ಮಡಿಕೇರಿ, ನ. ೨೯: ಕ್ರೀಡೆ ಇರಲಿ, ಯಾವುದೇ ಸನ್ನಿವೇಶವಿರಲಿ ಸವಾಲನ್ನು ಸಮತೋಲದದಲ್ಲಿ ತೆಗೆದುಕೊಂಡು ಹೋಗುವ ಮನಸ್ಥಿತಿ ಎಲ್ಲರಲ್ಲೂ ಇರಬೇಕೆಂದು ಮೈಸೂರು ದಕ್ಷಿಣ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಡಾ. ಬೋರಲಿಂಗಯ್ಯ ಹೇಳಿದರು.

ಕೊಡಗು ಪೊಲೀಸ್ ಇಲಾಖೆ ವತಿಯಿಂದ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು. ನಮ್ಮ ಆರೋಗ್ಯ ಕಾಪಾಡಲು ಕ್ರೀಡೆ ಮುಖ್ಯ. ಕ್ರೀಡೆ ಇರಲಿ ಬೇರೆ ಯಾವುದೇ ಕಾರ್ಯಗಳಿರಲಿ ಗೆದ್ದಾಗ ಸಂತೋಷಪಡುತ್ತೇವೆ. ಆದರೆ ಸೋಲನುಭವಿಸಿದಾಗ ಅದನ್ನು ಸವಾಲಾಗಿ ತೆಗೆದುಕೊಳ್ಳುವ ಮನಸ್ಥಿತಿ ಕಡಿಮೆ ಆಗುತ್ತಿದೆ. ಸೋಲು-ಗೆಲುವನ್ನು ಸವಾಲಾಗಿ ಸ್ವೀಕರಿಸಿ ಸಮತೋಲನದಲ್ಲಿ ತೆಗೆದುಕೊಂಡು ಹೋಗುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಸೇನೆ ಇರಲಿ ಪೊಲೀಸ್ ಇಲಾಖೆ ಇರಲಿ ಅಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕ್ರೀಡೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಪೊಲೀಸರಿಗಂತೂ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಒಂದು ಉತ್ತಮ ತಂಡ ರಚನೆಗೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಿಸಿದರು.

ಪೊಲೀಸರು ಹಾಗೂ ಅವರ ಕುಟುಂಬಸ್ತರು ಪ್ರತಿನಿತ್ಯ ಬೆಳಗ್ಗಿನ ತಮ್ಮ ದಿನಚರಿ ಆರಂಭಿಸುವಾಗ ಕ್ರೀಡೆ, ವ್ಯಾಯಾಮಗಳಲ್ಲಿ ತೊಡಗಿಸಿಕೊಂಡಲ್ಲಿ ಉತ್ತಮ ಆರೋಗ್ಯದೊಂದಿಗೆ ದೈಹಿಕ ಸಾಮರ್ಥ್ಯ ಹೊಂದಿಕೊಳ್ಳಬಹುದೆAದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಬ್ಬಂದಿಗಳಾದ ಫಾರುಕ್, ಅಜಿತ್ ಕಾರ್ಯಕ್ರಮ ನಿರ್ವಹಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ವಂದಿಸಿದರು.