ವೀರಾಜಪೇಟೆ, ನ. ೨೯: ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜು ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಜಿಲ್ಲಾ ಮಟ್ಟದ ವಿವಿಧ ಕ್ರೀಡೆ ಹಾಗೂ ಆಟೋಟ ಸ್ಪರ್ಧೆ ಕಾವೇರಿ ಕಾರ್ನಿವಲ್ ೨೦೨೫ ಕಾರ್ಯಕ್ರಮವನ್ನು ಡಿಸೆಂಬರ್ ೨ ರಂದು ಮಂಗಳವಾರ ಕಾಲೇಜಿನ ಆವರಣದಲ್ಲಿ ಕಾಲೇಜು ಆಡಳಿತ ಮಂಡಳಿ ಹಾಗೂ ದಾನಿಗಳ ಸಹಕಾರದಲ್ಲಿ ಪೂರ್ವಹ್ನ ೯ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ನಡೆಸಲಾಗುವುದು ಎಂದು ಪದವಿ ಕಾಲೇಜಿನ ಪ್ರಾಂಶುಪಾಲ ನುಚ್ಚಿಮಣಿಯಂಡ ಎಂ ನಾಣಯ್ಯ ಹೇಳಿದರು. ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ೮ನೇ ವರ್ಷದ ಸ್ಪರ್ಧೆಗಳಾಗಿದ್ದು, ಈ ಸ್ಪರ್ಧೆಯಲ್ಲಿ ಜಿಲ್ಲೆಯ ೪೫ ಶಾಲಾ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ವೀರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಬಗೆಯ ತಿಂಡಿ ತಿನಿಸುಗಳು, ತಂಪು ಪಾನೀಯಗಳು, ಮನರಂಜನೆಯ ಆಟಗಳ ಸುಮಾರು ೨೫ ಅಂಗಡಿ ಮಳಿಗೆಗಳನ್ನು ಇಡುವುದರ ಪೂಲಕ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿದೆ ಎಂದು ಹೇಳಿದರು. ಕಾರ್ಯಕ್ರಮ ಸಂಯೋಜಕಿ ಪ್ರೋ ಆಲೆಮಾಡ ಗಾಯತ್ರಿ ಮಾತನಾಡಿ ಕಾವೇರಿ ಕಾರ್ನಿವಲ್‌ನಂತಹ ಆಚರಣೆಗಳಿಂದ ವಿದ್ಯಾರ್ಥಿಗಳ ದೈನಂದಿನ ಕಲಿಕೆಯ ಒತ್ತಡದಿಂದ ಮನಸ್ಸನ್ನು ಪ್ರಪುಲ್ಲ ಗೊಳಿಸಲು ಸದವಕಾಶ ಲಭಿಸುತ್ತದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರ ಹಾಕಲು ಸಹಕಾರಿಯಾಗುದಲ್ಲದೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತದೆ. ಎಲ್ಲಾ ವಿದ್ಯಾರ್ಥಿಗಳ ಸಮಾಗಮ, ಪರಸ್ಪರ ನಡುವಿನ ಪರಿಚಯ, ಒಡನಾಟ, ಸ್ನೇಹ ಸಂಬAಧ ಬಾಂದವ್ಯಗಳನ್ನು ಬೆಳೆಸಲು ಒಂದು ವೇದಿಕೆ ಆಗಲಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಪ್ರೊ. ಪಟ್ಟ್ಟಿಚಂಡ ಡಯಾನಾ ಸೋಮಯ್ಯ, ಉಪನ್ಯಾಸಕರಾದ ಅಮ್ಮಂಡ ಅನುಪಮಾ ತಿಮ್ಮಯ್ಯ, ಕೂಕಂಡ ಬೊಪಣ್ಣ ಉಪಸ್ಥಿತರಿದ್ದರು.