ಮುಂಬೈ, ನ. ೨೪: ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ(೮೯) ಅನಾರೋಗ್ಯದಿಂದ ನಿಧನರಾದರು. ಬಾಲಿವುಡ್ನ ‘ಹೀಮ್ಯಾನ್’ ಎಂದೇ ಹೆಸರುವಾಸಿಯಾಗಿದ್ದ ಧರ್ಮೇಂದ್ರ ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದರು. ಈ ತಿಂಗಳ ಆರಂಭದಲ್ಲಿ ತೀವ್ರ ಅನಾರೋಗ್ಯದಿಂದಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಅವರನ್ನು ಸೇರಿಸಲಾಗಿತ್ತು. ನಂತರ ಡಿಸ್ಚಾರ್ಜ್ ಆಗಿ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
೧೯೬೦ರಲ್ಲಿ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದ ಧರ್ಮೇಂದ್ರ, ಅನ್ಪದ್, ಬಂದಿನಿ, ಅನುಪಮಾ ಮತ್ತು ಆಯಾ ಸಾವನ್ ಝೂಮ್ ಕೆ ಮುಂತಾದ ಚಿತ್ರಗಳಲ್ಲಿ ಸಾಮಾನ್ಯ ಪಾತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ನಂತರ ಅವರು ಶೋಲೆ, ಧರಮ್ ವೀರ್, ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್ ಮತ್ತು ಡ್ರೀಮ್ ಗರ್ಲ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಖ್ಯಾತಿಗಳಿಸಿದ್ದರು. ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟಿಸಿದ ‘ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ’ದಲ್ಲಿ ಧರ್ಮೇಂದ್ರ ಕೊನೆಯದಾಗಿ ಕಾಣಿಸಿಕೊಂಡಿದ್ದರು.