ಸೋಮವಾರಪೇಟೆ, ನ. ೨೯: ಕನ್ನಡ ರಾಜ್ಯೋತ್ಸವ ಆಚರಣೆ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತ ಆಗಬಾರದು. ಭಾವನಾತ್ಮಕ ಸ್ಪರ್ಶವಿರುವ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕೆಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ರತ್ನಕುಮಾರ್ ಅಭಿಪ್ರಾಯಿಸಿದರು. ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಹಾಗೂ ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕನ್ನಡ ಭಾಷಾ ಸಂಘ ಅರಳಿಕಟ್ಟೆ ವತಿಯಿಂದ ರಾಜ್ಯೋತ್ಸವ ಅಂಗವಾಗಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡವನ್ನು ನಮ್ಮ ಬದುಕಿನ ಒಂದು ಭಾಗವನ್ನಾಗಿ ಪರಿಗಣಿಸಿ ಪೋಷಿಸಬೇಕು. ಶಾಲೆ ಮತ್ತು ಮನೆಮನಗಳಲ್ಲಿ ವರ್ಷಪೂರ್ತಿ ಕನ್ನಡದ ಸ್ಮರಣೆ ಇರಬೇಕೆಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿಕ್ಷಕ ಹಾಗೂ ಸಾಹಿತಿ ಸುಕುಮಾರ್ ಮಾತನಾಡಿ, ಸಿರಿಗನ್ನಡಂ ಗೆಲ್ಗೆ ಎಂಬುದು ಕನ್ನಡಾಭಿಮಾನದ ವೇದಘೋಷದಂತಿದೆ. ಕನ್ನಡದ ಸ್ಮರಣೆ, ಆಚರಣೆಯು ಭಾಷೆಯ ಅಸ್ಮಿತೆಗೆ ಸಾಕ್ಷಿಯಾಗಿದೆ ಎಂದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಹೇಮಲತಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಎಲ್.ಎಂ. ಪ್ರೇಮಾ, ಸಾಹಿತಿ ಹಾಗೂ ಶಿಕ್ಷಕರಾದ ಕಾಜೂರು ಸತೀಶ್ ಉಪಸ್ಥಿರಿದ್ದರು. ಶಿಕ್ಷಕರಾದ ವಿಜಯಕುಮಾರ್, ರಾಜರತ್ನ, ಧನ್ಯಾ ರಸಪ್ರಶ್ನೆ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.