಾಗೂ ಕಲಿಸು ಫೌಂಡೇಷನ್ನ ಸಹ ಸಂಸ್ಥಾಪಕ ಎಂ.ಎA. ನಿಖಿಲೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.