ಮಡಿಕೇರಿ, ನ. ೨೪: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಇದರ ವಾರ್ಷಿಕ ಕಾರ್ಯಕ್ರಮದನ್ವಯ, ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸಹಕಾರದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ನಡೆಸಲು ತೀರ್ಮಾನಿಸಿದೆ. ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಈ ಸ್ಪರ್ಧೆಯನ್ನು ಏರ್ಪಡಿಸಿ ಮೊದಲ ಮೂರು ವಿಜೇತರಿಗೆ ಜಿಲ್ಲಾ ಮಟ್ಟದಲ್ಲಿ ಬಹುಮಾನ ವಿತರಿಸಿ ವಿಜೇತರಾದವರ ಉತ್ತರ ಪತ್ರಿಕೆಗಳನ್ನು ರಾಜ್ಯ ಮಟ್ಟದಲ್ಲಿ ಮೌಲ್ಯಮಾಪನ ಮಾಡಿ ಅಲ್ಲಿ ವಿಜೇತರಾದವರಿಗೆ ಮೂರು ಬಹುಮಾನಗಳನ್ನು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.

ಈ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯು ‘ಸಮಗ್ರ ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರ ಚಳವಳಿಯ ಪಾತ್ರ’ ವಿಷಯದಡಿ ತಾ.೨೭ ರಂದು ಬೆಳಿಗ್ಗೆ ೧೦-೩೦ ರಿಂದ ೧೧-೩೦ ಗಂಟೆಯವರೆಗೆ ನಗರದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆಯಲಿದ್ದು, ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

ತಾವುಗಳು ತಮ್ಮ ಸಂಸ್ಥೆಯಿAದ ಒಬ್ಬ ವಿದ್ಯಾರ್ಥಿಯನ್ನು ಮೊದಲ ಮೂರು ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧಾಳುಗಳು ಆಂಗ್ಲ ಅಥವಾ ಕನ್ನಡ ಭಾಷೆಯಲ್ಲಿ ಮಾತ್ರ ಬರೆಯಲು ಅವಕಾಶವಿದೆ. ಪ್ರಬಂಧ ಬರೆಯಲು ಬೇಕಾಗುವ ಉತ್ತರ ಪತ್ರಿಕೆಯನ್ನು ಆ ದಿನ ಸ್ಪರ್ಧಾ ಭವನದಲ್ಲಿ ನೀಡಲಾಗುವುದು. ಪ್ರಬಂಧವನ್ನು ನಾಲ್ಕು ಪುಟಗಳಿಗೆ ಕಡಿಮೆ ಇಲ್ಲದಂತೆ ಆರು ಪುಟಗಳಿಗೆ ಮೀರದಂತೆ ಬರೆಯಬೇಕು.

ಚರ್ಚಾ ಸ್ಪರ್ಧೆ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಇದರ ವಾರ್ಷಿಕ ಕಾರ್ಯಕ್ರಮದನ್ವಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದಲ್ಲಿ ಸಹಕಾರದ ಬಗ್ಗೆ ಚರ್ಚಾ ಸ್ಪರ್ಧೆಯನ್ನು ನಡೆಸಲು ತೀರ್ಮಾನಿಸಿದೆ. ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಗಾಗಿ ಕೊಡಗು ಜಿಲ್ಲೆಯಿಂದ ಇಬ್ಬರು ಅಭ್ಯರ್ಥಿಗಳನ್ನು (ವಿಷಯದ ಪರವಾಗಿ ಒಬ್ಬರು ಮತ್ತು ವಿಷಯದ ವಿರುದ್ಧವಾಗಿ ಒಬ್ಬರು) ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಆಯ್ಕೆ ಮಾಡಲಿದೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಮಾತ್ರ ಪ್ರಯಾಣ ವೆಚ್ಚ ನೀಡಲಾಗುವುದು. ಮೊದಲ ಮೂರು ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.

ಜಿಲ್ಲೆಯಿಂದ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಗೆ ಆಯ್ಕೆ ಮಾಡಲು ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯನ್ನು ‘ಸಹಕಾರಿ ವ್ಯವಸ್ಥೆಯ ಸಾಧನೆ, ವೈಫಲ್ಯಗಳ ಪರಾಮರ್ಶೆಯಿಂದ ಮಾತ್ರವೇ ಸಹಕಾರಾಭಿವೃದ್ಧಿ ಬಲಗೊಳ್ಳಲು ಸಾಧ್ಯ’ ಎಂಬ ವಿಷಯದಡಿ ತಾ.೨೭ರಂದು ಬೆಳಿಗ್ಗೆ ೧೧ ಗಂಟೆಗೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಸ್ಪರ್ಧಿಗಳು ಆಂಗ್ಲ ಅಥವಾ ಕನ್ನಡ ಭಾಷೆಯಲ್ಲಿ ಮಾತ್ರ ಮಾತನಾಡಲು ಅವಕಾಶವಿದೆ. ಚರ್ಚಾ ಸ್ಪರ್ಧೆಯನ್ನು ಅದರ ನಿಯಮಗಳಿಗನುಸಾರವಾಗಿ ನಡೆಸಲಾಗುವುದು ಎಂದು ಜಿಲ್ಲಾ ಸಹಕಾರ ಯೂನಿಯನ್ ಪ್ರಕಟಣೆ ತಿಳಿಸಿದೆ.