ಮಡಿಕೇರಿ, ನ. ೨೩: ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ ಅವರು ಹೇಳಿದರು.
ನಗರದ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಆಯೋಜಿತ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು, ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ. ಆದರೆ, ಭಾಗವಹಿಸುವಿಕೆ ಮುಖ್ಯವಾಗುತ್ತದೆ. ವೃತ್ತಿ ಜಂಜಾಟದಲ್ಲಿರುವ ವಕೀಲರಿಗೆ ಕ್ರೀಡೆ ಮನೋಲ್ಲಾಸ ನೀಡುವುದರೊಂದಿಗೆ ಬದ್ಧತೆ ಹಾಗೂ ಕ್ರಿಯಾಶೀಲತೆಯಿಂದ ಕೆಲಸ ಮಾಡಲು ಪ್ರೇರೇಪಣೆ ನೀಡುತ್ತದೆ. ಆರೋಗ್ಯದ ದೃಷ್ಟಿಯಲ್ಲಿ ದಿನನಿತ್ಯ ಸ್ಪಲ್ಪ ಸಮಯವನ್ನು ವ್ಯಾಯಾಮ, ಯೋಗ, ಧ್ಯಾನ, ಕ್ರೀಡೆಗೆ ಮೀಸಲಿಡುವಂತೆ ಕರೆ ನೀಡಿದರು.
೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಸುರೇಂದ್ರ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸಿ.ಕೆ. ಬಸವರಾಜು, ಹಿರಿಯ ಸಿವಿಲ್ ನ್ಯಾಯಾಧೀಶರು, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಡಿ.ಎಸ್. ವಿನುತ ಮಾತನಾಡಿ ಪಂದ್ಯಾವಳಿಗೆ ಶುಭ ಕೋರಿದರು.
ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನ್ಯಾಯಾಂಗ ಇಲಾಖೆ ನೌಕರರ ಸಂಘದ ಉಪಾಧ್ಯಕ್ಷ ಮಂಜಪ್ಪ ಪೂಜಾರ್, ಹಿರಿಯ ವಕೀಲರಾದ ಕೆ. ಸೌಭಾಗ್ಯ ಪೊನ್ನಪ್ಪ ಉಪಸ್ಥಿತರಿದ್ದರು.