ಕಣಿವೆ, ನ. ೨೩: ವಾಲ್ನೂರು - ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಾಳೆಗುಂಡಿ ಗಿರಿಜನ ಹಾಡಿ ನಿವಾಸಿಗಳು ಸರ್ಕಾರದ ಯಾವುದೇ ಸೌಲಭ್ಯಗಳು ಸಮರ್ಪಕವಾಗಿ ದೊರಕದ ಕಾರಣ ತಾವು ವಾಸವಿರುವ ಗುಡಿಸಲುಗಳಿಗೆ ಹಣ ಕೊಟ್ಟು ಖರೀದಿಸಿ ತಂದ ಪ್ಲಾಸ್ಟಿಕ್ ಹೊದಿಕೆಗಳನ್ನು ಕಟ್ಟಿಕೊಂಡು ನರಕದ ಬದುಕು ಕಟ್ಟಿದ್ದಾರೆ.
ಈ ಹಾಡಿಯಲ್ಲಿ ವಾಸವಿರುವ ಗಿರಿಜನ ಮಂದಿಗೆ ಕುಟುಂಬಕ್ಕೆ ತಲಾ ಮುಕ್ಕಾಲು ಎಕರೆ ಜಾಗ ನೀಡಲಾಗಿದೆ. ಈ ಜಾಗದಲ್ಲಿ ಕೆಲವರು ಕಾಫಿ ಗಿಡ ನೆಟ್ಟು ತೋಟದ ರೂಪ ಕೊಟ್ಟರೆ, ಕೆಲವರು ಹಾಗೆಯೇ ಖಾಲಿ ಬಿಟ್ಟುಕೊಂಡಿದ್ದಾರೆ. ಈಗಾಗಲೇ ಗಿಡಗಳನ್ನು ನೆಟ್ಟು ತೋಟ ಮಾಡಿರುವ ಮಂದಿಗೆ ಕಣ್ಣೆದುರೇ ಇರುವ ಕಾಡಿನಲ್ಲಿ ಇರುವ ಕಾಡಾನೆಗಳು ಹಾಗೂ ಕಾಡು ಹಂದಿಗಳ ಕಾಟ ಮಿತಿ ಮೀರಿದ್ದು ಎಲ್ಲವನ್ನು ತಿಂದು ತುಳಿದು ನಷ್ಟಗೈದಿರುವ ಬಗ್ಗೆ ಹಾಡಿಯ ವಾಸಿ ಶಾಂತಿ, ಪಾರ್ವತಿ, ಸುಶೀಲಾ ಹೇಳುತ್ತಾರೆ. ಕಾಡಾನೆಗಳ ಆವಾಸ ಸ್ಥಾನದಲ್ಲಿ ವಾಸವಿರುವ ಈ ಹಾಡಿಯ ಮಂದಿಗೆ ಅಲ್ಲಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಿದರೆ ರಾತ್ರಿ ವೇಳೆ ತಿರುಗಾಡಲು ಬಹಳ ಉಪಯೋಗ ವಾಗುತ್ತದೆ ಎಂಬುದು ಹಾಡಿಯ ವಾಸಿಗಳಾದ ರವಿ, ಸಾವಿತ್ರಿ, ಪುಟ್ಟಮ್ಮ ಎಂಬವರ ಮನವಿಯಾಗಿದೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಇದೇ ಬಾಳೆಗುಂಡಿ ಹಾಡಿಯಲ್ಲಿ ಆದಿವಾಸಿಗಳ ಸಂಚಾರಕ್ಕೆ ನೆರವಾಗಲೆಂದು ಕಳೆದ ವರ್ಷ ಲಕ್ಷಾಂತರ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಕಿರಿದಾದ ಸೇತುವೆ ಬಳಿ ಮಣ್ಣು ಕುಸಿದು ರಸ್ತೆಯೇ ಕಾಣದ ಸ್ಥಿತಿ ತಲುಪುತ್ತಿದ್ದು ಪಾದಚಾರಿಗಳ ಸಂಚಾರಕ್ಕೆ ಸಂಚಕಾರವಾಗುತ್ತಿದ್ದು, ಕೂಡಲೇ ಸಂಬAಧಪಟ್ಟವರು ಸಮಸ್ಯೆ ಪರಿಹರಿಸಬೇಕು ಎಂದು ಹಾಡಿಯ ವಾಸಿಗಳು ಒತ್ತಾಯಿಸಿದ್ದಾರೆ.
ನಮಗೆ ಸೂಕ್ತ ಆರೋಗ್ಯ ಮಾಹಿತಿ, ಸಾಮಾಜಿಕ ಅರಿವು ಮೂಡಿಸುವಲ್ಲಿ ಇಲಾಖೆಗಳು ನಿರ್ಲಕ್ಷö್ಯ ತೋರಿವೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣ ಕೊರಕಲು ಹಿಡಿದ ಸ್ಥಿತಿಯಲ್ಲಿ ಇರುವ ಹಾಡಿಯ ಕಾಲು ಹಾದಿಯ ಉದ್ದಕ್ಕೂ ಅಲ್ಲಲ್ಲಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಸೂಕ್ತ ವಿದ್ಯುತ್ ಸೌಲಭ್ಯಗಳು ಇಲ್ಲದೆ ಕತ್ತಲೆಯಲ್ಲಿ ಸಂಚರಿಸುವ ಗಿರಿಜನರಿಗೆ ಸೂಕ್ತ ಬೆಳಕಿನ ವ್ಯವಸ್ಥೆ ಅಥವಾ ಸೋಲಾರ್ ದೀಪಗಳನ್ನು ಅಳವಡಿಸಿ ಕೊಡಬೇಕೆಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.
ಕುಡಿತದ ಚಟದಿಂದ ಜೀವ ಕಳೆದು ಕೊಂಡವರೇ ಹೆಚ್ಚು....!
ಜಿಲ್ಲೆಯಲ್ಲಿ ಇರುವ ಬಹುತೇಕ ಹಾಡಿಗಳಲ್ಲಿ ವಾಸವಿರುವ ಗಿರಿಜನ ಮಂದಿ ಶ್ರಮಿಕ ಜೀವಿಗಳಾಗಿದ್ದು ಹಗಲು ಹಾಗೂ ಇರುಳು ಸಮಯ ಮದ್ಯಪಾನಕ್ಕೆ ದಾಸರಾಗಿದ್ದು ತಾವು ಕೂಲಿಗೈದು ಸಿಗುವ ಹಣವನ್ನೆಲ್ಲಾ ಮದ್ಯಪಾನಕ್ಕೆ ವ್ಯಯಿಸುತ್ತಿದ್ದಾರೆ ವಿನಃ ಹೊಟ್ಟೆಗೆ ಪೌಷ್ಟಿಕಾಂಶ ಯುಕ್ತ ಆಹಾರ ಸೇವಿಸುವಲ್ಲಿ ಮೈ ಮರೆಯುತ್ತಿದ್ದು ಆರೋಗ್ಯ ಸಮಸ್ಯೆಗಳಿಗೆ ಸಿಲುಕಿ ಅಕಾಲಿಕ ಮರಣಕ್ಕೆ ತುತ್ತಾಗಿರುವ ಸಂಖ್ಯೆ ಎಲ್ಲಾ ಹಾಡಿಗಳಲ್ಲೂ ಕಾಣುತ್ತಿರುವ ಸಾಮಾನ್ಯ ಸಂಗತಿಯಾಗಿದೆ.
ಗಮನ ಹರಿಸದ ಐಡಿಡಿಪಿ ಅಧಿಕಾರಿಗಳು
ಗಿರಿಜನರ ಸಮಗ್ರ ಕಲ್ಯಾಣಕ್ಕೆಂದೇ ಇರುವ ಐಟಿಡಿಪಿ ಇಲಾಖೆಯ ಅಧಿಕಾರಿಗಳು ಹಾಡಿಗಳಿಗೆ ತೆರಳಿ ಅಲ್ಲಿನ ಶ್ರಮಿಕರ ಜೀವನದ ಸ್ಥಿತಿ - ಗತಿಗಳನ್ನು ಅರಿತು ಅವರಿಗೆ ಸರ್ಕಾರದಿಂದ ಸಿಗಬೇಕಿರುವ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ತೀರಾ ನಿರ್ಲಕ್ಷö್ಯ ವಹಿಸಿದ್ದಾರೆ ಎಂದೇ ಹೇಳಬಹುದು.
ಹಾಡಿಗಳ ವಾಸಿಗಳು ಹೇಳುವ ಹಾಗೆ ಸೂರು, ನೀರು, ದಾರಿ, ಬೆಳಕಿನ ಸೌಲಭ್ಯಗಳನ್ನು ಯಾರ ಬಳಿ ಕೇಳುವುದು ಎಂಬ ನಿಕೃಷ್ಟ ಸ್ಥಿತಿಯಲ್ಲಿ ಇಲ್ಲಿನ ಮಂದಿ ಇದ್ದಾರೆ.
ಬಾಳೆಗುಂಡಿ ಹಾಡಿಯೂ ಸೇರಿದಂತೆ ಜಿಲ್ಲೆಯಲ್ಲಿ ಇರುವ ಎಲ್ಲಾ ಗಿರಿಜನ ಹಾಡಿಗಳ ನಿವಾಸಿಗಳಿಗೆ ಅನುಕೂಲ ವಾಗುವಂತೆ ಗಿರಿಜನ ಕಲ್ಯಾಣ ಇಲಾಖೆ ಕಡ್ಡಾಯವಾಗಿ ಹಾಗೂ ಅತೀ ಜರೂರಾಗಿ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಸಾಮಾಜಿಕ ಶಿಕ್ಷಣದ ಅಗತ್ಯವಿದೆ.
ಸರ್ಕಾರ ನೀಡಿದ ಅನುದಾನ ಎಲ್ಲಿ ಹೋಯ್ತು...?
ಅರಣ್ಯ ವಾಸಿಗಳಾದ ಗಿರಿಜನರ ಸರ್ವತೋಮುಖ ಪ್ರಗತಿಯ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಳೆದ ಹಲವು ದಶಕಗಳಿಂದ ಬಿಡುಗಡೆ ಮಾಡಿರುವ ಅನುದಾನಗಳು ಏನಾದವು ? ಏಕೆ ಗಿರಿಜನರಿಗೆ ಕೊನೆ ಪಕ್ಷ ಒಂದು ಸಣ್ಣ ಮನೆ ಕೂಡ ಕಟ್ಟಿಕೊಡದ ದುಸ್ಥಿತಿ ನಿರ್ಮಾಣವಾಗಿದೆ.
ಏಕೆ ಒಂದೇ ಒಂದು ಹಾಡಿಯ ಮಕ್ಕಳು ಉನ್ನತ ಶಿಕ್ಷಣ ಪಡೆದಿಲ್ಲ. ಏಕೆ ಆದಿವಾಸಿಗಳ ಮಕ್ಕಳು ಸರ್ಕಾರದ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ? ಎಂಬಿತ್ಯಾದಿ ಪ್ರಶ್ನೆಗಳಿಗೆ ಯಾವುದೇ ಜಿಲ್ಲಾಡಳಿತದಿಂದಲೂ ಸೂಕ್ತವಾದ ಸಮಂಜಸವಾದ ಉತ್ತರ ದೊರಕುತ್ತಿಲ್ಲ.
ಏನೇ ಆಗಲೀ, ಸಮಾಜದ ಶೋಷಿತ ವರ್ಗದ ನೈಜ ಅರಣ್ಯ ಸಂಕುಲದ ರಕ್ಷಕರಾದ ಈ ಆದಿವಾಸಿಗಳು ಇನ್ನಾದರೂ ಸುಸಜ್ಜಿತ ಮನೆಗಳನ್ನು ಹೊಂದುವAತಾಗಲೀ.
ಸರ್ಕಾರದ ಸೌಲಭ್ಯಗಳು ಸಮಂಜಸವಾಗಿ ದೊರಕುವಂತಾಗಲಿ.
- ಕೆ.ಎಸ್. ಮೂರ್ತಿ.