ಮಡಿಕೇರಿ, ನ. ೨೧: ಜಿಲ್ಲೆಯಲ್ಲಿ ಹದಗೆಟ್ಟಿರುವ ರಸ್ತೆಗಳ ಗುಂಡಿ ಮುಚ್ಚುವ ಕೆಲಸವನ್ನು ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜು ಹಾಗೂ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್‌ಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಎನ್.ಎಸ್. ಭೋಸರಾಜು ಅಧ್ಯಕ್ಷತೆಯಲ್ಲಿ ಕೆಡಿಪಿ ತ್ರೆöÊಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ರಸ್ತೆ ದುರಸ್ತಿ ವಿಳಂಬವಾಗುತ್ತಿರುವ ಬಗ್ಗೆ ಶಾಸಕದ್ವಯರು ಅಧಿಕಾರಿಗಳನ್ನು ಪ್ರಶ್ನಿಸಿದರು. ಇಚ್ಛಾಶಕ್ತಿ ಕೊರತೆಯಿಂದ ನಿರೀಕ್ಷಿತ ಪ್ರಮಾಣದ ಕೆಲಸಗಳಾಗದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಸಚಿವ ಭೋಸರಾಜು ಮಾತನಾಡಿ, ಸರಕಾರ ಅಗತ್ಯ ಅನುದಾನವನ್ನು ನೀಡಿದೆ. ಮಳೆಗಾಲ ಮುಗಿದ ತಕ್ಷಣ ಸಮರೋಪಾದಿಯಲ್ಲಿ ಕೆಲಸ ಕೈಗೆತ್ತಿಕೊಳ್ಳಬೇಕಾಗಿತ್ತು. ಆದರೆ, ಅಧಿಕಾರಿಗಳ ವಿಳಂಬ ಧೋರಣೆಯ ಬಗ್ಗೆ ಕಿಡಿಕಾರಿದರು.

ಈ ಕುರಿತು ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಇಬ್ರಾಹಿಂ, ೨೦೨೫-೨೬ನೇ ಸಾಲಿಗೆ ಕೊಡಗು ಜಿಲ್ಲಾ ರಸ್ತೆ ನಿರ್ವಹಣೆ ಕಾಮಗಾರಿಗಳಲ್ಲಿ ರಾಜ್ಯ ಹೆದ್ದಾರಿ ರಸ್ತೆಗಳಿಗೆ ರೂ. ೭.೪೪ ಕೋಟಿ ಬಿಡುಗಡೆಯಾಗಿದ್ದು, ೪೩ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲಾ ಮುಖ್ಯ ರಸ್ತೆಗಳಿಗೆ ರೂ. ೧೪.೧೫ ಕೋಟಿ ಅನುದಾನ ಮಂಜೂರುಗೊAಡಿದೆ. ಇದರಲ್ಲಿ ೧೧೨ ಕಾಮಗಾರಿ ಮಾಡಲಾಗುವುದು. ಎಲ್ಲಾ ಕೆಲಸಗಳು ಟೆಂಡರ್ ಹಂತದಲ್ಲಿದ್ದು, ನಿರ್ವಹಣೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು.

ಪಂಚಾಯತ್‌ರಾಜ್ ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿ, ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ರೂ. ೧೯ ಕೋಟಿ ಮೊತ್ತದ ೨೩ ಅಭಿವೃದ್ಧಿ ಕಾಮಗಾರಿಗಳ ಪೈಕಿ ೨೧ ಪೂರ್ಣಗೊಳಿಸಲಾಗಿದೆ. ರೂ. ೧.೧೭ ಕೋಟಿ ವೆಚ್ಚದ ೨೧೦ ಕಾಮಗಾರಿ ಮುಗಿದಿದೆ. ಉಳಿದ ೧೫ ಕಾಮಗಾರಿಯನ್ನು ಡಿಸೆಂಬರ್‌ನೊಳಗೆ ಪೂರ್ಣಗೊಳಿಸಲಾಗುವುದು. ಮಳೆಹಾನಿ ಪರಿಹಾರ ಯೋಜನೆಯಡಿ ರೂ. ೭ ಕೋಟಿ ಹಣದಲ್ಲಿ ೬೪ ಕಾಮಗಾರಿ ಆರಂಭಿಸಲಾಗುವುದು. ಮುಖ್ಯಮಂತ್ರಿ ವಿಶೇಷ ಅನುದಾನದ ರೂ. ೧೭ ಕೋಟಿ ವೆಚ್ಚದಲ್ಲಿ ವೀರಾಜಪೇಟೆ ಕ್ಷೇತ್ರದಲ್ಲಿ ೫೬ ಕಾಮಗಾರಿ ಪೂರ್ಣಗೊಳಿಸಲಾಗಿದೆ. ರೂ. ೧೦ ಕೋಟಿ ಕಾಮಗಾರಿಯಲ್ಲಿ ರೂ. ೧.೭೦ ಕೋಟಿಯ ಕಾಮಗಾರಿ ನಡೆದಿದೆ ಎಂದು ಮಾಹಿತಿ ನೀಡಿದರು.

ಡಿಸೆಂಬರ್ ಅಂತ್ಯದೊಳಗೆ ಹದಗೆಟ್ಟ ರಸ್ತೆಗಳ ಗುಂಡಿಯನ್ನು ಮುಚ್ಚಲಾಗುವುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು. ಸಚಿವ ಭೋಸರಾಜು ಮಾತನಾಡಿ, ರಸ್ತೆ ವಿಷಯದಲ್ಲಿ ಸಬೂಬು ಹೇಳಬಾರದು. ಡಿಸೆಂಬರ್‌ನೊಳಗೆ ಕೆಲಸಗಳು ಮುಗಿಯಬೇಕು. ಜನರಿಗೆ ತೊಂದರೆ ನೀಡಬಾರದು ಎಂದು ತಾಕೀತು ಮಾಡಿದರು.

ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮಾತನಾಡಿ, ಕರಿಕೆ-ಭಾಗಮಂಡಲ ರಸ್ತೆ ಪೂರ್ಣಗೊಂಡಿಲ್ಲ. ಜನರಿಗೆ ಮಾಹಿತಿ ಕೊರತೆಯಿಂದಾಗಿ ಕಳಪೆ ಕಾಮಗಾರಿ ಎಂಬ ಆರೋಪ ಬಂದಿದೆ. ಈ ರೀತಿ ಗೊಂದಲ ಸೃಷ್ಟಿಯಾದ ತಕ್ಷಣ ಅಧಿಕಾರಿಗಳು ಜನರಿಗೆ ಮಾಹಿತಿ ತಿಳಿಸಬೇಕು. ಜೊತೆಗೆ ರಸ್ತೆ ಬದಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಫಲಕ ಅಳವಡಿಸಬೇಕೆಂದು ನಿರ್ದೇಶನ ನೀಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಗುಣಮಟ್ಟದೊಂದಿಗೆ ವೈಜ್ಞಾನಿಕವಾಗಿ ರಸ್ತೆಗುಂಡಿ ಮುಚ್ಚುವ ಕೆಲಸ ನಡೆಸಬೇಕೆಂದು ಸೂಚಿಸಿದರು. ಕ್ರೀಡಾ ಪ್ರಾಧಿಕಾರ ರಾಜ್ಯ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ಕಾಮಗಾರಿಗಳು ಕಳಪೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಸರಕಾರದ ಹಣ ಪೋಲಾಗಬಾರದು. ಜನರಿಗೂ ಸಮಸ್ಯೆ ಉಂಟಾಗಬಾರದೆAದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕೆಡಿಪಿ ಸದಸ್ಯೆ ಸುನಿತಾ ಮಾತನಾಡಿ, ಗುಡ್ಡೆಹೊಸೂರು-ನೆಲ್ಲಿಹುದಿಕೇರಿ ರಸ್ತೆ ಆರಂಭವಾಗಿ ಇದೀಗ ಸ್ಥಗಿತಗೊಂಡಿದೆ. ತಕ್ಷಣ ಆರಂಭಿಸುವAತೆ ಒತ್ತಾಯಿಸಿದರು. ಸಿದ್ದಾಪುರ ರಸ್ತೆ ಕಾಮಗಾರಿಯ ಬಗ್ಗೆ ಶಾಸಕ ಪೊನ್ನಣ್ಣ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ಕೆಲಸ ಪ್ರಗತಿಯಲ್ಲಿದ್ದು, ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲಿ ಮುಕ್ತಾಯವಾಗಲಿದೆ ಎಂದು ಭರವಸೆ ನೀಡಿದರು.

ನಾಮಕಾವಸ್ಥೆಯ ಭೂಮಿ ಪೂಜೆ ಬೇಡ

ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಕಾಮಗಾರಿ ಕೈಗೊಳ್ಳಬೇಕು. ನಾಮಕಾವಸ್ಥೆಗೆಂದು ಭೂಮಿ ಪೂಜೆಯಾಗಬಾರದೆಂದು ಮಂತರ್ ಹೇಳಿದರು. ಚಾಲನೆ ನೀಡಿದ ನಂತರ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಅಧಿಕಾರಿಗಳು ಕೆಲಸ ಮಾಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಭೂಮಿಪೂಜೆ ಮಾಡಿ ಉಪ್ಪಿಟ್ಟು, ಕೇಸರಿ ಬಾತ್ ನೀಡಿ ಕಳುಹಿಸಿದರೆ ಪ್ರಯೋಜನವಿಲ್ಲ ಎಂದು ವ್ಯಂಗ್ಯವಾಡಿದರು.

ರಸಗೊಬ್ಬರ ದಾಸ್ತಾನು - ಮಾರ್ಚ್ನಲ್ಲಿ ಕ್ರಿಟಿಕಲ್ ಕೇರ್ ಸೆಂಟರ್

ಅಗತ್ಯ ರಸಗೊಬ್ಬರವನ್ನು ದಾಸ್ತಾನು ಇಡಲಾಗಿದೆ. ಅದನ್ನು ಪೂರೈಸಲು ಕ್ರಮಕೈಗೊಳ್ಳಲಾಗಿದೆ. ಕೇರಳಕ್ಕೆ ಅಕ್ರಮ ಸಾಗಾಟ ತಡೆಯಲು ಚೆಕ್ ಪೋಸ್ಟ್ನಲ್ಲಿ ನಿಗಾ ಇಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಮಾಹಿತಿ ನೀಡಿದರು. ನಾಪೋಕು ್ಲಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸಲಾಗಿದೆ. ಅಗತ್ಯ ಔಷಧಿಗಳ ಪೂರೈಕೆಯಾಗುತ್ತಿದೆ. ಆಸ್ಪತ್ರೆಗಳಲ್ಲಿ ಔಷಧ ದಾಸ್ತಾನಿನ ಕುರಿತು ಆನ್‌ಲೈನ್ ಮೂಲಕ ಮಾಹಿತಿ ಪಡೆಯಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದರು. ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಕಂಡು ಬರುತ್ತಿದೆ ಎಂದು ಕೆಡಿಪಿ ಸದಸ್ಯ ಸುರೇಶ್ ಹನಗೋಡು ಆರೋಪಿಸಿದರು.

ಜಿಲ್ಲಾಸ್ಪತ್ರೆ ಡೀನ್ ಡಾ. ಲೋಕೇಶ್ ಮಾತನಾಡಿ, ಕ್ರಿಟಿಕಲ್ ಕೇರ್ ಯೂನಿಟ್ ಮಾರ್ಚ್ ವೇಳೆಯಲ್ಲಿ ಪೂರ್ಣಗೊಳ್ಳುತ್ತದೆ ಎಂದರು. ಕಾಮಗಾರಿ ವಿಳಂಬವಾಗಬಾರದು. ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ಸಚಿವ ಭೋಸರಾಜು ತಾಕೀತು ಮಾಡಿದರು.

ಶಾಲಾ ಕಟ್ಟಡ ದುರಸ್ತಿಗೆ ಕ್ರಿಯಾಯೋಜನೆ

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು ಮಾತನಾಡಿ, ೨೫೭ ಶಾಲೆಗಳ ಕಟ್ಟಡ, ಕೊಠಡಿ ಹಾನಿ ಕುರಿತು ವರದಿ ತಯಾರಿಸಿದ್ದು, ರೂ. ೪ ಕೋಟಿಗೆ ಅಂದಾಜು ಮೊತ್ತದ ಕ್ರಿಯಾಯೋಜನೆ ತಯಾರಿಸಿ ನೀಡಲಾಗಿದೆ. ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲಾಗಿದೆ. ೧೦೯ ಪ್ರೌಢ, ೨೭೫ ಪ್ರಾಥಮಿಕ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ೨೫ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆ ಮುಚ್ಚಬೇಕೆಂಬ ನಿಯಮವನ್ನು ಸಡಿಲಗೊಳಿಸಿ ಕೊಡಗಿಗೆ ವಿನಾಯಿತಿ ನೀಡುವಂತೆ ಆಯುಕ್ತರಿಗೆ ಪತ್ರ ವ್ಯವಹಾರ ಮಾಡಲಾಗಿದೆ ಎಂದರು.

ಮಳೆ ರಜೆಯಿಂದ ಪಾಠ ಪ್ರವಚನ ಪೂರ್ಣಗೊಳಿಸಲು ಸಮಸ್ಯೆಯಾಗಿದೆಯೇ ಎಂದು ಶಾಸಕ ಮಂತರ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಶನಿವಾರ ಪೂರ್ಣ ತರಗತಿ, ದಿನನಿತ್ಯ ಹೆಚ್ಚುವರಿ ತರಗತಿಯನ್ನು ಮಾಡಿ ಪಾಠ ಪೂರ್ಣಗೊಳಿಸಲಾಗುತ್ತದೆ ಎಂದರು.

ಮಾಯುಮುಡಿಯ ಧನುಗಾಲ ಶಾಲೆಯಲ್ಲಿ ತರಗತಿ ಕೊರತೆ ಇದೆ. ಇಡೀ ಶಾಲೆಗೆ ಒಬ್ಬರೇ ಶಿಕ್ಷಕರಿದ್ದಾರೆ ಎಂದು ರಾಜ್ಯ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಗಮನ ಸೆಳೆದರು. ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಯನ್ನು ಒಟ್ಟುಗೂಡಿಸಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಪರಿವರ್ತಿಸುವ ಚಿಂತನೆ ಇದೆ ಎಂದು ಅಧಿಕಾರಿ ಹೇಳಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಹಾಜರಿದ್ದರು.

ಕಾಫಿ ಟೇಬಲ್ ಪುಸ್ತಕ ಬಿಡುಗಡೆ

ಕೊಡಗು ಜಿಲ್ಲೆಯ ಕಲೆ, ಕ್ರೀಡೆ, ಸಂಸ್ಕೃತಿ, ಖಾದ್ಯ, ಕೊಡಗಿನ ದಿನಚರಿ, ಧೈವಿಕತೆ, ಅರಣ್ಯ, ಪ್ರವಾಸಿ ಸ್ಥಳ, ಧಾರ್ಮಿಕ ಸ್ಥಳ, ಪ್ರವಾಸೋದ್ಯಮ ಮತ್ತು ಸಾಹಸೋದ್ಯಮ, ಬೆಳೆ ಹಾಗೂ ಇತರೆ ಎಲ್ಲಾ ವಿಷಯಗಳ ಸಮಗ್ರ ಮಾಹಿತಿಯನ್ನೊಳಗೊಂಡ ೧೬೦ ಪುಟಗಳ ಕನ್ನಡ ಹಾಗೂ ಆಂಗ್ಲ ಭಾಷೆಯ ಕಾಫಿ ಟೇಬಲ್ ಪುಸ್ತಕವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಇದೇ ಸಂದರ್ಭ ಬಿಡುಗಡೆ ಮಾಡಿದರು.