ಮಡಿಕೇರಿ, ನ. ೨೯: ಮಡಿಕೇರಿಯ ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ ೫೫ ವರ್ಷಗಳಿಂದ ಸೇವೆ ಸಲ್ಲಿಸಿ ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿಯಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿರುವ ಡಾ. ಮನೋಹರ್ ಜಿ. ಪಾಟ್ಕರ್ ಅವರನ್ನು ಅವರ ಅಭಿಮಾನಿಗಳು ಸನ್ಮಾನಿಸಿದ ಕಾರ್ಯಕ್ರಮ ಇಂದು ಮಡಿಕೇರಿಯ ಮಂಗಳಾದೇವಿ ನಗರದ ರಾಜರಾಜೇಶ್ವರಿ ದೇಗುಲ ಸಭಾ ಭವನದಲ್ಲಿ ನೆರವೇರಿತು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಆರ್‌ಎಸ್‌ಎಸ್‌ನ ರಾಜ್ಯದ ಜೇಷ್ಠ ಪ್ರಚಾರಕರಾದ ಸು. ರಾಮಣ್ಣ ಅವರು ಮಾತನಾಡಿ, ಭಾರತೀಯರು ರಾಷ್ಟçಧರ್ಮವನ್ನು ಪಾಲಿಸುವಂತಾಗಲಿ ಎಂದು ಕರೆ ನೀಡಿದರು. ನಮ್ಮ ವೈಯಕ್ತಿಕ ನಿತ್ಯ ಕರ್ಮಾಚರಣೆಗಳೊಂದಿಗೆ ಶಕ್ತಾö್ಯನುಸಾರ ಪರರ ಚಿಂತನೆಯೊAದಿಗೆ ದೇಶಸೇವೆಗೆ ಯುವಜನತೆ ಕಟಿಬದ್ಧರಾಗಿರಬೇಕು ಎಂದು ಅಭಿಪ್ರಾಯಪಟ್ಟರು. ಇದೇ ರಾಷ್ಟçಧರ್ಮ ಎನಿಸುತ್ತದೆ. ಪ್ರತಿಯೊಬ್ಬ ಭಾರತೀಯನೂ ರಾಷ್ಟçಧರ್ಮವನ್ನು ಪಾಲಿಸುವ ಅಗತ್ಯವಿದೆ ಎಂದರು. ಭಾರತದ ನೆಲವನ್ನು ನಾವು ತಾಯಿ ಎಂದು ಪರಿಗಣಿಸುತ್ತೇವೆ. ಏಕೆಂದರೆ ಇದು ನಮ್ಮ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಮೂಲನಂಬಿಕೆ; ಇದು ಮೂಢನಂಬಿಕೆ ಅಲ್ಲ ಎಂದು ಅವರು ವಿಮರ್ಶಿಸಿದರು.
೮೭ ವಯೋಮಿತಿ ತಲುಪಿರುವ ಡಾ. ಮನೋಹರ್ ಜಿ. ಪಾಟ್ಕರ್ ಅವರ ಸೇವೆಯನ್ನು ಸ್ಮರಿಸುತ್ತಾ ೬೦ರ ಘಟ್ಟ ತಲುಪಿದ ಬಳಿಕ ಪ್ರತಿಯೊಬ್ಬರೂ ಸಾಧ್ಯವಾದರೆ ನಿತ್ಯ ಮೃತ್ಯುಂಜಯ ಮಂತ್ರವನ್ನು ಪಠಿಸುವುದು ಸೂಕ್ತ ಎಂದು ಸಲಹೆಯಿತ್ತರು. ಮೃತ್ಯುಂಜಯ ಮಂತ್ರವು ನೀಲಕಂಠನೆನಿಸಿದ ಶಿವನನ್ನು ಸ್ತುತಿಸುವ ಪ್ರಮುಖ ಮಂತ್ರವಾಗಿದ್ದು, ಯಾರೇ ಪಠಿಸಿದರೂ ಫಲ ನೀಡುತ್ತದೆ. ಸಾವು ಎನ್ನುವುದು ನಿಶ್ಚಿತ. ಆದರೆ ಮೃತ್ಯುಂಜಯ ಮಂತ್ರ ಪಠಿಸುವವರಿಗೆ ಖಂಡಿತವಾಗಿ ಅಕಾಲಿಕ ಅಥವಾ ಅವಘಡ ಪೂರ್ವಕ ಅಪಮೃತ್ಯು ನಿವಾರಣೆಯಾಗುತ್ತದೆ ಎಂದು ಅನುಭವಾತ್ಮಕ ನುಡಿಯಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕ ಹಾಗೂ ವನವಾಸಿ ಕಲ್ಯಾಣ ಆಶ್ರಮದ ರಾಜ್ಯಾಧ್ಯಕ್ಷ ಚಕ್ಕೇರ ಮನು ಕಾವೇರಪ್ಪ ಅವರು ಮಾತನಾಡಿ, ಡಾ. ಪಾಟ್ಕರ್ ವೈದ್ಯಕೀಯದಲ್ಲಿ ಸೇವೆ ಸಲ್ಲಿಸಿರುವುದರೊಂದಿಗೆ ಗಣವೇಷಧಾರಿಯಾಗಿ ಸಂಘಟನೆಗಳಲ್ಲಿ ತೊಡಗಿಸಿಕೊಂಡು ನಮಗೆಲ್ಲ ಮೇಲ್ಪಂಕ್ತಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ತಾನು ರಾಜಕೀಯದಲ್ಲಿ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಬೆಳೆಯಲು ಪಾಟ್ಕರ್ ಅವರ ಕೊಡುಗೆ ಅಪಾರ ಎಂದು ನೆನಪಿಸಿಕೊಂಡರು. ಹಿರಿಯರಾದ ಜಿ.ಟಿ. ರಾಘವೇಂದ್ರ ಅವರು ಮಾತನಾಡಿ, ಸಮಾಜವು ಪಾಟ್ಕರ್ ಅವರ ಸೇವೆಯನ್ನು ಗುರುತಿಸಿದೆ ಎಂದು ನುಡಿದರು. ಸಭೆಯಲ್ಲಿ ಡಾ. ಪಾಟ್ಕರ್ ಹಾಗೂ ಉಪಸ್ಥಿತರಿದ್ದ ಅವರ ಪತ್ನಿ ಡಾ. ಜಯಲಕ್ಷಿö್ಮ ಪಾಟ್ಕರ್ ಅವರುಗಳನ್ನು ಹಿರಿಯರಾದ ಸೋಮವಾರಪೇಟೆಯ ಎ.ಪಿ. ಶಂಕರಪ್ಪ ಹಾಗೂ ಅವರ ಪತ್ನಿ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿದರು.
ಡಾ|| ಪಾಟ್ಕರ್ ಅವರು ಮಾತನಾಡಿ, ತಾನು ಜೀವನದಲ್ಲಿ ಬೆಳೆದು ಬಂದ ಬಗ್ಗೆ ಸಂಕ್ಷಿಪ್ತವಾಗಿ ನುಡಿದರು. ಜೀವನದ ಮಾರ್ಗದಲ್ಲಿ ಸಾಗುವಾಗ ಸಮಾಜದಲ್ಲಿನ ಕೆಲವು ಸಾಮಾನ್ಯ ಜನರ ದೀನದಲಿತರ ಸಂಕಷ್ಟಗಳನ್ನು ನೋಡುವಾಗ ತನ್ನಿಂದ ಸಾಧ್ಯವಾದಷ್ಟು ಸೇವೆ ನಡೆಸಬೇಕೆನ್ನುವ ಸಂಕಲ್ಪವುAಟಾದ ಕುರಿತು ನೆನಪಿಸಿಕೊಂಡರು. ಅಲ್ಲದೆ ಸಂಘ ಪರಿವಾರಕ್ಕೆ ತಾನು ಪ್ರವೇಶಿಸಿದ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ತೊಡಗಿಸಿಕೊಂಡ ಹಿನ್ನೆಲೆಯ ಕುರಿತು ವಿವರಿಸಿದರು. ಕೆ.ಕೆ. ಮಹೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕುಂದರ್ ಸ್ವಾಗತಿಸಿದರು. ಕುಶಾಲನಗರದ ಮಹೇಶ್ ವಂದೇ ಮಾತರಂ ಗೀತೆ ಹಾಡಿದರು. ಅರುಣ್‌ಕುಮಾರ್ ವಂದಿಸಿದರು. ಸಭೆಯಲ್ಲಿ ಡಾ. ಪಾಟ್ಕರ್ ದಂಪತಿ ವನವಾಸಿ ಕಲ್ಯಾಣ ಆಶ್ರಮಕ್ಕೆ ಮಂಗಲ ನಿಧಿಯನ್ನು ಅರ್ಪಿಸಿದರು.