ಮಡಿಕೇರಿ, ನ. ೨೮: ನೂತನವಾಗಿ ನಿರ್ಮಾಣಗೊಂಡ ನಗರದ ಕಾನ್ವೆಂಟ್ ಜಂಕ್ಷನ್-ಭಗವತಿ ನಗರ ಸಂಪರ್ಕ ರಸ್ತೆಯನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.

ನಗರಸಭೆಯ ರೂ. ೫ ಲಕ್ಷ ಹಾಗೂ ಶಾಸಕರ ರೂ. ೫ ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಮಂತರ್, ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಉಳಿದ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ವಾರ್ಡ್ ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ಕಳೆದ ೪೫ ವರ್ಷಗಳಿಂದ ದುಸ್ಥಿತಿಯಲ್ಲಿ ಕೂಡಿದ್ದ ರಸ್ತೆಗೆ ಕಾಯಕಲ್ಪ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಕಾಮಗಾರಿ ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಸಭಾ ಸದಸ್ಯರುಗಳಾದ ಸವೀತಾ, ಉಷಾ ಕಾವೇರಪ್ಪ, ನಾಮನಿರ್ದೇಶಿತ ಸದಸ್ಯ ಯಾಕೂಬ್, ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.