ಚೆಯ್ಯಂಡಾಣೆ, ನ. ೨೧: ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಮಡಿಕೇರಿ ಝೋನ್ ಸಮಿತಿ ಆಶ್ರಯದಲ್ಲಿ ತಾ. ೨೩ ರಂದು ನಾಪೋಕ್ಲುವಿನಲ್ಲಿ ಬೃಹತ್ ಸುನ್ನಿ ಆದರ್ಶ ಸಮ್ಮೇಳನ ನಡೆಯಲಿದೆ ಎಂದು ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ ತಿಳಿಸಿದ್ದಾರೆ. ನಾಪೋಕ್ಲುವಿನ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲೆ, ಮಡಿಕೇರಿ ಝೋನ್ ಸಮಿತಿ ವತಿಯಿಂದ ನ.೨೩ರಂದು ಸಂಜೆ ೬ ಗಂಟೆಗೆ ನಾಪೋಕ್ಲು ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಬೃಹತ್ ಸುನ್ನಿ ಆದರ್ಶ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಕೇರಳದ ಪ್ರಖ್ಯಾತ ಸುನ್ನಿ ವಾಗ್ಮಿ ಅಲವಿ ಸಖಾಫಿ ಕೊಳತ್ತೂರ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಜಿಲ್ಲೆಯ ಧಾರ್ಮಿಕ ಗುರುಗಳು, ನಾಯಕರುಗಳು ಭಾಗವಹಿಸಲಿದ್ದಾರೆ ಎಂದರು.
ಆದರ್ಶ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುಲ್ಲ ಸಖಾಫಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿರುವ ಸುನ್ನಿ ಆದರ್ಶವನ್ನು ಹೊಂದಿರುವ ಕಾರ್ಯಕರ್ತರುಗಳಿಗೆ ಸುನ್ನತ್ ಜಮಾಅತ್‌ನ ತತ್ವ ಮತ್ತು ಆಶಯಗಳನ್ನು ವಿವರವಾಗಿ ತಿಳಿಸಲು ಮತ್ತು ನಾಡಿನ ಶಾಂತಿ ಮತ್ತು ಐಕ್ಯತೆಯನ್ನು ಕಾಪಾಡಲು ಬೇಕಾದ ನಿರ್ದೇಶನಗಳನ್ನು ನೀಡಲು ಏರ್ಪಡಿಸಿರುವ ಮಹತ್ವದ ಸಮ್ಮೇಳನ ಇದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಸಮಿತಿಯ ಸದಸ್ಯ ಅಬ್ದುಲ್ ರಹ್ಮಾನ್ ಹಾಜಿ, ಕರ್ನಾಟಕ ಮುಸ್ಲಿಂ ಜಮಾಅತ್ ನಾಪೋಕ್ಲು ವಲಯಾಧ್ಯಕ್ಷ ಅಬ್ದುಲ್ ಅಜೀಜ್ ಹಾಜಿ ಉಪಸ್ಥಿತರಿದ್ದರು.