ಮಡಿಕೇರಿ, ನ. ೨೧: ಸಿ ಆ್ಯಂಡ್ ಡಿ ಲ್ಯಾಂಡ್ ವಿಚಾರದಲ್ಲಿ ಏರ್ಪಟ್ಟಿರುವ ಗೊಂದಲ ಪರಿಹಾರಕ್ಕೆ ಸರಕಾರ ಸಮಿತಿಯನ್ನು ರಚಿಸಿದ್ದು, ರಾಜ್ಯ ಸರಕಾರದ ನಿಲುವು ರೈತರ ಪರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಅಭಯ ನೀಡಿದರು.

ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಜನಪ್ರತಿನಿಧಿಗಳು, ಪ್ರಮುಖರು ಹಾಗೂ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಈಗಾಗಲೇ ಸಮಿತಿಯನ್ನು ರಚಿಸಿ ಸದಸ್ಯರನ್ನು ನೇಮಿಸಲಾಗಿದ್ದು, ಸಮಿತಿ ಎದುರು ಆಕ್ಷೇಪಣೆಯನ್ನು ಸಲ್ಲಿಕೆ ಮಾಡಿ ಪರಿಹಾರಕ್ಕೆ ಪ್ರಯತ್ನಿಸಬೇಕಾಗಿದೆ. ಗೊಂದಲ ನಿವಾರಣೆಗೆ ಸರಕಾರ ಕೆಲಸ ಮಾಡುತ್ತಿದೆ. ಸಮಿತಿ ಸದಸ್ಯರು ಬಂದು ಅಭಿಪ್ರಾಯ ಕಲೆ ಹಾಕಲಿದ್ದಾರೆ. ಇದರಿಂದ ಪರಿಹಾರ ದೊರೆಯುವ ವಿಶ್ವಾಸವಿದ್ದು, ರೈತರು ಸಂಘಟಿತರಾಗಿ ಮುಂದುವರೆಯಬೇಕೆAದು ಕರೆ ನೀಡಿದರು.

ಸುಪ್ರೀಂ ಕೋರ್ಟ್ಗೆ ಮೇಲ್ಮನವಿ : ಪೊನ್ನಣ್ಣ

ಕೊಡಗಿನ ಭೂಮಿ ವಿಚಾರ ವಿವಾದವಾಗಿ ಮಾರ್ಪಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಸಿ-ಡಿ ಲ್ಯಾಂಡ್ ಹೋರಾಟ ಕಾನೂನಾತ್ಮಕವಾಗಿ ನಡೆಯಬೇಕು. ಕಾನೂನಿನಲ್ಲಿ ಭಾವನೆಗಳಿಗೆ ಬೆಲ್ಲ ಇಲ್ಲ. ಹೋರಾಟ ದಾರಿತಪ್ಪದೆ ಸರಿ ದಾರಿಯಲ್ಲಿ ಸಾಗಿ ರೈತರಿಗೆ ನ್ಯಾಯ ದೊರಕಬೇಕು. ಸಿ-ಡಿ ಲ್ಯಾಂಡ್ ಹಾಗೂ ಸೆಕ್ಷನ್ ೪ ವಿಷಯವಸ್ತುಗಳು ಬೇರೆ ಎಂಬುದು ಮೊದಲು ಅರ್ಥೈಸಿಕೊಳ್ಳಬೇಕು. ರಾಜ್ಯ ಸರಕಾರ ಪರಿಶೀಲನಾ ಸಮಿತಿ ಮಾಡಿದ್ದು, ಸುಪ್ರೀಂ ಕೋರ್ಟ್ ಎಸ್‌ಐಟಿ ರಚನೆ ಮಾಡಿದೆ. ಈ ಬಗ್ಗೆ ರೈತರಿಗೆ ಮೊದಲು ಜಾಗೃತಿ ಮೂಡಬೇಕು. ೧೯೮೨ ರಲ್ಲಿ ೧೧,೭೭೨ ಎಕರೆ ಜಾಗವನ್ನು ಮೊದಲು ಅಧಿಸೂಚನೆಗೊಳಿಸಲಾಯಿತು. ೧೯೯೪ರ ಆದೇಶ ಬಳಿಕ ಗೊಂದಲ ಆರಂಭವಾಯಿತು. ಕೊಡಗಿನಲ್ಲಿ ೧೧ ಸಾವಿರ ಹೆಕ್ಟೇರ್ ಪ್ರದೇಶವನ್ನು ಸಿ-ಡಿ ಲ್ಯಾಂಡ್‌ಗೆ ಸೇರಿಸಲಾಗಿದೆ. ಈ ಕುರಿತು ಸಮಿತಿಯ ಮುಂದೆ ವಾಸ್ತವಾಂಶ ತಿಳಿಸುವ ಕೆಲಸವಾಗಬೇಕು. ಸಂರಕ್ಷಿತ ಅರಣ್ಯ ಹೊರತುಪಡಿಸಿದ ಜಾಗ ಕಂದಾಯ ಇಲಾಖೆಗೆ ಪಡೆಯಬೇಕೆಂದು ಹಲವು ವರ್ಷಗಳ ಹಿಂದೆ ಸರಕಾರದ ಆದೇಶವಾಗಿದೆ. ೧೯೯೩ರಲ್ಲೂ ಆದೇಶ ತಿದ್ದುಪಡಿ ಮಾಡಿ ಹೊರಡಿಸಲಾಗಿತ್ತು. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಗೊಂದಲ ಸೃಷ್ಟಿಸಿ ಈ ಹಂತಕ್ಕೆ ತಂದಿದ್ದಾರೆ. ಮೇಲ್ಮನವಿ ಸಲ್ಲಿಸಿದ್ದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ ಎಂದರು.

ತಾರ್ಕಿಕ ಅಂತ್ಯ ಬೇಕು : ಮಂತರ್

ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಹಲವು ವರ್ಷಗಳಿಂದ ಈ ವಿಚಾರದಿಂದ ರೈತರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಕೃಷಿಗೆ ಯೋಗ್ಯವಲ್ಲದ ಜಾಗವನ್ನು ಸಿ-ಡಿ ಲ್ಯಾಂಡ್ ಆಗಿ ಪರಿವರ್ತಿಸಲಾಯಿತು. ೧ ಲಕ್ಷ ೩೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಸಮಸ್ಯೆಯಿದೆ. ನಮೂನೆ ೫೭ರಡಿ ರೈತರಿಗೆ ಭೂಮಿ ನೀಡುವ ಅವಕಾಶವಿದೆ. ಈ ಗೊಂದಲಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು. ರೈತರನ್ನು ಬೀದಿಪಾಲು ಮಾಡಲು ಬಿಡುವುದಿಲ್ಲ. ಸಿ-ಡಿ ಲ್ಯಾಂಡ್ ತೆರವು ಮಾಡುವ ಆದೇಶ ಸರಕಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಅರಣ್ಯವನ್ನಾಗಿ ಮಾಡಬಾರದೆಂಬ ಆದೇಶವಿದೆ : ಕೆಜಿಬಿ

ಮಾಜಿ ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ಈ ಸಮಸ್ಯೆ ಪಶ್ಚಿಮಘಟ್ಟ ಪ್ರದೇಶವನ್ನು ಬಾಧಿಸಿದೆ. ಇಷ್ಟಬಂದAತೆ ಅರಣ್ಯ ಇಲಾಖೆ ಸುತ್ತೋಲೆ ಹೊರಡಿಸಿದ ಪರಿಣಾಮ ಅತಂತ್ರ ಸ್ಥಿತಿಗೆ ಸಿಲುಕಿದ್ದೇವೆ. ಸಿ ಮತ್ತು ಡಿಯಂತಹ ಭೂಮಿಗಳನ್ನು ಅರಣ್ಯವನ್ನಾಗಿ ಮಾಡಬಾರದೆಂಬ ಸ್ಪಷ್ಟ ಆದೇಶಗಳಿವೆ. ಇದೀಗ ರಚನೆಯಾಗಿರುವ ಸಮಿತಿಯಲ್ಲಿರುವ ಸದಸ್ಯರೊಬ್ಬರಿಂದಲೇ ಈ ಸಮಸ್ಯೆ ಉಂಟಾಗಲು ಕಾರಣವಾಗಿದೆ. ತಪ್ಪು ಸಂದೇಶವನ್ನು ಜನಪ್ರತಿನಿಧಿಗಳಿಗೆ ಅಧಿಕಾರಿಗಳು ನೀಡಿದ ಪರಿಣಾಮ ಈ ಹಂತಕ್ಕೆ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೊಂದಲ ಮೂಡಿಸಿದ ಅಧಿಕಾರಿ ಸಮಿತಿಯಲ್ಲಿ

ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮಾತನಾಡಿ, ಸರಕಾರ ಪರಿಶೀಲನೆಗೆ ಆದೇಶಿಸಿರುವುದು ಸ್ವಾಗತಾರ್ಹ. ಆದರೆ, ಸಮಿತಿಯಲ್ಲಿರುವ ಒಬ್ಬ ಅಧಿಕಾರಿಯಿಂದಲೇ ಗೊಂದಲ ಮೂಡಲು ಕಾರಣವಾಗಿದ್ದು, ಅವರನ್ನು ಕೈಬಿಡಬೇಕು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಗೊಂದಲ ಸೃಷ್ಟಿಯಾಗಿದ್ದು, ಸ್ಥಳೀಯರನ್ನು ಸಮಿತಿಗೆ ಸೇರ್ಪಡೆ ಮಾಡಿಕೊಳ್ಳಬೇಕು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ೧೯೦೫ರಲ್ಲಿದ್ದ ದಾಖಲಾತಿ ಇದೀಗ ಅರಣ್ಯ ಎಂದು ಬದಲಾಗಿದೆ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ೫ ಸಾವಿರ ಕುಟುಂಬಗಳು ಬೀದಿಗೆ ಬಂದಿವೆ. ರಾಜ್ಯ ಹಾಗೂ ಕೇಂದ್ರ ಸರಕಾರ ಸೇರಿ ಕೆಲಸ ಮಾಡಿದರೆ ಗೊಂದಲ ಪರಿಹಾರ ಸಾಧ್ಯ ಎಂದರು.

ಜಂಟಿ ಸರ್ವೆ ಆಗಲಿ : ಮೇದಪ್ಪ

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ರೈತರಿಗೆ ವಿರೋಧವಾದ ಸುತ್ತೋಲೆ ಯಾವ ಸರಕಾರವೂ ಮಾಡಿಲ್ಲ. ಅರಣ್ಯ ಸಚಿವರು ಈ ರೀತಿ ರೈತ ವಿರೋಧಿ ಸುತ್ತೋಲೆ ಹೊರಡಿಸಿರುವುದನ್ನು ಹಿಂಪಡೆಯಬೇಕು. ಅವೈಜ್ಞಾನಿಕವಾಗಿ ಮಾಡಿರುವ ಸರ್ವೆ ಸರಿಯಲ್ಲ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಆದೇಶ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸರ್ವೆಯಾಗಬೇಕು. ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಿದರೆ ಸಮಸ್ಯೆಗೆ ಪರಿಹಾರ ದೊರೆಯಬಹುದು ಎಂದು ಅಭಿಪ್ರಾಯಿಸಿದರು.

ಬುಡಕಟ್ಟು ರೈತ ಸಂಘದ ಕುಡಿಯರ ಮುತ್ತಪ್ಪ ಮಾತನಾಡಿ, ಫಲವತ್ತಾದ ಕೃಷಿ ಭೂಮಿಯನ್ನು ಅರಣ್ಯ ಎಂದು ಪರಿವರ್ತಿಸಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಕಸ್ತೂರಿ ರಂಗನ್ ವರದಿ ಭಯ ಮುಗಿದ ನಂತರ ಸಿ-ಡಿ ಲ್ಯಾಂಡ್ ರೈತರನ್ನು ಕಾಡುತ್ತಿದೆ. ಅಲ್ಪ ಪ್ರಮಾಣದ ಸರಕಾರಿ ಜಮೀನನ್ನು ಸಣ್ಣ ರೈತರಿಗೆ ಗುತ್ತಿಗೆಗೆ ನೀಡುವುದು ಸರಿಯಲ್ಲ. ಇರುವ ಜಾಗಕ್ಕೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದ ಅವರು, ಕಾನೂನು ಹೋರಾಟದ ಅವಶ್ಯಕತೆ ಇದೆ. ಸುಪ್ರೀಂ ಕೋರ್ಟ್ನಲ್ಲಿ ಪ್ರಬಲ ವಾದ ಮಂಡಿಸುವ ಕೆಲಸವಾಗಬೇಕು ಎಂದರು.

ಕಾನೂನಿನಲ್ಲಿ ಬದಲಾವಣೆಯಾಗಬೇಕು

ನಂದಾ ಸುಬ್ಬಯ್ಯ ಮಾತನಾಡಿ, ಗೊಂದಲ ಪರಿಹಾರವಾಗಬೇಕಾದರೆ ಕಾನೂನು ಬದಲಾವಣೆಯ ಅವಶ್ಯಕತೆಯಿದೆ. ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಕೃಷಿ ಮಾಡಿ ರೈತರು ಜೀವನ ಕಟ್ಟಿಕೊಂಡಿದ್ದಾರೆ. ಇದಕ್ಕೆ ಮನ್ನಣೆ ದೊರೆಯಬೇಕು. ಅರಣ್ಯ ಇಲಾಖೆ ಕೊಕ್ಕೆ ಹಾಕುವ ಪ್ರವೃತ್ತಿಯನ್ನು ಮೊದಲು ನಿಲ್ಲಿಸಬೇಕು ಎಂದರು.

ಸಮಿತಿಯಲ್ಲಿ ಶಾಸಕರಿರಬೇಕು : ಅರುಣ್ ಮಾಚಯ್ಯ

ರಾಜ್ಯ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ಸಮಿತಿಯಲ್ಲಿರುವ ಸದಸ್ಯರ ಕುರಿತು ಪೂರ್ಣ ಪ್ರಮಾಣದ ಸಂತೋಷವಿಲ್ಲ. ಶಾಸಕರನ್ನು ಸಮಿತಿಯಲ್ಲಿ ಸೇರ್ಪಡೆಗೊಳಿಸಬೇಕು. ಅಧಿಕಾರಿಗಳಿಗೆ ಚೆಂಡು ನೀಡಿರುವುದು ಸರಿಯಲ್ಲ. ಅಧಿಕಾರಿಗಳು ಹವಾ ನಿಯಂತ್ರಿತ ಕಚೇರಿಯಲ್ಲಿ ಕುಳಿತು ಸಿ-ಡಿ ಲ್ಯಾಂಡ್ ಗೊಂದಲ ಮೂಡಿಸಿದ್ದಾರೆ. ಇದರಿಂದ ಸಾಗುವಳಿದಾರರು ಸಮಸ್ಯೆಗೆ ಸಿಲುಕಿದ್ದಾರೆ. ಲ್ಯಾಂಡ್ ಬ್ಯಾಂಕ್‌ಗೆ ನೀಡಿದ ಜಾಗವನ್ನು ಹಿಂಪಡೆಯುವ ಕೆಲಸವಾಗಬೇಕು ಎಂದರು.

ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಸಂಚಾಲಕ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕಸ್ತೂರಿ ರಂಗನ್ ವರದಿ ವಿರುದ್ಧ ೨೦೧೩ರಲ್ಲಿ ಬೃಹತ್ ಹೋರಾಟ ರೂಪಿಸಲಾಗಿತ್ತು. ಇದೀಗ ಸಿ ಮತ್ತು ಡಿ ಲ್ಯಾಂಡ್ ವಿವಾದ ಏರ್ಪಟ್ಟಿದೆ. ಕೊಡಗಿನ ವಿಷಯದಲ್ಲಿ ರಾಜಕೀಯ ರಹಿತವಾಗಿ ಹೋರಾಡಬೇಕೆಂಬುದು ಸಮಿತಿಯ ಉದ್ದೇಶವಾಗಿದೆ. ಇದೀಗ ಸಮಿತಿ ರಚನೆಯಾಗಿದ್ದು, ಪರಿಹಾರದ ವಿಶ್ವಾಸ ಮೂಡಿದೆ ಎಂದರು.

ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಸಮಿತಿ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಸಿಗಬೇಕು. ಉಸ್ತುವಾರಿ ಸಚಿವರ ಜವಾಬ್ದಾರಿ ಮಹತ್ತರವಾಗಿದೆ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಹೋರಾಟ ಸಮಿತಿಯ ವಿ.ಕೆ. ಲೋಕೇಶ್, ರೈತ ಸಂಘದ ಪ್ರಮುಖರು, ಹೋರಾಟಗಾರರು, ರೈತರು ಸೇರಿದಂತೆ ಇನ್ನಿತರರು ಹಾಜರಿದ್ದರು.