ಮಡಿಕೇರಿ, ನ. ೨೯: ಕೊಡಗು ಜಿಲ್ಲೆಯಲ್ಲಿರುವ ತುಳು ಭಾಷಿಕರನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಿಷ್ಠಗೊಳಿಸಲು ಮತ್ತು ಬೃಹತ್ ತುಳು ಸಮಾವೇಶ ನಡೆಸಲು ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಪ್ರಮುಖರ ಸಭೆ ನಿರ್ಧರಿಸಿದೆ.

ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ. ಐತ್ತಪ್ಪ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರ, ಪದ್ಧತಿ ಪರಂಪರೆಯನ್ನು ಉಳಿಸುವುದರೊಂದಿಗೆ ತುಳು ಭಾಷಿಕರನ್ನು ಸಂಘಟಿಸುವ ಕುರಿತು ಚರ್ಚಿಸಲಾಯಿತು.

ಕೊಡಗು ಜಿಲ್ಲೆಯಲ್ಲಿ ತುಳು ಭಾಷಿಕರ ಸಂಖ್ಯೆ ಹೆಚ್ಚು ಇದ್ದು, ೧೪ ತುಳು ಭಾಷಿಕ ಸಮುದಾಯವನ್ನು ಒಂದೇ ವೇದಿಕೆಯಡಿ ತುಳುವೆರ ಜನಪದ ಕೂಟ ತಂದಿದೆ. ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತುಳು ಭಾಷಿಕ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಬೇಕು. ಮುಂದಿನ ದಿನಗಳಲ್ಲಿ ಬೃಹತ್ ತುಳು ಸಮಾವೇಶ ನಡೆಸಲು ತುಳು ಭಾಷಿಕರು ಒಗ್ಗೂಡಿ ಕಾರ್ಯಪ್ರವೃತ್ತರಾಗಬೇಕು. ತುಳು ಭಾಷಿಕರ ಶ್ರೇಯೋಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಭೆ ನಿರ್ಣಯ ಕೈಗೊಂಡಿತು.

ಸಭೆಯಲ್ಲಿ ತುಳುವೆರ ಜನಪದ ಕೂಟದ ಸ್ಥಾಪಕಾಧ್ಯಕ್ಷ ಶೇಖರ್ ಭಂಡಾರಿ, ಜಿಲ್ಲಾ ಉಪಾಧ್ಯಕ್ಷ ಬಿ.ವೈ. ಆನಂದ ರಘು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ, ಸಂಘಟನಾ ಕಾರ್ಯದರ್ಶಿ ರಾಜೀವ್ ಲೋಚನ್, ಜಿಲ್ಲಾ ಖಜಾಂಚಿ ಪ್ರಭು ರೈ, ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್ ಕುಲಾಲ್, ಕಾರ್ಯದರ್ಶಿ ಆನಂದ್ ಬಿ.ಎಸ್, ಜಿಲ್ಲಾ ಪದಾಧಿಕಾರಿಗಳಾದ ಮೋಹನ್ ಬಿ.ಕೆ, ಗೌತಮ್ ಶಿವಪ್ಪ, ಎಂ.ಡಿ.ನಾಣಯ್ಯ, ಲೀಲಾ ಶೇಷಮ್ಮ, ಅಶೋಕ ಆಚಾರ್ಯ, ಸಂಧ್ಯಾ ಗಣೇಶ್ ರೈ, ವೆಂಕಪ್ಪ ಪೂಜಾರಿ, ಲೀಲಾವತಿ ಬಿ, ಜಯಪ್ಪ ಬಿ.ಎಸ್, ಚಿತ್ರಾವತಿ ಪೂವಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ನಿರೂಪಿಸಿ, ವಂದಿಸಿದರು.