ಮಡಿಕೇರಿ, ನ. ೨೮: ಕೊಡಗು ವಿಶ್ವವಿದ್ಯಾಲಯ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಹಯೋಗದೊಂದಿಗೆ ಕಾಲೇಜು ಮೈದಾನದಲ್ಲಿ ಕೊಡಗು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ದೊರೆತಿದೆ.

ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಸುರೇಶ್ ಕುಮಾರ್, ಮಹಾಭಾರತ ಕಾಲಘಟದಲ್ಲಿ ಕಬಡ್ಡಿ ಕ್ರೀಡೆಯ ಉಲ್ಲೇಖವಿದೆ. ದೇಶದ ಅಭಿವೃದ್ಧಿಯಲ್ಲಿ ಕ್ರೀಡೆಯು ಪ್ರಮುಖ ಪಾತ್ರ ವಹಿಸುತ್ತದೆ. ಅದಲ್ಲದೇ ಕ್ರೀಡೆಯಿಂದ ಮನುಷ್ಯನ ಜೀವನದಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದು ಹೇಳಿದರು.

ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಎಲ್ಲಾ ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ. ಮಾತನಾಡಿ, ಫೀಲ್ಡ್ ಮಾರ್ಷಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹಲವಾರು ಸಾಧನೆಗಳನ್ನ ಮಾಡಿದ್ದಾರೆ.ಅದಲ್ಲದೇ ಕಾಲೇಜಿನಲ್ಲಿ ನಿರಂತರವಾಗಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ ಎಂದರು. ಕಾಲೇಜಿನ ದೈಹಿಕ ಶಿಕ್ಷಕ ರಮೇಶ್ ಅವರು ಕ್ರೀಡಾಕೂಟದ ನೇತೃತ್ವವನ್ನು ವಹಿಸಿದ್ದರು.