ವೀರಾಜಪೇಟೆ: ವೀರಾಜಪೇಟೆಯ ಅಮ್ಮತ್ತಿ ಒಂಟಿಯAಗಡಿ ಸಮೀಪದ ಬೈರಂಬಾಡ ಸೇರಿದಂತೆ ಜಿಲ್ಲೆಯ ಹಲವೆಡೆ ಸಂಭ್ರಮದಿAದ ಸುಬ್ರಹ್ಮಣ್ಯ ಷಷ್ಠಿ ಆಚರಿಸಲಾಯಿತು. ತಳಿರು-ತೋರಣಗಳಿಂದ ಶೃಂಗರಿಸಿದ ದೇಗುಲಗಳಿಗೆ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು.

ಕೊಡಗಿನ ಸುಬ್ರಹ್ಮಣ್ಯ ದೇವರ ನೆಲೆಯೆಂದೇ ಹೆಸರುವಾಸಿಯಾಗಿರುವ ಅಮ್ಮತ್ತಿ ಒಂಟಿಯAಗಡಿ ಬಳಿಯ ಬೈರಂಬಾಡ ಗ್ರಾಮದ ಸುಬ್ರಹ್ಮಣ್ಯ ದೇಗುಲದಲ್ಲಿ ಷಷ್ಠಿ ಪ್ರಯುಕ್ತ ನಡೆದ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮುಂಜಾನೆಯಿAದಲೇ ಭಕ್ತರು ಬೈರಂಬಾಡದ ಸುಬ್ರಹ್ಮಣ್ಯನ ಸನ್ನಿಧಿಗೆ ಆಗಮಿಸಿ ಹಣ್ಣು ಕಾಯಿ, ಹರಕೆಯನ್ನು ಸಮರ್ಪಿಸಿದರು.

ದೇವರ ಸನ್ನಿಧಿಗೆ ಬೆಳಗ್ಗೆಯಿಂದಲೇ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ ಪರಿಣಾಮವಾಗಿ ಟ್ರಾಫಿಕ್ ಜಾಮ್ ಉಂಟಾಗಿ ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು.

ದೇವಾಲಯದಲ್ಲಿ ಬೆಳಿಗ್ಗೆ ೪ ರಿಂದಲೇ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊAಡವು. ದೇವರಿಗೆ ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಕ್ಷೀರಾಭಿಷೇಕ, ರುದ್ರಾಭಿಷೇಕಗಳು ನಡೆದವು. ಉತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು.

ಜಿಲ್ಲೆಯ ನಾನಾ ಭಾಗಗಳಿಂದ ಅಧಿಕ ಭಕ್ತಾದಿಗಳು ದೇವರ ದರ್ಶನಕ್ಕೆ ತಂಡೋಪತAಡವಾಗಿ ಬಂದು ದರ್ಶನ ಪಡೆದರು. ಭಕ್ತಾದಿಗಳೊಂದಿಗೆ ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳು ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವಕ್ಕಾಗಿ ಆಗಮಿಸಿದ ಭಕ್ತಾಧಿಗಳಿಗೆ ಕೂರಲು ಸೂಕ್ತವಾದ ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ದೇವರಿಗೆ ಮಹಾಮಂಗಳಾರತಿ ಸೇವೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ಕೃಪೆಗೆ ಪಾತ್ರರಾದರು. ಇದೇ ಸಂದರ್ಭ ಭಕ್ತಾದಿಗಳಿಗೆ ತೀರ್ಥ ಪ್ರಸಾದವನ್ನು ವಿತರಿಸಲಾಯಿತು.

ಹರಕೆ ಹೊತ್ತ ಭಕ್ತರು ಸುಬ್ರಹ್ಮಣ್ಯ ದೇವರಿಗೆ ನಾಗನರೂಪ, ಆಳ್‌ರೂಪ ಮುಂತಾದ ಪ್ರತಿರೂಪಗಳನ್ನು ದೇಗುಲಕ್ಕೆ ಒಪ್ಪಿಸಿದರು. ದೇವಾಲಯದ ಹೊರಭಾಗದಲ್ಲಿ ಭಕ್ತಾದಿಗಳು ಕೇಶ ಮುಂಡನ ಮಾಡಿಸಿಕೊಂಡು ಹರಕೆ ಒಪ್ಪಿಸಿದರು. ಜಾತ್ರೆ ಅಂಗವಾಗಿ ಬೆಳಿಗ್ಗೆಯಿಂದ ಸಂಜೆವರೆಗೆ ಮಡಿಕೇರಿ, ಮೂರ್ನಾಡು, ಸಿದ್ದಾಪುರ, ವಿರಾಜಪೇಟೆ ಕಡೆಗಳಿಂದ ವಿಶೇಷವಾಗಿ ಖಾಸಗಿ ಬಸ್ಸುಗಳು, ಬಾಡಿಗೆ ಜೀಪ್, ವ್ಯಾನ್ ಇನ್ನಿತರ ವಾಹನಗಳ ಸಂಚಾರವಿತ್ತು. ಇದರಿಂದ ವಿವಿಧ ಭಾಗದಿಂದ ಭಕ್ತಾದಿಗಳು ದೇವಾಲಯಕ್ಕೆ ತೆರಳಲು ಅನುಕೂಲವಾಯಿತು. ಸೂಕ್ತ ರೀತಿಯಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ವಾಹನಗಳ ನಿಲುಗಡೆಗೆ, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಪೊಲೀಸರು ನಿಯಂತ್ರಣದಲ್ಲಿ ತೊಡಗಿಕೊಂಡಿದ್ದರು. ದೇವಾಲಯದ ರಸ್ತೆ ಬದಿಗಳಲ್ಲಿ ವ್ಯಾಪಾರಿಗಳು ಮಳಿಗೆಗಳನ್ನು ಹಾಕಿಕೊಂಡು ಮಾರಾಟದಲ್ಲಿ ತೊಡಗಿದ್ದರು.

ದೇವಾಲಯಕ್ಕೆ ತೆರಳುವ ಹಾದಿಯುದ್ದಕ್ಕೂ ವಿವಿಧೆಡೆಗಳಿಂದ ಆಗಮಿಸಿದ್ದ ಭಿಕ್ಷÄಕರು ಭಿಕ್ಷಾಟನೆ ಮಾಡುತ್ತಿದ್ದರು. ಭಕ್ತರು ದೇವರ ಹೆಸರಿನಲ್ಲಿ ಅಕ್ಕಿ ಹಾಗೂ ಹಣವನ್ನು ಭಿಕ್ಷೆಯ ರೂಪದಲ್ಲಿ ನೀಡಿದರು.

ವೀರಾಜಪೇಟೆ, ಮೂರ್ನಾಡು ಕಡೆಯಿಂದ ಬರುತ್ತಿದ್ದ ವಾಹನಗಳು ಹಾಗೂ ಅಮ್ಮತ್ತಿ ಕಡೆಯಿಂದ ಬರುತ್ತಿದ್ದ ವಾಹನಗಳು ದೇವಾಲಯದ ರಸ್ತೆಯಿಂದ ಸುಮಾರು ೩ಕಿ.ಮೀ ದೂರದಲ್ಲಿ ನಿಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಪ್ರಮುಖರು ಮಾತನಾಡಿ ಹಿಂದಿನ ವರ್ಷಗಳಂತೆ ಈ ಬಾರಿಯೂ ಷಷ್ಠಿಯನ್ನು ವಿಜೃಂಭಣೆಯಿAದ ಆಚರಿಸಲಾಗುತ್ತಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದ್ದಾರೆ ಎಂದರು.

ದೇವಾಲಯದ ಆಡಳಿತ ಮಂಡಳಿ ವತಿಯಿಂದ ಆಗಮಿಸಿದ ಭಕ್ತಾದಿಗಳಿಗೆ ಸೂಕ್ತವಾದ ವ್ಯವಸ್ಥೆ ಹಾಗೂ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸರ್ವರೂ ಹಾಜರಿದ್ದರು. ಗೋಣಿಕೊಪ್ಪಲು: ಇತಿಹಾಸ ಪ್ರಸಿದ್ಧ ದಕ್ಷಿಣ ಕೊಡಗಿನ ಹರಿಹರ ಗ್ರಾಮ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಮುಂಜಾನೆಯಿAದಲೇ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಹರಕೆಗಳನ್ನು ಸಲ್ಲಿಸಿದರು. ದೇವಾಲಯ ಆವರಣದಲ್ಲಿ ಮಧ್ಯಾಹ್ನ ಭಕ್ತರಿಗೆ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅರ್ಚಕರು ಪೂಜಾ ಕಾರ್ಯದಲ್ಲಿ ಭಾಗವಹಿಸಿ, ತೀರ್ಥ ಪ್ರಸಾದ ವಿನಿಯೋಗ ಮಾಡಿದರು. ದೇವಾಲಯ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ನೂರಾರು ವರ್ಷಗಳ ಇತಿಹಾಸ ಇರುವ ದೇವಾಲಯಲ್ಲಿ ವರ್ಷದ ೩೫೬ ದಿನಗಳು ಪೂಜಾ ಕಾರ್ಯ ನಡೆಯುತ್ತಿದೆ. ಸುಬ್ರಹ್ಮಣ್ಯ ಷಷ್ಠಿ ದಿನದಂದು ಕನಿಷ್ಟ ೧೦ ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ಭಾಗವಹಿಸುತ್ತಾರೆ. ಭಕ್ತರಿಗೆ ಅನುಕೂಲ ಆಗುವ ರೀತಿಯಲ್ಲಿ ದೇವಾಲಯ ಆಡಳಿತ ಮಂಡಳಿಯ ಸದಸ್ಯರುಗಳು ಸಕಲ ವ್ಯವಸ್ಥೆಗಳನ್ನು ಕೈಗೊಳ್ಳುತ್ತಾರೆ. ಈ ಬಾರಿ ನಿರೀಕ್ಷೆಗೂ ಮೀರಿ ಜನರು ಆಗಮಿಸಿರುವುದಾಗಿ ತಿಳಿಸಿದರು. ತಾ.೨೭ ರಂದು ಮಧ್ಯಾಹ್ನ ೩ ಗಂಟೆಯಿAದ ಪೂಜಾ ಕಾರ್ಯ ನಡೆಯಲಿದ್ದು, ರಾತ್ರಿಯ ೧೨ ಗಂಟೆಯವರೆಗೂ ವಿವಿಧ ಕಾರ್ಯಕ್ರಮ ನಡೆಯಲಿದೆ.ನಗರದ ಕ್ಷೇತ್ರಗಳಲ್ಲೊಂದಾದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಷಷ್ಠಿ ಮಹೋತ್ಸವ ವಿಜೃಂಭಣೆಯಿAದ ನಡೆಯಿತು.

ಬೆಳಿಗ್ಗೆ ಸುಬ್ರಹ್ಮಣ್ಯ ದೇವರಿಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಅಪ್ಪಂ ಸೇವೆ, ಪಂಚಕಜ್ಜಾಯ ಸೇವೆ, ಹಣ್ಣು ಕಾಯಿ, ಪುಷ್ಪಾರ್ಚನೆ, ಮಂಗಳಾರತಿ, ಮಹಾಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.. ನಂತರ ನಾಗ ದೇವರಿಗೆ ವಿಶೇಷ ಪೂಜೆ, ಮುತ್ತಪ್ಪ ದೇವರ ಮಲೆ ಇಳಿಸುವುದು, ಕುಟ್ಟಿಚಾತನ್ ದೇವರ ವೆಳ್ಳಾಟಂ, ಮುತ್ತಪ್ಪ ವೆಳ್ಳಾಟಂ, ಗುಳಿಗ ವೆಳ್ಳಾಟಂ, ಪೋದಿ ದೇವರ ವೆಳ್ಳಾಟಂ, ಸುಬ್ರಹ್ಮಣ್ಯ ದೇವರ ಶ್ರೀಭೂತ ಬಲಿ, ಮಹಾಮಂಗಳಾರತಿ ಬಳಿಕ ನೆರೆದಿದ್ದ ಸಹಸ್ರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ವೀರಾಜಪೇಟೆಯ ಪವಿ ಭಟ್ ಸುಬ್ರಹ್ಮಣ್ಯ ದೇವರನ್ನು ಹೊತ್ತು ನರ್ತನಗೈಯ್ಯುತ್ತಾ ಶ್ರೀಭೂತ ಬಲಿ ಪೂಜೆ ನೆರವೇರಿಸಿದರು. ಅರ್ಚಕ ಈಶ ಭಟ್ ಹಾಗೂ ದೇವಾಲಯದ ಅಚ್ಕ ಅರವಿಂದ ಭಟ್ ನೇತೃತ್ವದ ತಂಡದವರು ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಸಂಜೆ ಭಜನಾ ಕಾರ್ಯಕ್ರಮ, ರಂಗ ಪೂಜೆ, ಮಹಾಪೂಜೆಯ ನಂತರ ಪ್ರಸಾದ ವಿತರಣೆ ನಡೆಯಿತು.

ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್, ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ರೈ, ಸುಬ್ರಹ್ಮಣ್ಯ ಷಷ್ಠಿ ಉತ್ಸವ ಸಮಿತಿ ಅಧ್ಯಕ್ಷ ಮನು ಮಂಜುನಾಥ್, ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಕಾರ್ಯದರ್ಶಿ ಆರ್. ಗಿರೀಶ್, ಗೌರವ ಸಲಹೆಗಾರ ಟಿ.ಆರ್. ವಾಸುದೇವ್, ಪೂಜಾರಿ ಕೆ.ಎಸ್. ರಮೇಶ್,ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ರಾಮನ್ ಹಾಗೂ ಇತರರ ಮುಂದಾಳತ್ವದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯ ಸಮಿತಿ ಸದಸ್ಯರುಗಳು, ಸಾರ್ವಜನಿಕರು ಸ್ವಯಂ ಸೇವಕರಾಗಿ ತೊಡಗಿಸಿಕೊಂಡಿದ್ದರು. ಕೂಡಿಗೆ : ಕೊಡಗಿನ ಪವಿತ್ರ ಕಾವೇರಿ- ಹಾರಂಗಿ ನದಿ ಸಂಗಮ ಕ್ಷೇತ್ರವಾದ ಕೂಡಿಗೆಯ ಟಾಟಾ ಕಾಫಿ ನಿಯಮಿತ ಕುಶಾಲನಗರ ಕಾಫಿ ಸಂಸ್ಕರಣಾ ಕೇಂದ್ರದ ವ್ಯಾಪ್ತಿಯಲ್ಲಿರುವ ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ ೫೭ನೇ ವಾರ್ಷಿಕ ಮಹಾ ರಥೋತ್ಸವವು ಶ್ರದ್ಧಾಭಕ್ತಿ, ವಿಶೇಷ ಪೂಜೆ, ವಿವಿಧ ಹೋಮ ಹವನ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳೊAದಿಗೆ ನೆರವೇರಿತು. ಮಾರ್ಗಶಿರ ಶುಕ್ಲಚಂಪಾ ಷಷ್ಠಿಯ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಬೆಳಗ್ಗೆನಿಂದಲೇ ವಿಶೇಷ ಅಭಿಷೇಕ, ಹೋಮ ಹವನ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆದು ನಂತರ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಧಿಗ್ಬಲಿ, ರಥ ಬಲಿ, ರಥ ಪೂಜೆ ಸೇರಿದಂತೆ ವಿವಿಧ ಪೂಜೆಗಳ ನಂತರ ಶ್ರೀ ಸ್ವಾಮಿಯ ವಿಗ್ರಹವನ್ನು ಹೂವಿನಿಂದ ಸಿಂಗಾರಗೊAಡಿದ್ದ ಭವ್ಯ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ನಂತರ ಭಕ್ತರ ಜೈಘೋಷದೊಂದಿಗೆ ಮಧ್ಯಾಹ್ನ ಗಂಟೆಗೆ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವವು ಹೊರಡುವ ಮುನ್ನ ಅಯ್ಯಪ್ಪ ವ್ರತಾಧಾರಿಗಳು ದೇವರ ಕೀರ್ತನೆಗಳನ್ನು ಹಾಡಿ ಕರ್ಪೂರ ಹೆಚ್ಚಿ ಭಕ್ತಿ ಮೆರೆದರು.

ರಥೋತ್ಸವವು ಸ್ವಾಮಿಯ ಸನ್ನಿಧಿಯಿಂದ ಸಂಪ್ರದಾಯದAತೆ ಕೂಡಿಗೆ ಮುಖ್ಯ ರಸ್ತೆಯ ಮೂಲಕ ಕೂಡುಮಂಗಳೂರು ಗ್ರಾಮದವರೆಗೆ ಸಾಗಿತು.

ಈ ಸಂದರ್ಭ ಆಗಮಿಸಿದ ಸಾವಿರಾರು ಭಕ್ತರು ರಥಕ್ಕೆ ಪೂಜೆ ಸಲ್ಲಿಸುವುದರ ಜೊತೆಗೆ ಬಾಳೆ ಹಣ್ಣು, ಜವನಗಳನ್ನು ಎಸೆದು ಭಕ್ತಿ ಮೆರೆದರು. ದೇವಾಲಯದ ಆವರಣದಿಂದ ಕೂಡಿಗೆ-ಕುಶಾಲನಗರ ಮುಖ್ಯ ರಸ್ತೆಯಾದ ಕೂಡುಮಂಗಳೂರು ಗ್ರಾಮದವರೆಗೆ ರಥವನ್ನು ಭಕ್ತರು ಎಳೆದುಕೊಂಡು ಹೋಗಿ ಕೂಡುಮಂಗಳೂರು ಗ್ರಾಮದವರೆಗೆ ಸಾಗಿದ ನಂತರ ಕೂಡುಮಂಗಳೂರು ಗ್ರಾಮಸ್ಥರಿಂದ ವರ್ಷಂಪ್ರತಿಯ ಸಂಪ್ರದಾಯದAತೆ ಪೂಜಾ ಕಾರ್ಯಕ್ರಮಗಳು ನಡೆದವು.

ರಥೋತ್ಸವದ ಮುಂಭಾಗದಲ್ಲಿ ಕೂಡಿಗೆ- ಕೂಡುಮಂಗಳೂರು ಹನುಮ ಸೇನಾ ಸೇವಾ ಟ್ರಸ್ಟ್ನ ವತಿಯಿಂದ ವಿನೂತನವಾದ ಡ್ರೀವಡ್ಸ್ ಸಂಗೀತ ಒಳಗೊಂಡ ಚಂಡೆವಾದ್ಯೆ, ಕೀಲು ಕುದುರೆ ಸೇರಿದಂತೆ ವಿವಿಧ ಆಕರ್ಷಕ ನೃತ್ಯ, ಗೊಂಬೆಗಳ ಕುಣಿತ ರಥೋತ್ಸವದ ಹಬ್ಬಕ್ಕೆ ಹೆಚ್ಚು ಮೆರುಗು ನೀಡಿದವು.

ನಂತರ ಸಂಜೆ ಕೂಡುಮಂಗಳೂರು ಗ್ರಾಮಸ್ಥರಿಂದ ಪೂಜೆ ಸಲ್ಲಿಕೆ ಆದ ನಂತರ ಸ್ಥಳಕ್ಕೆ ರಥವನ್ನು ಭಕ್ತರು ಎಳೆದುಕೊಂಡು ಬಂದರು.

ಮಹಾ ರಥೋತ್ಸವದ ಅಂಗವಾಗಿ ದೇವಾಲಯ ಸಮಿತಿಯ ವತಿಯಿಂದ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಪೂಜಾ ಕೈಂಕರ್ಯಗಳು ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಭಟ್ ಹಾಗೂ ಅರಕಲಗೂಡುವಿನ ಶ್ರೀ ಹರಿ ನೇತೃತ್ವದ ತಂಡದವರಿAದ ನೆರವೇರಿತು.

ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಾ ರಥೋತ್ಸವಕ್ಕೆ ಜಿಲ್ಲೆಯ ಭಕ್ತರು ಸೇರಿದಂತೆ ಪಕ್ಕದ ಹಾಸನ, ಮೈಸೂರು ಜಿಲ್ಲೆಗಳ ಗಡಿಭಾಗದ ತಾಲೂಕಿನ ಪಿರಿಯಾಪಟ್ಟಣ, ಮತ್ತು ಅರಕಲಗೂಡು ತಾಲ್ಲೂಕಿನ ಸಾವಿರಾರು, ಭಕ್ತರು ಆಗಮಿಸಿದ್ದರು.

ಜಾತ್ರೋತ್ಸವ

ಸ್ವಾಮಿಯ ಸನ್ನಿಧಿಯಲ್ಲಿ ಬೆಳಗ್ಗಿನಿಂದ ಸಂಜೆಯ ೭ ಗಂಟೆಯವರೆಗೂ ಪೂಜೆಗಳು ನಡೆದವು. ರಥೋತ್ಸವದ ಅಂಗವಾಗಿ ದೇವಸ್ಥಾನದ ಜಾಗದಲ್ಲಿ ಜಾತ್ರೋತ್ಸವ ನಡೆಯಿತು. ಇದರ ಅಂಗವಾಗಿ ಕೂಡಿಗೆಯಿಂದ ಕೂಡುಮಂಗಳೂರು ಗ್ರಾಮದವರೆಗೆ ಎಲ್ಲಾ ಅಂಗಡಿ ಮುಂಗಟ್ಟು, ಮನೆಗಳು, ವಿದ್ಯುತ್ ದೀಪಗಳಿಂದ ಸಿಂಗಾರಗೊAಡಿದ್ದವು. ಮುಂಜಾನೆಯಿAದಲೇ ಭಕ್ತರು ಹಣ್ಣು ಕಾಯಿ ಸೇರಿದಂತೆ ಹರಕೆಯನ್ನು ಸರ್ಮರ್ಪಿಸುತ್ತಿದರು. ಹರಕೆ ಹೊತ್ತ ಸಾರ್ವಜನಿಕ ಭಕ್ತರ ತಂದೆ ತಾಯಿಯವರು ಮಕ್ಕಳ ತಲೆಯ ಕೊದಲನ್ನು ತೆಗಿಸಿಕೊಂಡು ಹರಕೆ ಒಪ್ಪಿಸುವುದು ಕಂಡುಬAದಿತು. ನಂತರ ರಾತ್ರಿ ೮. ಗಂಟೆಗೆ ವಿದ್ಯುತ್ ನಿಂದ ಅಲಂಕೃತ ಭವ್ಯ ಮಂಟಪದಲ್ಲಿ ಶ್ರೀ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಮಂಟಪೋತ್ಸವ ನೆರವೇರಿಸಲಾಯಿತು.

ರಥೋತ್ಸವದ ಅಂಗವಾಗಿ ಕೂಡಿಗೆ ಹನುಮ ಸೇನಾ ಸೇವಾ ಸಮಿತಿಯ ವತಿಯಿಂದ ಕೂಡಿಗೆ ಆಸ್ಪತ್ರೆ ಸಮೀಪದ ಮೈದಾನದಲ್ಲಿ ಅತ್ಯಾಕರ್ಷಕ ಮದ್ದು ಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸೆಳೆದವು.

ಈ ಸಂದರ್ಭದಲ್ಲಿ ಟಾಟಾ ಕಾಫಿ ಸಂಸ್ಕರಣಾ ಕೇಂದ್ರದ ಜನರಲ್ ಮ್ಯಾನೇಜರ್, ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಯು. ಸೋಮಯ್ಯ, ಸೀನಿಯರ್ ಮ್ಯಾನೇಜರ್ ನವೀನ್, ಸತ್ಯನಾರಾಯಣ ವ್ರತಾಚರಣಾ ಸಮಿತಿ ಅಧ್ಯಕ್ಷ ಗುರು, ಕಾರ್ಯದರ್ಶಿ ವಿಜೂ, ಹನುಮ ಸೇನಾ ಸಮಿತಿ ಅಧ್ಯಕ್ಷ ಶಿವಕುಮಾರ್, ಕೂಡುಮಂಗಳೂರು ಗ್ರಾಮದ ಪ್ರಮುಖರಾದ ಕೆ.ಟಿ. ಅರುಣ್ ಕುಮಾರ್, ಸುರೇಶ್, ಕಿಶೋರ್ ಕುಮಾರ್, ಧರ್ಮ, ಕೃಷ್ಣ, ಮಹೇಂದ್ರ, ನಂದಕುಮಾರ್, ಹರೀಶ್, ಗಣೇಶ್, ಸುನೀಲ್, ರಾಜು, ಶಿವಕುಮಾರ್, ರಾಜಣ್ಣ, ರೀಜೂ ಸಂತೋಷ್ ಲೋಕೇಶ್, ಸೇರಿದಂತೆ ಗ್ರಾಮದ ಪ್ರಮುಖರು, ಕೂಡಿಗೆ- ಕೂಡುಮಂಗಳೂರು ವ್ಯಾಪ್ತಿಯ ಹನುಮ ಸೇನಾ ಸೇವಾ ಸಮಿತಿಯ ನಿರ್ದೇಶಕರು, ಸದಸ್ಯರು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಮದ್ದುಗುಂಡುಗಳ ಪ್ರದರ್ಶನದ ನಂತರ ವಿದ್ಯುತ್ ದೀಪಗಳಿಂದ ಅಲಂಕೃತವಾದ ಭವ್ಯ ಮಂಟಪೋತ್ಸವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಿಂದ ಕೂಡುಮಂಗಳೂರು ಗ್ರಾಮವರೆಗೆ ಮೆರವಣಿಗೆ ಸಾಗಿ ನಂತರ ಸ್ಥಳಕ್ಕೆ ಬಂದಿತು.

ರಥೋತ್ಸವದ ಅಂಗವಾಗಿ ಶ್ರೀ ಹನುಮ ಸೇನಾ ಸೇವಾ ಸಮಿತಿಯ ವತಿಯಿಂದ ಕೂಡಿಗೆ ಸರ್ಕಲ್, ಡೈರಿ ಸರ್ಕಲ್, ಸೇರಿದಂತೆ ಕೂಡಿಗೆಯಿಂದ ಕೂಡುಮಂಗಳೂರು ಗ್ರಾಮ ವರೆಗೆ ಕೇಸರಿ ಬಣ್ಣದ ಬಂಟಿಗ್ಸ್ಗಳ ಮೂಲಕ ಗ್ರಾಮವನ್ನು ಸಿಂಗಾರ ಮಾಡಲಾಗಿತ್ತು.

ಕುಶಾಲನಗರ ಪೊಲೀಸ್ ಇಲಾಖೆಯ ಡಿ.ವೈ.ಎಸ್.ಪಿ. ಚಂದ್ರಶೇಖರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಸೂಚನೆಯಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ರಾಮಚಂದ್ರ, ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

ಸಂಪ್ರದಾಯದAತೆ ಕೂಡಿಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಾ ರಥೋತ್ಸವದ ಸಂದರ್ಭದಲ್ಲಿ ದೇವಾಲಯದ ಮೇಲ್ಭಾಗದ ಆಕಾಶದಲ್ಲಿ ಗರುಡ ಹಾರಾಟ ನಡೆಸಿ ದೇವಾಲಯವನ್ನು ಸುತ್ತುವುದು ಎಂಬ ಜನರ ನಂಬಿಕೆಯAತೆ ಈ ಬಾರಿ ರಥದಲ್ಲಿ ಕೂಡ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವ ಸಮಯದಲ್ಲಿ ಗರುಡನ ಪ್ರತ್ಯಕ್ಷವಾದ ಸಂದರ್ಭ ಆಗಮಿಸಿದ ಸಾವಿರಾರು ಭಕ್ತರು ಶ್ರೀ ಸ್ವಾಮಿಯ ದರ್ಶನ ಎಂಬAತೆ ಜೈಘೋಷ ಹಾಕಿ ಭಕ್ತಿ ಮೆರೆದರು.ಐತಿಹಾಸಿಕ ಹಿನ್ನೆಲೆಯಿರುವ ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಷಷ್ಠಿ ಪ್ರಯುಕ್ತ ಸುಬ್ರಹ್ಮಣ್ಯ ದೇವರಿಗೆ ಅರ್ಚನೆ, ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಪಂಚಾಮೃತ ಅಭಿಷೇಕ ಸೇವೆಯೊಂದಿಗೆ ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿತು. ದೇವಾಲಯದ ಅರ್ಚಕ ಸಂತೋಷ್ ಭಟ್ ನೇತೃತ್ವದ ಅರ್ಚಕ ವೃಂದದವರು ಪೂಜಾದಿ ಕಾರ್ಯಗಳನ್ನು ನೆರವೇರಿಸಿದರು. ಮಹಾಪೂಜೆಯ ನಂತರ ನೆರೆದಿದ್ದ ಸಹಸ್ರಾರು ಮಂದಿ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು. ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಹಾಗೂ ಸಮಿತಿ ಸದಸ್ಯರುಗಳು, ಕಾರ್ಯನಿರ್ವಹಣಾಧಿಕಾರಿ ದೇವರಾಜ್ ಅವರುಗಳ ಮುಂದಾಳತ್ವದಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಓಂಕಾರ್ ಯುವ ವೇದಿಕೆ, ಶಾಂತಿನಿಕೇತನ ಯುವಕ ಸಂಘ, ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಮಹಿಳಾ ಸಂಘಟನೆಗಳ ಸದಸ್ಯರುಗಳು ಸ್ವಯಂಸೇವಕರಾಗಿ ತೊಡಗಿಸಿಕೊಂಡಿದ್ದರು. ಸಂಜೆ ದೇವಾಲಯದ ಪುಷ್ಕರಣಿಯಲ್ಲಿ ಈ ವರ್ಷದ ಕೊನೆಯ ತೆಪ್ಪೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿAದ ನೆರವೇರಿತು. ನೂರಾರು ಮಂದಿ ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು. ಉತ್ಸವದ ಅಂಗವಾಗಿ ದೇವಾಲಯ ಹಾಗೂ ಪುಷ್ಕರಣಿ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು.ಸಿದ್ದಾಪುರ: ಅಮ್ಮತ್ತಿ ಕಾರ್ಮಾಡು ಗ್ರಾಮದ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಪಾಷಾಣಮೂರ್ತಿ ಕ್ಷೇತ್ರ ದಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಠಿ ಉತ್ಸವ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು.

ನಾಗದೇವರಿಗೆ ವಿಶೇಷ ಪೂಜೆ ಮಾಡಲಾಯಿತು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ನೀಡಲಾಯಿತು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಪಾಷಾಣಮೂರ್ತಿ ಕ್ಷೇತ್ರದ ಪ್ರಮುಖರಾದ ಕುಟ್ಟಂಡ ಸರಸ್ವತಿ ಮತ್ತು ಲೋಕೇಶ್ ಮುತ್ತಪ್ಪ ಹಾಜರಿದ್ದರು.ಗೋಣಿಕೊಪ್ಪಲು: ನಗರದ ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಭಕ್ತಿಪೂರ್ವಕವಾಗಿ ಜರುಗಿತು. ಮುಂಜಾನೆಯಿAದಲೇ ನೂರಾರು ಭಕ್ತರು ಸರತಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.

ತುಲಾಭಾರ ಸೇರಿದಂತೆ ಇನ್ನಿತರ ಪೂಜೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಗೋಣಿಕೊಪ್ಪ ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ದೇವಾಲಯದ ಆವರಣದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಕಣಿವೆ : ಕಾರ್ತಿಕ ಮಾಸೋತ್ತರದ ಮೊದಲ ಹಾಗೂ ಪ್ರಮುಖ ಆಚರಣೆಯಾದ ಸುಬ್ರಹ್ಮಣ್ಯ ಷಷ್ಠಿ ಉತ್ಸವ ಕುಶಾಲನಗರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ನಡೆಯಿತು.

ಮಹಿಳಾ ಭಕ್ತರು ಬೆಳಿಗ್ಗೆ ತಮ್ಮ ಮನೆಗಳ ಆವರಣದಲ್ಲಿ ರಂಗೋಲಿ ಹಚ್ಚಿ ತಳಿರು-ತೋರಣ ಕಟ್ಟಿ ಮನೆಯೊಳಗೆ ವಿಶೇಷ ಪೂಜೆಗೈದರು.

ಇದಕ್ಕೂ ಮುನ್ನಾ ನೆರೆಹೊರೆಯ ಮಂದಿ ಕತ್ತರಿಸಿದ ತರಕಾರಿ ಕಾಯಿಪಲ್ಯೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಅಡುಗೆ ಮನೆಯಲ್ಲಿ ಷಷ್ಠಿಯ ಪ್ರಮುಖ ಖಾದ್ಯವಾದ ಕಿಚಿಡಿ ಅನ್ನ ಹಾಗೂ ತರಕಾರಿ ಸಾಂಬಾರ್ ಮಾಡಿ ದೇವರಿಗೆ ನೈವೇದ್ಯ ಸಮರ್ಪಿಸಿದರು.

ಪೂಜೆಯ ಬಳಿಕ ಮನೆ ಮಂದಿ ಸಾಮೂಹಿಕವಾಗಿ ಬಾಳೆಎಲೆಯಲ್ಲಿ ಸವಿದರು. ಹಾಗೆಯೇ ಹಲವು ಮಹಿಳಾ ಭಕ್ತರು ತಮ್ಮ ಮನೆಗಳ ಆಸು ಪಾಸಿನಲ್ಲಿ ಕಂಡ ಹುತ್ತಗಳನ್ನು ಪೂಜಿಸಿ ಹೂವಿಟ್ಟು ಹಾಲೆರೆದರು. ಕಣಿವೆಯ ರಾಮಲಿಂಗೇಶ್ವರ ಸನ್ನಿಧಿ, ಹೆಬ್ಬಾಲೆಯ ಬಸವೇಶ್ವರ ದೇವಾಲಯ, ಶಿರಂಗಾಲ ಹಾಗೂ ಹುದುಗೂರು ಗ್ರಾಮಗಳ ಉಮಾಮಹೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಕುಶಾಲನಗರದ ಮಾರುಕಟ್ಟೆ ರಸ್ತೆಯ ನಾಗದೇವತಾ ಸನ್ನಿಧಿಯಲ್ಲಿ ಹುತ್ತವನ್ನು ಪೂಜಿಸಿ ನಾಗದೇವರಿಗೆ ಸಾಮೂಹಿಕವಾಗಿ ಭಕ್ತರು ಹಾಲೆರೆದರು.ಕುಶಾಲನಗರ: ಕುಶಾಲನಗರ ಕೆ ಹೆಚ್ ಬಿ ಕಾಲೋನಿಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಷಷ್ಠಿ ಅಂಗವಾಗಿ ಸಾವಿರಾರು ಸಂಖ್ಯೆ ಭಕ್ತಾದಿಗಳು ಆಗಮಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.

ದೇವಾಲಯದ ಅರ್ಚಕ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಅಭಿಷೇಕ, ಪುಷ್ಪ ಅಲಂಕಾರ, ವಸ್ತç ಅಲಂಕಾರ, ಷಷ್ಠಿ ಪೂಜೆ, ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಿತು. ಬೆಳಗಿನ ವೇಳೆ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಭಕ್ತಾದಿಗಳು ದೇವರಿಗೆ ಹಾಲಾಭಿಷೇಕ ನಡೆಸಿ ಪೂಜೆ ಸಲ್ಲಿಸಿದರು.ಸಂಜೆ ಅಲಂಕೃತ ಭವ್ಯ ಮಂಟಪದಲ್ಲಿ ಮಂಗಳ ವಾದ್ಯ ಮತ್ತು ಕಲಾ ತಂಡದೊAದಿಗೆ ದೇವರ ಉತ್ಸವ ಹಾರಂಗಿ ಕಾಲನಿ, ಜನತಾ ಕಾಲೋನಿ, ರಥಬೀದಿ ಮೂಲಕ ಬೈಚನಹಳ್ಳಿವರೆಗೆ ಸಾಗಿ ಸನ್ನಿಧಿಗೆ ಹಿಂತಿರುಗಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಿ.ಆರ್. ಚಿಕ್ಕೇಗೌಡ, ಗೌರವಾಧ್ಯಕ್ಷ ಎಂ.ಎಸ್. ಮೊಗಣ್ಣೇಗೌಡ, ಪದಾಧಿಕಾರಿಗಳಾದ ಬಿ.ವಿ. ನಂಜುAಡಸ್ವಾಮಿ, ಬಿ.ಎ. ಗಂಗಾಧರ್, ಎಚ್.ಎಂ. ಮಧುಸೂದನ್, ಎಚ್.ಡಿ. ಶಿವಾಜಿ ರಾವ್, ಎಂ.ಡಿ. ನಾಗೇಶ್, ಟಿ.ಜೆ. ರಾಜು ಮತ್ತಿತರರು ಇದ್ದರು.